ರಾಜ್ಯಾದ್ಯಂತ 5000ಕ್ಕೂ ಹೆಚ್ಚು ವಾಹನ ಜಪ್ತಿ!

By Kannadaprabha News  |  First Published Mar 31, 2020, 7:51 AM IST

ರಾಜ್ಯಾದ್ಯಂತ 5000ಕ್ಕೂ ಹೆಚ್ಚು ವಾಹನ ಜಪ್ತಿ!| ಲಾಕ್‌ಡೌನ್‌ ನಿಯಮ ಉಲ್ಲಂಘನೆ| ಬೆಂಗಳೂರಲ್ಲೇ 2000ಕ್ಕೂ ಹೆಚ್ಚು ವಾಹನಗಳು ವಶಕ್ಕೆ| ಏ.14ರ ನಂತರವೂ ವಾಪಸ್‌ ಇಲ್ಲ?


ಬೆಂಗಳೂರು(ಮಾ.31): ರಾಜ್ಯಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಅನಾವಶ್ಯಕವಾಗಿ ರಸ್ತೆಗಿಳಿಯುವ ಜನರ ಅಭ್ಯಾಸ ಮಾತ್ರ ನಿಂತಿಲ್ಲ. ಈ ಸಂಬಂಧ ಪದೇ ಪದೆ ಮನವಿ ಮಾಡಿದರೂ ಕಿವಿಗೆ ಹಾಕಿಕೊಳ್ಳದವರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, 5 ಸಾವಿರಕ್ಕೂ ಹೆಚ್ಚು ವಾಹನಗಳನ್ನು ರಾಜ್ಯಾದ್ಯಂತ ವಶಕ್ಕೆ ತೆಗೆದುಕೊಂಡಿದ್ದಾರೆ. ಲಕ್ಷಾಂತರ ರುಪಾಯಿ ದಂಡವನ್ನೂ ವಿಧಿಸಿದ್ದಾರೆ.

ಅಗತ್ಯವಿದ್ದರಷ್ಟೇ ಮನೆಯಿಂದ ಹೊರಗೆ ಬನ್ನಿ, ಸುಖಾಸುಮ್ಮನೆ ರಸ್ತೆ ಖಾಲಿ ಇದೆ ಎಂದು ಓಡಾಡಬೇಡಿ, ಲಾಕ್‌ಡೌನ್‌ ಉದ್ದೇಶ ಹಾಳು ಮಾಡಬೇಡಿ ಎಂದು ರಾಜ್ಯದಲ್ಲಿ ಲಾಕ್‌ಡೌನ್‌ ಘೋಷಣೆಯಾದ ದಿನದಿಂದಲೂ ಪೊಲೀಸರು ಮನವಿ ಮಾಡುತ್ತಲೇ ಬಂದಿದ್ದರು. ಆರಂಭದ ಕೆಲವು ದಿನ ಈ ರೀತಿ ಸುಖಾಸುಮ್ಮನೆ ವಾಹನ ಏರಿ ಓಡಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಸರಿದಾರಿಗೆ ತರುವ ಪ್ರಯತ್ನ ಮಾಡಿದರು. ಇದಕ್ಕೂ ಬುದ್ಧಿಕಲಿಯದಾಗ ಕೊನೆಗೆ ವಾಹನಗಳನ್ನು ವಶಕ್ಕೆ ಪಡೆದು ಕೇಸ್‌ ದಾಖಲಿಸುವಂಥ ಕಠಿಣ ನಿರ್ಧಾರವನ್ನೂ ಪೊಲೀಸರು ಆರಂಭಿಸಿದ್ದಾರೆ.

Tap to resize

Latest Videos

ಅದರಂತೆ ಬೆಂಗಳೂರೊಂದರಲ್ಲೇ ಪೊಲೀಸರು 2 ಸಾವಿರಕ್ಕೂ ಹೆಚ್ಚು, ಧಾರವಾಡದಲ್ಲಿ 425, ರಾಯಚೂರಲ್ಲಿ 450, ಕಲಬುರಗಿಯಲ್ಲಿ 265ಕ್ಕೂ ಹೆಚ್ಚು, ಬಳ್ಳಾರಿಯಲ್ಲಿ 31, ಕಾರವಾರದಲ್ಲಿ 187, ಬೆಳಗಾವಿಯಲ್ಲಿ 366, ಬಾಗಲಕೋಟೆಯಲ್ಲಿ 362, ವಿಜಯಪುರದಲ್ಲಿ 449 ಹಾಗೂ ಹಾವೇರಿಯಲ್ಲಿ 150, ಚಿತ್ರದುರ್ಗದಲ್ಲಿ 82 ಸೇರಿದಂತೆ ರಾಜ್ಯಾದ್ಯಂತ 5 ಸಾವಿರಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಕೇಸ್‌ ದಾಖಲಿಸಿದ್ದಾರೆ. ಕೋಲಾರದಲ್ಲಿ ವಾಹನ ಸವಾರರ ಮೇಲೆ 310 ಕೇಸ್‌ಗಳನ್ನು ದಾಖಲಿಸಲಾಗಿದೆ. ಮೈಸೂರಿನಲ್ಲಿ ಹುಣಸೂರು ತಾಲೂಕೊಂದರಲ್ಲೇ 200ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರಲ್ಲಿ ಈ ರೀತಿ 2000 ಸಾವಿರಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದಿದ್ದರೂ ಸೋಮವಾರ ಆ ವಾಹನಗಳನ್ನು ಮಾಲೀಕರಿಗೆ ಬಿಡುಗಡೆ ಮಾಡಿರುವ ಪೊಲೀಸರು, ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರದಿಂದ ವಶಕ್ಕೆ ಪಡೆದುಕೊಳ್ಳುವ ಯಾವುದೇ ವಾಹನಗಳನ್ನು ಲಾಕ್‌ಡೌನ್‌ ಅವಧಿ ಮುಗಿಯುವ ವರೆಗೆ ಅಂದರೆ ಏ.14ರ ವರೆಗೆ ವಾಪಸ್‌ ನೀಡಲಾಗುವುದಿಲ್ಲ ಎಂದೂ ಸ್ಪಷ್ಟಸಂದೇಶ ರವಾನಿಸಿದ್ದಾರೆ.

click me!