ಕೊರೋನಾತಂಕ: ಗದಗ ಜಿಲ್ಲೆಯಲ್ಲಿ ಸಿದ್ಧವಿದೆ 80 ಐಸೋಲೇಶನ್‌ ಬೆಡ್

By Kannadaprabha News  |  First Published Dec 22, 2023, 10:00 PM IST

ಕೋವಿಡ್ ಹೊಸ ರೂಪಾಂತರಿ ಜೆಎನ್ 1 ತಳಿ ಕಾಣಿಸಿಕೊಂಡಿರುವುದು ಮತ್ತು ಪಕ್ಕದ ಕೇರಳ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವಲ್ಲಿ ಗದಗ ಜಿಲ್ಲೆ ಪ್ರಮುಖ ಮಾರ್ಗವಾಗಿರುವ ಹಿನ್ನೆಲೆಯಲ್ಲಿ ಕೋವಿಡ್ 2ನೇ ಅಲೆಯಲ್ಲಿ ಸಿದ್ಧ ಪಡಿಸಿಕೊಂಡಿದ್ದ 120 ವೆಂಟಿಲೇಟರ್ ಹೊಂದಿದ ಬೆಡ್‌ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ಅವುಗಳಲ್ಲಿ ಸದ್ಯ 80 ಕಾರ್ಯ ನಿರ್ವಹಿಸುತ್ತಿದ್ದು, ಇನ್ನು 40 ಬೆಡ್‌ಗಳನ್ನು ಮಾತ್ರ ಸಣ್ಣಪುಟ್ಟ ದುರಸ್ತಿ ಮಾಡಬೇಕಿದ್ದು, ಆಕ್ಸಿಜನ್ ಸೇರಿದಂತೆ ಎಲ್ಲವೂ ಲಭ್ಯವಿದೆ.
 


ಶಿವಕುಮಾರ ಕುಷ್ಟಗಿ

ಗದಗ(ಡಿ.22): ರಾಜ್ಯದ ವಿವಿಧೆಡೆ ಮತ್ತು ಅಕ್ಕ ಪಕ್ಕದ ರಾಜ್ಯಗಳಲ್ಲಿ ಕೋವಿಡ್ ಹೊಸ ರೂಪಾಂತರ ತಳಿ ಜೆಎನ್ 1 ಪತ್ತೆಯಾದ ಹಿನ್ನೆಲೆಯಲ್ಲಿ ಸರ್ಕಾರ ಕೋವಿಡ್ ನೂತನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರನ್ವಯ ಗದಗ ಜಿಲ್ಲೆಯಲ್ಲಿಯೂ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದ್ದು, ನೆಗಡಿ, ಕೆಮ್ಮು, ತೀವ್ರತರ ಜ್ವರ ಸೇರಿದಂತೆ (ಸಾರಿ) ಸಮಸ್ಯೆ ಕಂಡು ಬಂದ 100 ಜನರನ್ನು ನಿತ್ಯವೂ ತಪಾಸಣೆಗೊಳಿಸಲಾಗುತ್ತಿದೆ.

Latest Videos

120 ಐಸೋಲೇಶನ್ ಬೆಡ್ 

ಕೋವಿಡ್ ಹೊಸ ರೂಪಾಂತರಿ ಜೆಎನ್ 1 ತಳಿ ಕಾಣಿಸಿಕೊಂಡಿರುವುದು ಮತ್ತು ಪಕ್ಕದ ಕೇರಳ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವಲ್ಲಿ ಗದಗ ಜಿಲ್ಲೆ ಪ್ರಮುಖ ಮಾರ್ಗವಾಗಿರುವ ಹಿನ್ನೆಲೆಯಲ್ಲಿ ಕೋವಿಡ್ 2ನೇ ಅಲೆಯಲ್ಲಿ ಸಿದ್ಧ ಪಡಿಸಿಕೊಂಡಿದ್ದ 120 ವೆಂಟಿಲೇಟರ್ ಹೊಂದಿದ ಬೆಡ್‌ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ಅವುಗಳಲ್ಲಿ ಸದ್ಯ 80 ಕಾರ್ಯ ನಿರ್ವಹಿಸುತ್ತಿದ್ದು, ಇನ್ನು 40 ಬೆಡ್‌ಗಳನ್ನು ಮಾತ್ರ ಸಣ್ಣಪುಟ್ಟ ದುರಸ್ತಿ ಮಾಡಬೇಕಿದ್ದು, ಆಕ್ಸಿಜನ್ ಸೇರಿದಂತೆ ಎಲ್ಲವೂ ಲಭ್ಯವಿದೆ.

ಧಾರವಾಡ: ಕೋವಿಡ್ ಸುರಕ್ಷತಾ ಕ್ರಮಗಳ ಜಾಗೃತಿ ಮೂಡಿಸಿ, ಡಿಸಿ ಗುರುದತ್ತ ಹೆಗಡೆ

750 ಹಾಸಿಗೆಗಳ ಆಸ್ಪತ್ರೆ ಲಭ್ಯ

ಜಿಮ್ಸ್ ನಲ್ಲಿ ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ 450 ಹಾಸಿಗೆಗಳ ಆಸ್ಪತ್ರೆ ಹಾಗೂ ಹಳೆಯ 300 ಹಾಸಿಗೆಗಳ ಆಸ್ಪತ್ರೆ ಸೇರಿದಂತೆ ಒಟ್ಟು 750 ಬೆಡ್‌ಗಳ ಆಸ್ಪತ್ರೆ ಜಿಲ್ಲಾ ಕೇಂದ್ರವಾದ ಗದಗ ನಗರದಲ್ಲಿ ಲಭ್ಯವಿದೆ. ಇದರೊಟ್ಟಿಗೆ ಪ್ರತಿ ತಾಲೂಕು ಕೇಂದ್ರದಲ್ಲಿಯೂ 50 ಹಾಸಿಗೆಗಳ ಆಸ್ಪತ್ರೆಗಳಿದ್ದು ಅಲ್ಲಿಯೂ ಕೂಡಾ ಕೋವಿಡ್ ಸೋಂಕು ಉಲ್ಬಣವಾದಲ್ಲಿ ತಕ್ಷಣಕ್ಕೆ ಬೇಕಾಗುವ ಐಸೋಲೇಶನ್ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿಕೊಂಡಿದೆ.

ಅಗತ್ಯ ಸಿದ್ಧತೆಗಳು ಪೂರ್ಣ

ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ ಎಚ್1ಎನ್1, ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ 10 ಬೆಡ್ ಗಳನ್ನು ಮೀಸಲಿಡಲಾಗಿದೆ. ಇದುವರೆಗೂ ಜಿಲ್ಲೆಯ ಯಾರೊಬ್ಬರಿಗೂ ಕೋವಿಡ್ ಸೋಂಕು ಕಾಣಿಸಿಕೊಂಡಿಲ್ಲ, ಒಂದೊಮ್ಮೆ ಸೋಂಕು ಪತ್ತೆಯಾದಲ್ಲಿ ಸಂಪೂರ್ಣ ಆ ವಿಭಾಗದ ಎಲ್ಲಾ ಬೆಡ್‌ಗಳನ್ನು (ಪ್ರಾಥಮಿಕ ಹಂತದ ಸೋಂಕಿನ ವಾರ್ಡಾಗಿ) ಕೋವಿಡ್ ವಾರ್ಡಾಗಿ ಪರಿವರ್ತಿಸಲು ಬೇಕಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಕೋವಿಡ್ ಸೋಂಕು ಪತ್ತೆಯಾದಲ್ಲಿ ಅದನ್ನು ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಆರೋಗ್ಯ ಇಲಾಖೆ ಹಾಗೂ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಮಾಡಿಕೊಂಡಿದೆ.

ಮಾದರಿ ಕಾರ್ಯ

ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್ 2 ನೇ ಅಲೆಯಲ್ಲಿ ಗದಗ ಜಿಮ್ಸ್ ಆಸ್ಪತ್ರೆಯ ಕಾರ್ಯತ್ಪರತೆ ಎಷ್ಟೊಂದು ಮೆಚ್ಚುಗೆಗೆ ಪಾತ್ರವಾಗಿತ್ತು ಎಂದರೆ ಅಕ್ಕ ಪಕ್ಕದ ಹಾವೇರಿ, ಧಾರವಾಡ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಕೋವಿಡ್ ರೋಗಿಗಳು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿದ್ದರು. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಹೊರತು ಪಡಿಸಿದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ವೆಂಟಿಲೇಟರ್ ಬೆಡ್‌ಗಳಿರುವುದು ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಎನ್ನುವುದು ಗಮನಾರ್ಹ ಸಂಗತಿ.

ಕೊವಿಡ್ ಕಟ್ಟಿಹಾಕಲು ಸಜ್ಜಾದ ಸರ್ಕಾರ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ

ಸದ್ಯ ಯಾವುದೇ ಪಾಸಿಟಿವ್ ಇಲ್ಲ

ಸರ್ಕಾರದ ಸೂಚನೆಯ ಪ್ರಕಾರ ನಿತ್ಯವೂ 100ಕ್ಕೂ ಅಧಿಕ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಇದುವರೆಗೂ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ, ಆದರೆ ಕಳೆದೊಂದು ವಾರದಿಂದ ಅತಿಯಾದ ಶೀತಗಾಳಿ ಮತ್ತು ಚಳಿ ಹಿನ್ನೆಲೆಯಲ್ಲಿ ಸಹಜವಾಗಿಯೇ ನೆಗಡಿ, ಕೆಮ್ಮು, ಜ್ವರ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಸಹಜವಾಗಿಯೇ ಆತಂಕ ಶುರುವಾಗಿದೆ.

ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಮ್ಸ್ ಆವರಣದಲ್ಲಿಯೇ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್, ಅಗತ್ಯ ಬೆಡ್‌ಗಳು ಇದಕ್ಕಾಗಿ ಬೇಕಾಗುವ ನುರಿತ ಸಿಬ್ಬಂದಿಗಳು, ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿಯೂ ಪ್ರಾಥಮಿಕ ಚಿಕಿತ್ಸೆಗೆ ಬೇಕಾಗುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಎಂದು ಗದಗ ಡಿ.ಎಚ್.ಓ ಡಾ. ಎಸ್.ಎಸ್. ನೀಲಗುಂದ ತಿಳಿಸಿದ್ದಾರೆ. 

click me!