
ಮೈಸೂರು(ಎ.01): ನಂಜನಗೂಡಿನ ಜುಬಿಲೆಂಟ್ ನೌಕರರ ಪೈಕಿ ಮತ್ತೆ ನಾಲ್ವರಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಮತ್ತಷ್ಟುಆತಂಕ ಎದುರಾಗಿದ್ದು, ವೈರಾಣುಗಳ ನಿಯಂತ್ರಣಕ್ಕೆ ನಗರಸಭೆಯಿಂದ ಔಷಧ ಸಿಂಪಡಿಸುವ ಕಾರ್ಯ ನಡೆಯುತ್ತಿದೆ.
ನಂಜನಗೂಡಲ್ಲಿ ಕಾರ್ಖಾನೆಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇಲ್ಲಿನ ಬಡಜನರು ಗಾರ್ಮೆಂಟ್ಸ್ ಕಾರ್ಖಾನೆಗಳು, ವಿಕೆಸಿ, ನೆಸ್ಲೆ, ಬಿ.ವಿ. ಪಂಡಿತ್ ಸದ್ವೈದ್ಯ ಶಾಲಾ, ರೀಡ್ ಅಂಡ್ ಟೈಲರ್ಸ್ ಸೇರಿದಂತೆ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿದ್ದಾರೆ.
ಮೈಸೂರು: ಅನಗತ್ಯ ಓಡಾಡಿದ 303 ವಾಹನಗಳ ವಶ
ಜುಬಿಲೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 1,350ಕ್ಕೂ ಹೆಚ್ಚು ಮಂದಿಯ ಪೈಕಿ 10 ಮಂದಿಗೆ ಕೊರೋನಾ ಪಾಸಿಟಿವ್ ದೃಢವಾಗಿರುವುದು ಗೊತ್ತಾಗುತ್ತಿದ್ದಂತೆ ರೆಡ್ ಝೋನ್ ಎಂದು ಘೋಷಿಸಲಾಗಿದೆ. ಕಾರ್ಖಾನೆಗೆ ಬೀಗ ಮುದ್ರೆ ಹಾಕಿರುವ ಜಿಲ್ಲಾಡಳಿತ ಮನೆಯಲ್ಲೇ ಇರುವಂತೆ ಸೂಚಿಸಿದೆ. ಆದರೆ 3ನೇ ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಕುಟುಂಬವನ್ನು ನಗರದ ಹೊರ ವಲಯದ ಹಾಸ್ಟೆಲ್ ಮತ್ತು ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲು ಸಿದ್ಧತೆ ನಡೆದಿದೆ. ಉಳಿದವರು ಮನೆಯಲ್ಲಿಯೇ ಇರಬೇಕು. ನಿಯಮ ಉಲ್ಲಂಘಿಸಿ ಹೊರ ಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಡಳಿತ ಎಚ್ಚರಿಸಿದೆ.
ಸೋಂಕಿತರು ಯಾವ ಕಡೆಗಳಲ್ಲಿ ಓಡಾಡಿದ್ದಾರೋ, ಯಾರನ್ನು ಭೇಟಿ ಮಾಡಿ ಬಂದಿದ್ದಾರೋ ಎನ್ನುವ ಮಾಹಿತಿ ಇಲ್ಲದ ಕಾರಣ ಅನೇಕ ಹಳ್ಳಿಯ ಜನರು ಗಾಬರಿಯಾಗಿದ್ದಾರೆ. ಹೀಗಾಗಿ, ಆಸ್ಪತ್ರೆಯ ಸಮೀಪ ಕ್ಯಾಂಟೀನ್ ಇನ್ನಿತರ ಅಂಗಡಿಗಳು, ಎಳನೀರು, ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಈಗ ಆತಂಕದಲ್ಲೇ ಸಮಯದೂಡುವಂತ ಪರಿಸ್ಥಿತಿ ಎದುರಾಗಿದೆ.
ತರಕಾರಿ ಬೆಲೆ ದುಬಾರಿ:
ನಂಜನಗೂಡು ಕಂಪ್ಲೀಟ್ ಬಂದ್ ಆಗಿರುವ ಹಿನ್ನೆಲೆ ಒಂದೇ ದಿನ ತರಕಾರಿ ಬೆಲೆ ಗಗನಕ್ಕೇರಿದೆ. ಬೀನ್ಸ್‌ನ ಬೆಲೆ 100 ರು. ದಾಟುತ್ತಿದೆ. ಈರುಳ್ಳಿ ಕೆಲವೆಡೆ 50 ರು. ಇದ್ದರೆ ಕೆಲವೆಡೆ 80 ರು. ಮಾರಾಟವಾಗಿದೆ. ಕೊತ್ತಂಬರಿ ಸೊಪ್ಪಿಗೆ 10 ರು. ಇದೆ. ತೆಂಗಿನ ಕಾಯಿಯನ್ನು 30 ರು. ನಿಂದ 50 ರು. ತನಕ ಮಾರಾಟ ಮಾಡುತ್ತಿದ್ದಾರೆ.