223 ಮಂದಿಗೆ ಮತ್ತೆ ಪರೀಕ್ಷೆ| ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ: ಮೈಸೂರು ಡಿಸಿ
ಮೈಸೂರು(ಏ.04): ಜುಬಿಲಿಯೆಂಟ್ ಕಾರ್ಖಾನೆ ನೌಕರರು ಮತ್ತು ಅವರ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವುದೇ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಒಟ್ಟು ಕಾರ್ಖಾನೆಯ ನೌಕರರು ಮತ್ತು ಅವರ ಜತೆ ಸಂಪರ್ಕದಲ್ಲಿದ್ದವರ 223 ಮಂದಿಯ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ. ಹೀಗಿರುವಾಗ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಎಂದುಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಈವರೆಗೆ ಕೇವಲ ಕಾರ್ಖಾನೆ ಸಿಬ್ಬಂದಿಯಲ್ಲಿ ಮಾತ್ರ ಕಂಡುಬಂದಿದ್ದ ಸೋಂಕು, ನಂತರ ಸೋಂಕಿತ ಮೂರನೇ ವ್ಯಕ್ತಿಯ ಕುಟುಂಬದವರು ಮತ್ತು ಪಿ- 88 ವ್ಯಕ್ತಿ ವಾಸಿಸುತ್ತಿದ್ದ ಕೊಠಡಿಯಲ್ಲಿದ್ದ ಇಬ್ಬರು ಯುವಕರಲ್ಲಿ ಕಂಡುಬಂದಿರುವುದರಿಂದ ಸೋಂಕಿತರ ಎಲ್ಲಾ ಪ್ರಾಥಮಿಕ ಸಂಪರ್ಕದಲ್ಲಿ ಇರುವವರ ಮೇಲೆ ಹೆಚ್ಚಿನ ನಿಗಾವಹಿಸುವುದು ಮತ್ತು ಸಂಪರ್ಕಿತಕರನ್ನು ಆದಷ್ಟು ಬೇಗ ಪತ್ತೆ ಹಚ್ಚುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ನಂಜನಗೂಡು ಸೇರಿ 5 ಸೋಂಕಿನ ಮೂಲ ಇನ್ನೂ ಸಸ್ಪೆನ್ಸ್!
ಕೊರೋನಾ ಸೋಂಕಿತ ಪಿ-88ನೇ ವ್ಯಕ್ತಿ ಜೊತೆ ವಾಸವಾಗಿದ್ದ ಮತ್ತಿಬ್ಬರಿಗೆ ಸೋಂಕು ಹರಡಿರುವುದರಿಂದ ಸೋಂಕಿತ ವ್ಯಕ್ತಿಗಳ ಕುಟುಂಬದಲ್ಲಿ ಆತಂಕ ಹೆಚ್ಚಾಗಿದೆ. ಜೊತೆಗೆ ಕೊರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮೇಲೂ ಇದು ಪರಿಣಾಮ ಬೀರಿದೆ. ಕೊರೋನಾ ಸೋಂಕು ಯಾವಾಗ ನಮಗೆ ತಗುಲಿಕೊಳ್ಳುತ್ತೋ ಎಂಬ ಭಯದಲ್ಲಿದ್ದಾರೆ. 62 ವರ್ಷದ ಒಬ್ಬರನ್ನು ಹೊರತುಪಡಿಸಿದರೆ ಸೋಂಕಿತರೆಲ್ಲರೂ 25 ರಿಂದ 40 ವರ್ಷದೊಳಗಿನವರು. ಆದ್ದರಿಂದ ಯಾರಿಗೂ ಪ್ರಾಣಾಪಾಯವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಈಗಾಗಲೇ ಸೋಂಕಿತರ ಜತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 223 ಮಂದಿಯನ್ನು ಅಗತ್ಯಬಿದ್ದರೆ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸುವುದಾಗಿಯೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ.