ನಾಗರಿಕರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ ಸೂಚಿಸಲು ಮತ್ತು ಬೂಸ್ಟರ್ ಡೋಸ್ (3ನೇ ಡೋಸ್) ಪಡೆಯದೇ ಇದ್ದವರು ಪಡೆದುಕೊಳ್ಳುವಂತೆ ಸಲಹೆ ನೀಡಲು ರಾಜ್ಯಗಳಿಗೆ ಸೂಚಿಸಿದ ಕೇಂದ್ರ ಸರ್ಕಾರ.
ನವದೆಹಲಿ(ಡಿ.22): ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಕೋವಿಡ್ ಪ್ರಕರಣಗಳಲ್ಲಿ ದಿಢೀರ್ ಏರಿಕೆಯಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಬುಧವಾರ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿ ದೇಶದಲ್ಲಿ ಕೋವಿಡ್ ಪರಿಸ್ಥಿತಿಯ ಪರಾಮರ್ಶೆ ನಡೆಸಿದೆ. ಈ ಸಭೆಯಲ್ಲಿ ನಾಗರಿಕರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ ಸೂಚಿಸಲು ಮತ್ತು ಬೂಸ್ಟರ್ ಡೋಸ್ (3ನೇ ಡೋಸ್) ಪಡೆಯದೇ ಇದ್ದವರು ಪಡೆದುಕೊಳ್ಳುವಂತೆ ಸಲಹೆ ನೀಡಲು ರಾಜ್ಯಗಳಿಗೆ ಸೂಚಿಸಿದೆ. ಜೊತೆಗೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ರಾರಯಂಡಮ್ ಟೆಸ್ಟ್ ನಡೆಸಲೂ ಸರ್ಕಾರ ನಿರ್ಧರಿಸಿದೆ. ಅಲ್ಲದೆ ಕೋವಿಡ್ ವಿಷಯದಲ್ಲಿ ತೀವ್ರ ಕಟ್ಟೆಚ್ಚರಕ್ಕೆ ಮತ್ತು ಪ್ರಕರಣಗಳ ಮೇಲೆ ಕಣ್ಗಾವಲನ್ನು ಇನ್ನಷ್ಟುಬಿಗಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಅಮೆರಿಕ, ಜಪಾನ್, ಕೊರಿಯಾ, ಬ್ರೆಜಿಸಲ್, ಚೀನಾ ಸೇರಿದಂತೆ ಕೆಲ ದೇಶಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ದಿಢೀರ್ ಏರಿಕೆ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರ ಜಿನೋಮ್ ಸೀಕ್ವೆನ್ಸಿಂಗ್ ಅನ್ನು ಹೆಚ್ಚಿಸುವಂತೆ ಮಂಗಳವಾರಷ್ಟೇ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಮನವಿ ಮಾಡಿತ್ತು. ಈ ಮೂಲಕ ಹೊಸದಾಗಿ ಕಾಣಿಸಿಕೊಳ್ಳಬಹುದಾದ ರೂಪಾಂತರಿಗಳ ಮೇಲೆ ತೀವ್ರ ನಿಗಾಕ್ಕೆ ಸಲಹೆ ನೀಡಿತ್ತು. ಅದರ ಬೆನ್ನಲ್ಲೇ ಈ ಸಭೆ ನಡೆಸಲಾಗಿದೆ. ಜೊತೆಗೆ ದೇಶದಲ್ಲಿನ ಪರಿಸ್ಥಿತಿ ಪರಾಮರ್ಶೆಗೆ ಮುಂದಿನ ವಾರ ಇನ್ನೊಂದು ಸುತ್ತಿನಲ್ಲಿ ಸಭೆ ನಡೆಸಲೂ ನಿರ್ಧರಿಸಿದೆ.
undefined
ಭಾರತದಲ್ಲಿ ಕೋವಿಡ್ ತೀವ್ರ ಇಳಿಮುಖ..!
ಆರೋಗ್ಯ ಸಚಿವಾಲಯ, ಐಸಿಎಂಆರ್, ಔಷಧ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು, ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್, ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಮುಖ್ಯಸ್ಥ ಡಾ.ಎನ್.ಕೆ.ಅರೋರಾ ಸೇರಿದಂತೆ ಹಲವು ತಜ್ಞರ ಜೊತೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ‘ದೇಶದಲ್ಲಿ ಪ್ರಸಕ್ತ ಕೋವಿಡ್ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಜೊತೆಗೆ ಮುಂದೆ ಎದುರಾಗಬಹುದಾದ ಯಾವುದೇ ಸನ್ನಿವೇಶ ಎದುರಿಸಲು ಸನ್ನದ್ಧರಾಗಿರುವಂತೆ, ಪ್ರಕರಣಗಳ ಮೇಲಿನ ನಿಗಾವನ್ನು ಇನ್ನಷ್ಟುಬಲಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯ ಬಳಿಕ ಟ್ವೀಟ್ ಮಾಡಿರುವ ಮಾಂಡವೀಯ ‘ಕೋವಿಡ್ ಇನ್ನೂ ಅಂತ್ಯವಾಗಿಲ್ಲ. ಹೀಗಾಗಿ ಎಲ್ಲಾ ಸಂಬಂಧಪಟ್ಟವರಿಗೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸನ್ನದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.
ಇನ್ನು ಸಭೆಯ ಬಳಿಕ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ‘ದೇಶದಲ್ಲಿ ಕೇವಲ 27-28ರಷ್ಟು ಜನರು ಮಾತ್ರವೇ ಕೋವಿಡ್ ಬೂಸ್ಟರ್ ಪಡೆದುಕೊಂಡಿದ್ದಾರೆ. ಹೀಗಾಗಿ ಲಸಿಕೆ ಪಡೆಯದೇ ಇದ್ದವರು ಬೂಸ್ಟರ್ ಡೋಸ್ ಪಡೆಯಬೇಕು. ಜೊತೆಗೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಸೂಕ್ತ. ಅದರಲ್ಲೂ ವಿಶೇಷವಾಗಿ ಇತರೆ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಇಂಥ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಆದರೆ ಸದ್ಯಕ್ಕೆ ಜನತೆ ಆತಂಕ ಪಡಬೇಕಾದ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ 20 ಮಂದಿಗೆ ಕೋವಿಡ್ ಸೋಂಕು, 147 ಚೇತರಿಕೆ
ಭಾರತದಲ್ಲಿ ಕಳೆದೊಂದು ವರ್ಷದಿಂದಲೂ ಕೋವಿಡ್ ಸೋಂಕು ಮತ್ತು ಸಾವಿನ ಪ್ರಮಾಣ ಹಂತಹಂತವಾಗಿ ಇಳಿಕೆಯಾಗುತ್ತಲೇ ಇದ್ದು, ಕಳೆದ ಒಂದು ವಾರದಲ್ಲಿ ಕೇವಲ 1000ದ ಆಸುಪಾಸು ಹೊಸ ಕೇಸು ಮತ್ತು 20ರ ಆಸುಪಾಸಿನಲ್ಲಿ ಸಾವು ದಾಖಲಾಗಿದೆ. ಆದರೆ ಜಾಗತಿಕ ಮಟ್ಟದಲ್ಲಿ ಡಿ.21ಕ್ಕೆ ಕೊನೆಗೊಂಡ ವಾರದಲ್ಲಿ 35 ಲಕ್ಷ ಹೊಸ ಕೇಸು, 10000 ಸಾವು ದಾಖಲಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಏನು ಸೂಚನೆ?
- ಸಾರ್ವಜನಿಕ ಸ್ಥಳಗಳಲ್ಲಿ ಮಾಸ್‌್ಕ ಧರಿಸಬೇಕು, ಸಾಮಾಜಿಕ ಅಂತರ ಪಾಲಿಸಬೇಕು
- ಲಸಿಕೆ ಪಡೆಯದವರು ಬೇಗ ಮೊದಲ ಹಾಗೂ 2ನೇ ಡೋಸ್ ಲಸಿಕೆ ಪಡೆಯಬೇಕು
- 2ನೇ ಡೋಸ್ ಲಸಿಕೆ ಪಡೆದವರು ಬೇಗ ಬೂಸ್ಟರ್ ಡೋಸ್ ಪಡೆಯಬೇಕು
- ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಏರ್‌ಪೋರ್ಟಲ್ಲಿ ರಾರಯಂಡಮ್ ಟೆಸ್ಟ್ ಮಾಡಬೇಕು
- ಔಷಧ ಕಂಪನಿಗಳು, ಆಸ್ಪತ್ರೆಗಳು ಕೋವಿಡ್ ಔಷಧಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಬೇಕು
- ಪೂರ್ವರೋಗಪೀಡಿತರು ಸೋಂಕಿನ ಬಗ್ಗೆ ಎಚ್ಚರ ವಹಿಸಬೇಕು
- ಜೀನೋಮ್ ಸೀಕ್ವೆನ್ಸಿಂಗ್ ಅನ್ನು ರಾಜ್ಯ ಸರ್ಕಾರಗಳು ಹೆಚ್ಚಿಸಬೇಕು