ಕೋವಿಡ್‌ ಮಾರಿಗೆ ಮಂಗಳೂರಿನ 40 ವರ್ಷದ ವ್ಯಕ್ತಿ ಬಲಿ

By Kannadaprabha NewsFirst Published Dec 23, 2023, 4:50 AM IST
Highlights

ಶುಕ್ರವಾರದ ವೇಳೆಗೆ ಕಳೆದ 24 ಗಂಟೆಗಳಲ್ಲಿ 2,366 ಪರೀಕ್ಷೆ ನಡೆಸಿದ್ದು, ಶೇ.3.29 ಪಾಸಿಟಿವಿಟಿ ದರದಂತೆ 78 ಮಂದಿಗೆ ಸೋಂಕು ದೃಢಪಟ್ಟಿದೆ. ತನ್ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 175ಕ್ಕೆ ತಲುಪಿದೆ. ಈ ಪೈಕಿ 162 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, 13 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ ಆರು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು(ಡಿ.23): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಿದ್ದು, ಶುಕ್ರವಾರ ಬರೋಬ್ಬರಿ 78 ಮಂದಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ 40 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾದ ಸಾವಿನಿಂದಾಗಿ ಕಳೆದ ಒಂದು ವಾರದಲ್ಲೇ ನಾಲ್ಕು ಮಂದಿ ಕೊರೋನಾ ಸೋಂಕಿಗೆ ಬಲಿಯಾದಂತಾಗಿದೆ.

ಶುಕ್ರವಾರದ ವೇಳೆಗೆ ಕಳೆದ 24 ಗಂಟೆಗಳಲ್ಲಿ 2,366 ಪರೀಕ್ಷೆ ನಡೆಸಿದ್ದು, ಶೇ.3.29 ಪಾಸಿಟಿವಿಟಿ ದರದಂತೆ 78 ಮಂದಿಗೆ ಸೋಂಕು ದೃಢಪಟ್ಟಿದೆ. ತನ್ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 175ಕ್ಕೆ ತಲುಪಿದೆ. ಈ ಪೈಕಿ 162 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, 13 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ ಆರು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಧಾರವಾಡ: ಕೋವಿಡ್ ಸುರಕ್ಷತಾ ಕ್ರಮಗಳ ಜಾಗೃತಿ ಮೂಡಿಸಿ, ಡಿಸಿ ಗುರುದತ್ತ ಹೆಗಡೆ

ಶುಕ್ರವಾರ ವರದಿಯಾದ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ 67, ಚಿಕ್ಕಮಗಳೂರು 4, ರಾಮನಗರ ಹಾಗೂ ದಕ್ಷಿಣ ಕನ್ನಡ 2, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ದೃಢಪಟ್ಟಿದೆ.

40 ವರ್ಷದ ವ್ಯಕ್ತಿ ಸಾವು:

ಶುಕ್ರವಾರ ವರದಿಯಾದ ಒಂದು ಸಾವು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಉಂಟಾಗಿದ್ದು, ಉತ್ತರ ಭಾರತ ಮೂಲದ 40 ವರ್ಷದ ವ್ಯಕ್ತಿಗೆ ಡಯಾಬಿಟಿಸ್‌ ಮೆಲ್ಲಿಟಸ್‌ (ಮಧುಮೇಹ ಕಾಯಿಲೆ) ಹೊರತುಪಡಿಸಿ ಬೇರೆ ದೀರ್ಘಕಾಲೀನ ಕಾಯಿಲೆ ಇರಲಿಲ್ಲ. ವ್ಯಕ್ತಿಯು ಡಿ.19ರಂದು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಡಿ.20ರಂದು ಸಾವನ್ನಪ್ಪಿದ್ದಾರೆ. ಕಳೆದ ಮೂರು ಸಾವುಗಳು 60 ವರ್ಷ ಮೇಲ್ಪಟ್ಟವರಲ್ಲಿ ವರದಿಯಾಗಿತ್ತು. ಇದೀಗ 40 ವರ್ಷದ ವ್ಯಕ್ತಿ ಮೃತಪಟ್ಟಿರುವುದರಿಂದ ಆತಂಕ ಶುರುವಾಗಿದೆ.

click me!