60 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಏಳನೇ ದಿನಕ್ಕೆ ಕೊರೋನಾ ಸೋಂಕು ಪರೀಕ್ಷೆ ನಡೆಸಿ| ರಾಜ್ಯ ಸರ್ಕಾರ ಆದೇಶ| ವಯಸ್ಸಾಗಿರುವವರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಹೀಗಾಗಿ ಸೋಂಕು ಹರಡುವ ಸಾಧ್ಯತೆ ಹೆಚ್ಚು| ಅಂತಹವರಿಗೆ ನಿಗಾ ವ್ಯವಸ್ಥೆಯಲ್ಲಿರುವ 7ನೇ ದಿನಕ್ಕೆ ಪರೀಕ್ಷೆ ನಡೆಸಲು ಸೂಚನೆ|
ಬೆಂಗಳೂರು(ಮಾ.27): ಸರ್ಕಾರಿ ನಿಯಂತ್ರಣದಲ್ಲಿರುವ ಪ್ರತ್ಯೇಕ ಶಿಬಿರದಲ್ಲಿ ನಿಗಾ ವ್ಯವಸ್ಥೆಯಲ್ಲಿರುವ 60 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಏಳನೇ ದಿನಕ್ಕೆ ಕೊರೋನಾ ಸೋಂಕು ಪರೀಕ್ಷೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಪ್ರತ್ಯೇಕ ನಿಗಾ ವ್ಯವಸ್ಥೆಯಲ್ಲಿರುವವರಿಗೆ 14 ದಿನಗಳೊಳಗಾಗಿ ಸೋಂಕು ಲಕ್ಷಣಗಳು ಗೋಚರವಾದರೆ ಮಾತ್ರ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ. ಆದರೆ ವಯಸ್ಸಾಗಿರುವವರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಇತರರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಅಂತಹವರಿಗೆ ನಿಗಾ ವ್ಯವಸ್ಥೆಯಲ್ಲಿರುವ 7ನೇ ದಿನಕ್ಕೆ ಪರೀಕ್ಷೆ ನಡೆಸಲು ಸೂಚನೆ ನೀಡಿದೆ.
ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯ ಬೇಕಾಬಿಟ್ಟಿ ತಿರುಗಾಟ : ಬಿಸಿಲಲ್ಲಿ ನಿಲ್ಲುವ ಶಿಕ್ಷೆ
ಅವರಿಗೆ ಸೋಂಕು ಲಕ್ಷಣಗಳು ಇಲ್ಲದೆ, ಪರೀಕ್ಷೆಯಲ್ಲೂ ಸೋಂಕು ದೃಢಪಡದಿದ್ದರೆ ಮನೆಗೆ ವಾಪಸು ಕಳುಹಿಸಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಮನೆಯಲ್ಲಿ ಏಳು ದಿನ ಪ್ರತ್ಯೇಕವಾಗಿರುವಂತೆ ಸೂಚಿಸಬೇಕು ಎಂದು ಹೇಳಲಾಗಿದೆ. ಇನ್ನು ಸೋಂಕು ದೃಢಪಟ್ಟರೆ ನಿಯಮಗಳಂತೆ ಕೂಡಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಕೇಂದ್ರದ ಮಾರ್ಗಸೂಚಿ ಅನ್ವಯ ಸೂಚನೆ ನೀಡಲಾಗಿದೆ.