ಮನೆಯಿಂದ ಹೊರಬಂದರೆ ಇಂದಿನಿಂದ ಕೇಸು ದಾಖಲು| ಲಾಕ್‌ಡೌನ್ ಮತ್ತಷ್ಟು ಬಿಗಿಗೊಳಿಸಲು ನಿರ್ಧಾರ: ಡಿಜಿಪಿ| ಹಾಲು, ತರಕಾರಿ, ಔಷಧದ ನೆಪ ಹೇಳಿದರೆ ಕೇಳೋದಿಲ್ಲ
ಬೆಂಗಳೂರು(ಮಾ. 30): ಕೊರೋನಾ ಸೋಂಕು ಹರಡದಂತೆ ಕಡಿವಾಣ ಹಾಕಲು ಜನಸಂಚಾರ ನಿರ್ಬಂಧಕ್ಕೆ ವಿಧಿಸಿರುವ ಲಾಕ್ ಡೌನ್ ಅನ್ನು ಸೋಮವಾರದಿಂದ ರಾಜ್ಯವ್ಯಾಪಿ ಮತ್ತಷ್ಟು ಬಿಗಿಗೊಳಿಸಲು ಪೊಲೀಸ್ ಮಹಾನಿರ್ದೇಶಕರು ನಿರ್ಧರಿಸಿದ್ದು, ಮನೆಯಿಂದ ಅನಗತ್ಯವಾಗಿ ಹೊರಬಂದರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಭಾನುವಾರ ಸಕಾರಣವಿಲ್ಲದೆ ಓಡಾಡುತ್ತಿದ್ದ ಕಾರಣಕ್ಕೆ ಒಂದು ಸಾವಿರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇದೇ ರೀತಿ ಜನ ಗುಂಪುಗೂಡದಂತೆ ತಡೆಯಲು ಮತ್ತಷ್ಟುಕಠಿಣ ಕ್ರಮಗಳು ಜಾರಿಗೊಳಿಸಲಾಗುತ್ತದೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಡಿಜಿಪಿ ಅವರು, ಅಗತ್ಯ ವಸ್ತುಗಳ ಪೂರೈಕೆ ಹಾಗೂ ತುರ್ತು ಸೇವೆಗಳ ವಲಯದಲ್ಲಿ ಕಾರ್ಯನಿರ್ವಹಿಸುವವರಿಗೆ ಪಾಸ್ ವಿತರಣೆ ಮಾಡಲಾಗಿದೆ. ಅವರಿಗೆ ಪಾಸ್ ಪಡೆಯಲು ಸಮಯಾವಾಕಾಶ ನೀಡಲಾಗಿತ್ತು. ಈಗ ಅವಧಿ ಮುಗಿದಿದ್ದು, ಜನರಿಗೆ ಲಾಕ್‌ಡೌನ್ ನೈಜ ಚಿತ್ರಣ ಸಿಗಲಿದೆ. ಸುಖಾಸುಮ್ಮನೆ ಹಾಲು, ತರಕಾರಿ, ಹಣ್ಣು, ಔಷಧಿ ಹೀಗೆ ಏನೇನೋ ಕಾರಣ ನೀಡಿದರೆ ಕೇಳುವುದಿಲ್ಲ. ಯಾರೂ ಪ್ರತಿ ದಿನ ತರಕಾರಿ ಖರೀದಿಸುವುದಿಲ್ಲ. ಜನರ ಜೀವ ರಕ್ಷಣೆಗೆ ಲಾಕ್‌ಡೌನ್ ಅನ್ನು ಸರ್ಕಾರ ವಿಧಿಸಿದೆ. ಇದನ್ನರಿತು ನಾಗರಿಕರು ಜವಾಬ್ದಾರಿಯಿಂದ ವರ್ತಿಸಬೇಕು. ಪೊಲೀಸರಿಗಾಗಿ ಲಾಕ್ ಡೌನ್ ಮಾಡುತ್ತಿಲ್ಲ ಎಂದು ಖಾರವಾಗಿ ನುಡಿದರು.
ಸರ್ಕಾರವು ಲಾಕ್ ಡೌನ್ ಘೋಷಿಸಿದ ಬಳಿಕವು ಸಾರ್ವಜನಿಕರಿಗೆ ಸಮಸ್ಯೆ ಅರ್ಥ ಮಾಡಿಸಲು ಕಾಲಾವಕಾಶ ಕೊಡಲಾಗಿತ್ತು. ಕೆಲವು ಕಡೆ ಲಾಠಿ ಪ್ರಯೋಗ ನಡೆದಿದೆ. ಕೊರೋನಾ ಸೋಂಕು ಕುರಿತು ಬೀದಿ ಬೀದಿಯಲ್ಲಿ ಮೈಕ್‌ಗಳ ಮೂಲಕ ಪೊಲೀಸರು ಪ್ರಚಾರ ನಡೆಸಿದ್ದಾರೆ. ಇಷ್ಟೆಲ್ಲ ಕ್ರಮ ವಹಿಸಿದರೂ ಜನರು ಜಾಗ್ರತರಾಗುತ್ತಿಲ್ಲ. ಹೀಗಾಗಿ ಲಾಕ್‌ಡೌನ್ ವೇಳೆ ಅನಗತ್ಯವಾಗಿ ಓಡಾಡಿದರೆ ಪ್ರಕರಣ ದಾಖಲಿಸಿ ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಸೂದ್ ಎಚ್ಚರಿಕೆ ನೀಡಿದರು.
ಪೊಲೀಸರಿಗಾಗಿ ಲಾಕ್ ಡೌನ್ ಮಾಡಿಲ್ಲ. ಜನರ ಜೀವ ರಕ್ಷಣೆಗೆ ಸರ್ಕಾರದ ಸೂಚನೆ ಪಾಲಿಸಬೇಕು. ಸೋಮವಾರದಿಂದ ಲಾಕ್‌ಡೌನ್ ನೈಜ ಚಿತ್ರಣ ಜನರಿಗೆ ಗೊತ್ತಾಗಲಿದೆ. ಮನೆಯಿಂದ ಅನಗತ್ಯವಾಗಿ ಹೊರಬಂದು ಓಡಾಡಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
-ಪ್ರವೀಣ್ ಸೂದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ