ಅಹಮದಾಬಾದ್‌ ಟೆಸ್ಟ್‌ಗೆ ಸಾಕ್ಷಿಯಾದ ಪ್ರಧಾನಿ ಮೋದಿ, ಆಸೀಸ್ ಪ್ರಧಾನಿ ಆಂಥೋನಿ! ಕ್ರಿಕೆಟ್‌ನ ಐತಿಹಾಸಿಕ ಕ್ಷಣ

Published : Mar 09, 2023, 09:52 AM ISTUpdated : Mar 09, 2023, 09:59 AM IST
ಅಹಮದಾಬಾದ್‌ ಟೆಸ್ಟ್‌ಗೆ ಸಾಕ್ಷಿಯಾದ ಪ್ರಧಾನಿ ಮೋದಿ, ಆಸೀಸ್ ಪ್ರಧಾನಿ ಆಂಥೋನಿ! ಕ್ರಿಕೆಟ್‌ನ ಐತಿಹಾಸಿಕ ಕ್ಷಣ

ಸಾರಾಂಶ

* ಭಾರತ-ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್‌ಗೆ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ * ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ ವೀಕ್ಷಿಸುತ್ತಿರುವ ಮೋದಿ, ಆಂಥೋನಿ * ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಆಯ್ಕೆ

ಅಹಮದಾಬಾದ್‌(ಮಾ.09): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಜಗತ್ತಿನ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಎನಿಸಿಕೊಂಡಿರುವ ಮೊಟೇರಾದಲ್ಲಿನ ಪಂದ್ಯಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಆಲ್ಬನೀಸ್‌ ಸಾಕ್ಷಿಯಾಗಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂಗೆ ಮರುನಾಮಕರಣ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ, ಮೈದಾನಕ್ಕಾಗಮಿಸಿ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ.

ಮೈದಾನಕ್ಕಾಗಮಿಸಿದ ಪ್ರಧಾನಿ ನರೇಂದ್ರ ಮೋದಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಆದರಪೂರ್ವಕವಾಗಿ ಸ್ವಾಗತಿಸಿದರು. ಇನ್ನು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಆಲ್ಬನೀಸ್‌ಗೆ ಬಿಸಿಸಿಐ ಅಧ್ಯಕ್ಷ ಜಯ್‌ ಶಾ ಪುಷ್ಪಗುಚ್ಚ ನೀಡುವ ಮೂಲಕ ಸ್ವಾಗತಿಸಿದರು. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಆಸೀಸ್‌ ನಾಯಕ ಸ್ಟೀವ್ ಸ್ಮಿತ್ ತಮ್ಮ ದೇಶದ ಪ್ರಧಾನಿಗಳಿಂದ ವಿಶೇಷ ಟೆಸ್ಟ್‌ ಕ್ಯಾಪ್‌ ಪಡೆದುಕೊಂಡರು. 

ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಂಥೋನಿ ಆಲ್ಬನೀಸ್‌ ಅವರು ವಿಶೇಷವಾಗಿ ತಯಾರಿಸಲಾಗಿದ್ದ ರಥದಲ್ಲಿ ಒಂದು ಸುತ್ತು ಮೈದಾನವನ್ನು ಸುತ್ತುಹಾಕಿ ಅಭಿಮಾನಿಗಳತ್ತ ಕೈಬೀಸಿ ಗೌರವ ವಂದನೆ ಸ್ವೀಕರಿಸಿದರು. ಇನ್ನು ನರೇಂದ್ರ ಮೋದಿ ಹಾಗೂ ಆಂಥೋನಿ ಆಲ್ಬನೀಸ್‌ಗೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 75 ವರ್ಷಗಳ ಕೆಲವು ಅವಿಸ್ಮರಣೀಯ ಕ್ಷಣಗಳನ್ನೊಳಗೊಂಡ ಫೋಟೋಗಳನ್ನು ಖ್ಯಾತ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಪರಿಚಯಿಸಿದರು. 

Ahmedabad Test: ಭಾರತ ಎದುರು ಟಾಸ್ ಗೆದ್ದ ಆಸೀಸ್‌ ಬ್ಯಾಟಿಂಗ್ ಆಯ್ಕೆ, ಒಂದು ಮಹತ್ವದ ಬದಲಾವಣೆ..!

ಇನ್ನು ನರೇಂದ್ರ ಮೋದಿ ಹಾಗೂ ಆಂಥೋನಿ ಆಲ್ಬನೀಸ್‌ ಮೈದಾನ ಪ್ರವೇಶಿಸಿ ಪಂದ್ಯ ಆರಂಭಕ್ಕೂ ಮುನ್ನ ಆಟಗಾರರ ಜತೆ ಸಾಲಾಗಿ ನಿಂತು ರಾಷ್ಟ್ರಗೀತೆ ಹಾಡುವ ಮೂಲಕ ಪಂದ್ಯಕ್ಕೆ ಅಧಿಕೃತ ಚಾಲನೆ ನೀಡಿದರು.

4 ದಿನಗಳ ಪ್ರವಾಸ ಕೈಗೊಂಡಿರುವ ಆಸೀಸ್ ಪ್ರಧಾನಿ: ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಆಲ್ಬನೀಸ್‌, ಭಾರತಕ್ಕೆ 4 ದಿನಗಳ ಭಾರತ ಪ್ರವಾಸವನ್ನು ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಆಸೀಸ್ ಪ್ರಧಾನಿಗೆ ಅಹಮದಾಬಾದ್‌ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಆಹ್ವಾನ ನೀಡಿದ್ದರು. ಆಸೀಸ್ ಪ್ರಧಾನಿ ಕೆಲಕಾಲ ಪಂದ್ಯವೀಕ್ಷಿಸಿ, ನಂತರ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ

ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ ಆಯ್ಕೆ:

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ  ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಭಾರತ ತಂಡವು 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 2-1 ರ ಮುನ್ನಡೆ ಸಾಧಿಸಿದೆ. 

ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ವೇಗಿ ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಲಾಗಿದ್ದು, ಅನುಭವಿ ವೇಗಿ ಮೊಹಮ್ಮದ್ ಶಮಿ ತಂಡ ಕೂಡಿಕೊಂಡಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ತಂಡಗಳು ಹೀಗಿವೆ ನೋಡಿ

ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ರವೀಂದ್ರ ಜಡೇಜಾ, ಕೆ ಎಸ್ ಭರತ್, ರವಿಚಂದ್ರನ್ ಅಶ್ವಿನ್‌, ಅಕ್ಷರ್‌ ಪಟೇಲ್, ಮೊಹಮದ್‌ ಶಮಿ, ಉಮೇ​ಶ್‌ ಯಾದವ್.

ಆಸ್ಪ್ರೇಲಿಯಾ: ಉಸ್ಮಾನ್ ಖವಾಜ, ಟ್ರಾವಿಸ್ ಹೆಡ್‌, ಮಾರ್ನಸ್ ಲಬುಶೇನ್‌, ಸ್ಟೀವ್ ಸ್ಮಿತ್‌(ನಾ​ಯ​ಕ​), ಪೀಟರ್ ಹ್ಯಾಂಡ್ಸ್‌ಕಂಬ್‌, ಕ್ಯಾಮರೋನ್ ಗ್ರೀನ್‌, ಅಲೆಕ್ಸ್ ಕೇರ್ರಿ, ಮಿಚೆಲ್‌ ಸ್ಟಾರ್ಕ್, ನೇಥನ್ ಲಯನ್‌, ಟೋಡ್‌ ಮರ್ಫಿ, ಮ್ಯಾಥ್ಯೂ ಕುಹ್ನೆ​ಮಾನ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ