ಬೂಸ್ಟರ್‌ ಡೋಸ್‌ ಲಸಿಕೆ ಫ್ರೀ ಕೊಟ್ರೂ ಶೇ.91 ಜನ ಪಡೆದಿಲ್ಲ..!

By Kannadaprabha News  |  First Published Sep 30, 2022, 1:30 AM IST

18-59ನೇ ವಯಸ್ಸಿನವರಿಗೆ 3ನೇ ಡೋಸ್‌ ಉಚಿತ ಲಸಿಕೆ ಅಭಿಯಾನಕ್ಕೆ ಇಂದು ತೆರೆ, ಲಸಿಕೆ ಬೇಕೆಂದರೆ ಖಾಸಗಿ ಆಸ್ಪತ್ರೆಗಳಲ್ಲಿ 250 ರು. ತೆತ್ತು ಹಾಕಿಸಿಕೊಳ್ಳಬೇಕು 


ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಸೆ.30):  ವಯಸ್ಕರು (18-59 ವರ್ಷದವರು) ಕೊರೋನಾ ಲಸಿಕೆಯ ಮೂರನೇ ಡೋಸ್‌ ಅನ್ನು ಉಚಿತವಾಗಿ ಪಡೆಯಲು ಶುಕ್ರವಾರವೇ (ಸೆ.30) ಕಡೆಯ ದಿನ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ಕೇಂದ್ರ ಸರ್ಕಾರ ಕಳೆದ 75 ದಿನಗಳಿಂದ ವಯಸ್ಕರಿಗೆ ಉಚಿತವಾಗಿ ಮೂರನೇ ಡೋಸ್‌ ನೀಡಿದರೂ ರಾಜ್ಯದಲ್ಲಿ ಅರ್ಹರ ಪೈಕಿ ಶೇ.91ರಷ್ಟು ಮಂದಿ ಲಸಿಕೆಯನ್ನೇ ಪಡೆದಿಲ್ಲ. ಅ.1ರಿಂದ ವಯಸ್ಕರ ಮೂರನೇ ಡೋಸ್‌ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಗಿತವಾಗಿ ಖಾಸಗಿ ಆಸ್ಪತ್ರೆಗೆ ಸೀಮಿತವಾಗುತ್ತಿದ್ದು, ಇನ್ನು ಮುಂದೆ ಪಡೆಯಲಿಚ್ಛಿಸುವವರು ಕಡ್ಡಾಯವಾಗಿ 250 ರಿಂದ 300 ರು. ಶುಲ್ಕ ನೀಡಬೇಕಿದೆ. ಉಚಿತ ಅಭಿಯಾನದಲ್ಲಿ 35.2 ಲಕ್ಷ ವಯಸ್ಕರು ಲಸಿಕೆ ಪಡೆದಿದ್ದು, 3.52 ಕೋಟಿ ಮಂದಿ ಬಾಕಿ ಉಳಿದಿದ್ದಾರೆ. ಈ ಮೂಲಕ ಸಾರ್ವಜನಿಕರು ಉಚಿತವಾಗಿ ನೀಡಿದರೂ ಮೂರನೇ ಡೋಸ್‌ ಬೇಡ ಎನ್ನುತ್ತಿರುವುದು ಸ್ಪಷ್ಟವಾಗಿದೆ.

Tap to resize

Latest Videos

undefined

ಏಪ್ರಿಲ್‌ 10ರಿಂದ ಕೇಂದ್ರ ಸರ್ಕಾರವು ಹಿರಿಯ ನಾಗರಿಕರು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಉಚಿತವಾಗಿ ಮೂರನೇ ಡೋಸ್‌ ಲಸಿಕೆ ನೀಡುತ್ತಿತ್ತು. ವಯಸ್ಕರೆಲ್ಲರೂ ಶುಲ್ಕ ಪಾವತಿಸಬೇಕಿತ್ತು. ಆದರೆ, ಹಣ ಕೊಟ್ಟು ಲಸಿಕೆ ಪಡೆಯಲು ಜನರು ಮುಂದೆ ಬಾರದ ಹಿನ್ನೆಲೆಯಲ್ಲಿ ದೇಶದ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಅಂಗವಾಗಿ ಜೂನ್‌ 15ರಿಂದ ಸೆಪ್ಟೆಂಬರ್‌ 30ರವರೆಗೆ 75 ದಿನಗಳು ಉಚಿತವಾಗಿ ಮೂರನೇ ಡೋಸ್‌ ನೀಡುವುದಾಗಿ ಸರ್ಕಾರ ಘೋಷಿಸಿತು. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿಯೂ ಲಸಿಕೆ ಅಭಿಯಾನ ಆರಂಭಿಸಿತು. ಆರಂಭದಲ್ಲಿ ಜನ ಲಸಿಕೆ ಕೇಂದ್ರದತ್ತ ಸಾಗಿದರೂ ಆ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ತೋರಲಿಲ್ಲ. ಸದ್ಯ ರಾಜ್ಯದಲ್ಲಿ ಹಿರಿಯ ನಾಗರಿಕರು ಸೇರಿದಂತೆ 18 ವರ್ಷ ಮೇಲ್ಪಟ್ಟವರಲ್ಲಿ 4.57 ಕೋಟಿ ಮಂದಿ ಮೂರನೇ ಡೋಸ್‌ಗೆ ಅರ್ಹರಿದ್ದರೂ 86.4 ಲಕ್ಷ (ಶೇ.19ರಷ್ಟು) ಮಂದಿ ಮಾತ್ರ ಮೂರನೇ ಡೋಸ್‌ ಪಡೆದಿದ್ದರೆ, ಬರೋಬ್ಬರಿ 3.7 ಕೋಟಿಯಷ್ಟುಮಂದಿ ದೂರ ಉಳಿದಿದ್ದಾರೆ.

Covid-19: ಕೋವಿಶೀಲ್ಡ್ ಲಸಿಕೆಯಿಂದ ಪುರುಷತ್ವಕ್ಕೆ ಹಾನಿ ಇದೆಯಾ?

ಕಾರಣಗಳೇನು?

*ಕೊರೋನಾ ಸೋಂಕು ತಗ್ಗಿದ್ದು, ಜನರ ನಿರ್ಲಕ್ಷ್ಯ
*ಮೂರನೇ ಡೋಸ್‌ ಕುರಿತು ಹಲವರಲ್ಲಿರುವ ತಪ್ಪು ಕಲ್ಪನೆ
*ಹೆಚ್ಚಿನ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಲಸಿಕೆ ಲಭ್ಯವಿಲ್ಲದಿರುವುದು
*ಸ್ವಾತಂತ್ರ್ಯದ ಅಮೃತ ಮಹೋತ್ಸವ ಉಚಿತ ಲಸಿಕೆ ಅಭಿಯಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸದಿರುವುದು

ಸ್ಟಾಕ್‌ ಇಲ್ಲ, ಹೊಸ ದಾಸ್ತಾನು ತರಿಸಲ್ಲ: ಖಾಸಗಿ ಆಸ್ಪತ್ರೆಗಳು

ಉಚಿತ ಮೂರನೇ ಡೋಸ್‌ಗೂ ಮೊದಲು ವಯಸ್ಕರಿಗೆ ಶುಲ್ಕ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಆವಕಾಶ ನೀಡಲಾಗಿತ್ತು. ಇದರಿಂದ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ದಾಸ್ತಾನು ಖರೀದಿಸಿದ್ದರು. ಆ ಬಳಿಕ ಸರ್ಕಾರವೇ ಉಚಿತ ಲಸಿಕೆ ನೀಡಲು ನಿರ್ಧರಿಸಿತು. ಹೀಗಾಗಿ, ಖಾಸಗಿ ಆಸ್ಪತ್ರೆಗಳು ಸಾಕಷ್ಟು ದಾಸ್ತಾನು ಉಳಿಸಿಕೊಂಡು ನಷ್ಟಕ್ಕೀಡಾದವು. ಈಗಾಗಲೇ ದಾಸ್ತಾನು ತರಿಸಿ ಕೈಸುಟ್ಟುಕೊಂಡಿರುವ ಖಾಸಗಿ ಆಸ್ಪತ್ರೆಗಳು ಮತ್ತೆ ಮೂರನೇ ಡೋಸ್‌ಗೆ ಶಿಬಿರ ಆಯೋಜಿಸಲು ಹಿಂದೇಟು ಹಾಕಿವೆ.

Covid-19: ಶೇ.75 ರಷ್ಟು ಮಕ್ಕಳಲ್ಲಿ ಕೊರೋನಾ ಪ್ರತಿಕಾಯ: ಲಸಿಕೆ ಪಡೆಯದಿದ್ದರೂ ರೋಗ ನಿರೋಧಕ ಶಕ್ತಿ

‘ಈಗಾಗಲೇ ಲಸಿಕೆಯಿಂದ ನಷ್ಟಕ್ಕೀಡಾಗಿದ್ದು, ಇರುವ ದಾಸ್ತಾನು ಖಾಲಿ ಮಾಡಿಕೊಳ್ಳುತ್ತೇವೆ. ಹೆಚ್ಚಿನ ಖಾಸಗಿ ಆಸ್ಪತ್ರೆಗಳಲ್ಲಿ ದಾಸ್ತಾನು ಇಲ್ಲ. ಹೀಗಾಗಿ, ಕೊರೋನಾ ಲಸಿಕೆ ಮೂರನೇ ಡೋಸ್‌ ಸಿಗುವುದು ಅನುಮಾನ’ ಎಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂ ಅಸೋಸಿಯೇಷನ್‌ (ಫನಾ) ಅಧ್ಯಕ್ಷ ಪ್ರಸನ್ನ ತಿಳಿಸಿದ್ದಾರೆ.

60 ವರ್ಷ ಮೇಲ್ಪಟ್ಟವರಿಗೆ ಉಚಿತವಿದೆ

ವಯಸ್ಕರಿಗೆ ಉಚಿತ ಮೂರನೇ ಡೋಸ್‌ ಅಭಿಯಾನ ಮುಕ್ತಾಯವಾಗುತ್ತಿದ್ದು, ಈ ಹಿಂದಿನಂತೆ 60 ವರ್ಷ ಮೇಲ್ಪಟ್ಟವರು, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಉಚಿತ ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರಲಿದೆ.
 

click me!