ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಅಲಭ್ಯರಾಗಿದ್ದಾರೆ. ಇದು ಟೀಂ ಇಂಡಿಯಾ ಪಾಲಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಯಾರು ಆ ಆಟಗಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ಮುಂಬೈ[ಫೆ.01]: ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಚಾಂಪಿಯನ್’ಶಿಪ್ ಟೂರ್ನಿಯಿಂದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊರಬಿದ್ದಿದ್ದಾರೆ. ಇದು ವಿರಾಟ್ ಪಡೆಗೆ ಅಲ್ಪ ಹಿನ್ನಡೆಯನ್ನುಂಟು ಮಾಡುವ ಸಾಧ್ಯತೆಯಿದೆ.
ಟೀಂ ಇಂಡಿಯಾದ ಒಬ್ಬ ಆಟಗಾರನಿಗಾಗಿ ರೂಲ್ಸ್ ಬದಲಿಸಿದ ಬಿಸಿಸಿಐ.?
ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊರಬಿದ್ದಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಪಾಂಡ್ಯ, ಫಿಟ್ನೆಸ್ ಗಳಿಸಲು ನ್ಯಾಶನಲ್ ಕ್ರಿಕೆಟ್ ಅಕೆಡಮಿಯಲ್ಲಿ ಪುನಾಶ್ಚೇತನ ಶಿಬಿರದಲ್ಲಿ ಪಾಂಡ್ಯ ಪಾಲ್ಗೊಳ್ಳಲಿದ್ದಾರೆ ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮೊದಲು ಹಾರ್ದಿಕ್ ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತ ’ಎ’ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಮುಂಬೈನಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಹೀಗಾಗಿ ಕಿವೀಸ್ ಪ್ರವಾಸದಿಂದಲೂ ಹೊರಗುಳಿದಿದ್ದರು. ಟಿ20 ವಿಶ್ವಕಪ್ ಆರಂಭಕ್ಕೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಕಂಡುಕೊಳ್ಳದೇ ಇರುವುದು ನಾಯಕ ವಿರಾಟ್ ಕೊಹ್ಲಿ ತಲೆನೋವು ಹೆಚ್ಚಿಸಿದೆ. ಪಾಂಡ್ಯ ಅನುಪಸ್ಥಿತಿಯಲ್ಲಿ ಶಿವಂ ದುಬೆ ಹಾಗೂ ವಾಷಿಂಗ್ಟನ್ ಸುಂದರ್’ಗೆ ಸಾಕಷ್ಟು ಅವಕಾಶ ನೀಡಲಾಗುತ್ತಿದೆಯಾದರೂ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯ ಆದಷ್ಟು ಬೇಗ ಫಿಟ್ ಆಗುವುದು ತಂಡದ ಪಾಲಿಗೆ ಅನಿವಾರ್ಯ ಎನಿಸಿದೆ.
ಭಾರತ ‘ಎ’ ತಂಡದಲ್ಲಿ ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾಗೆ ಸ್ಥಾನ
ಭಾರತ ತಂಡವು ನ್ಯೂಜಿಲೆಂಡ್ ಎದುರು 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಫೆಬ್ರವರಿ 21ರಂದು ವೆಲ್ಲಿಂಗ್ಟನ್’ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಪ್ರಸ್ತುತ ಟೀಂ ಇಂಡಿಯಾ ಕಿವೀಸ್ ಎದುರು 5 ಪಂದ್ಯಗಳ ಟಿ20 ಸರಣಿ ಆಡುತ್ತಿದ್ದು, 4-0 ಅಂತರದ ಮುನ್ನಡೆ ಸಾಧಿಸಿದೆ. ಕೊನೆಯ ಟಿ20 ಪಂದ್ಯ ಫೆಬ್ರವರಿ 02ರಂದು ನಡೆಯಲಿದೆ.
ಇನ್ನು ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಮೊದಲ ಏಕದಿನ ಪಂದ್ಯ ಫೆಬ್ರವರಿ 05ರಂದು ಆರಂಭವಾಗಲಿದೆ.