ರಾಜ್ಯದಲ್ಲಿ 1 ಲಕ್ಷ ಜನರಿಗೆ ಕೊರೋನಾ ಸೋಂಕು ಹಬ್ಬುವ ಭೀತಿ ನಿಜ: ಡಿಸಿಎಂ| ಬಿಗಿ ಕ್ರಮ ಕೈಗೊಳ್ಳದಿದ್ದರೆ ಸೋಂಕು ಹೆಚ್ಚಳ| ಖ್ಯಾತ ವೈದ್ಯ ಡಾ| ದೇವಿ ಶೆಟ್ಟಿಎಚ್ಚರಿಕೆ: ಡಾ| ಅಶ್ವತ್ಥನಾರಾಯಣ| ಕ್ವಾರಂಟೈನ್‌ಗಾಗಿ 20 ಸಾವಿರ ಹೋಟೆಲ್ ಕೊಠಡಿ ಮೀಸಲು| ಎಲ್ಲ ಜಿಲ್ಲೆಗಳಲ್ಲಿ ಐಸೋಲೇಷನ್ ಆಸ್ಪತ್ರೆ ಸ್ಥಾಪನೆ
ಬೆಂಗಳೂರು(ಮಾ.25): ಕೊರೋನಾ ವೈರಸ್ ಹರಡುವುದನ್ನು ಬಿಗಿ ಕ್ರಮಗಳ ಮೂಲಕ ತಡೆಯದಿದ್ದರೆ ರಾಜ್ಯದಲ್ಲಿ ಸುಮಾರು 80,000ದಿಂದ 1 ಲಕ್ಷ ಮಂದಿ ಸೋಂಕಿತರಾಗುವ ಸಾಧ್ಯತೆಯಿರುವುದು ನಿಜ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವತ್‌್ಥ ನಾರಾಯಣ ತಿಳಿಸಿದ್ದಾರೆ.
ಕಲಾಪದಲ್ಲಿ ಕೊರೋನಾ ಕುರಿತ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರು ಡಾ.ದೇವಿಶೆಟ್ಟಿಅವರ ಹೇಳಿಕೆಯನ್ನು ಉಲ್ಲೇಖಿಸಿ, ಕೊರೋನಾ ನಿಯಂತ್ರಣ ಸಮರ್ಪಕವಾಗಿ ಆಗದಿದ್ದರೆ ರಾಜ್ಯದಲ್ಲಿ 80 ಸಾವಿರ ಜನರು ಸೋಂಕಿತರಾಗುವ ಅಪಾಯವಿದೆ. ಈ ಪೈಕಿ ಸುಮಾರು 17 ಸಾವಿರ ಮಂದಿಗೆ ವೆಂಟಿಲೇಟರ್ ಸೌಲಭ್ಯ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ರಾಜ್ಯ ಸರ್ಕಾರ ಕೇವಲ ಒಂದು ಸಾವಿರ ವೆಂಟಿಲೇಟರ್ ಖರೀದಿಗೆ ಮುಂದಾಗಿದೆ. ಹೀಗಾದರೆ ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂದು ಪ್ರಶ್ನಿಸಿದರು.
undefined
ಇದಕ್ಕೆ ಉತ್ತರಿಸಿದ ಅಶ್ವತ್‌್ಥ ನಾರಾಯಣ ಅವರು, ನಿಯಂತ್ರಣ ಕ್ರಮಗಳನ್ನು ಸರಿಯಾಗಿ ಕೈಗೊಳ್ಳದೆ ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಇಂತಹ ಸ್ಥಿತಿ ಬರುತ್ತದೆ ಎಂದು ದೇವಿಶೆಟ್ಟಿಹೇಳಿರುವುದು ನಿಜ. ಈ ಕಾರಣದಿಂದಲೇ ಸರ್ಕಾರ ಖಾಸಗಿ ಆಸ್ಪತ್ರೆಗಳ ಬಳಕೆ, ಲಾಕ್‌ಡೌನ್, ಬೃಹತ್ ಪ್ರಮಾಣದಲ್ಲಿ ಮಾಸ್ಕ್‌ಗಳು, ವೆಂಟಿಲೇಟರ್ ಖರೀದಿ ಮಾಡುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ರಾಜ್ಯದ ಸುಮಾರು 20 ಸಾವಿರ ಹೋಟೆಲ್ ಕೊಠಡಿಗಳನ್ನು ಕ್ವಾರಂಟೈನ್‌ಗಾಗಿ ಈಗಾಗಲೇ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಅಲ್ಲದೆ, ಸರ್ಕಾರ ಕೊರೋನಾ ತಡೆಗೆ ಕೈಗೊಂಡ ಕ್ರಮಗಳನ್ನು ವಿವರಿಸಿದ ಅವರು, ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಐಸೋಲೇಷನ್ ಆಸ್ಪತ್ರೆ ಸ್ಥಾಪಿಸಲಾಗುವುದು. ಈ ಮೊದಲು ಸಾಮಾನ್ಯ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೂ ಚಿಕಿತ್ಸೆ ನೀಡಲು ಉದ್ದೇಶಿಸಲಾಗಿತ್ತು. ಆದರೆ ತಜ್ಞರನ್ನು ಒಳಗೊಂಡ ಕಾರ್ಯಪಡೆ, ಸಾಮಾನ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದರಿಂದ ಇನ್ನಷ್ಟುಸೋಂಕು ಹರಡಬಹುದು ಎಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಒಂಬತ್ತು ಜಿಲ್ಲೆಗಳಲ್ಲಿ ಐಸೋಲೇಷನ್ ಆಸ್ಪತ್ರೆ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ ಈಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಇಂತಹ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು. ಇದರ ಜೊತೆಗೆ ಎಲ್ಲ ತಾಲೂಕುಗಳಲ್ಲಿ ‘ಜ್ವರ ಚಿಕಿತ್ಸಾ’ ಕೇಂದ್ರ ಸ್ಥಾಪಿಸಲಾಗುವುದು. ಈ ಕೇಂದ್ರದಲ್ಲಿ ಮಾತ್ರ ತಪಾಸಣೆ ಮಾಡಲಾಗುವುದು ಎಂದರು.
ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಲು ಶೇ.30ರಷ್ಟುಹಾಸಿಗೆಗಳನ್ನು ಮೀಸಲಿಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ. ಒಂದು ವೇಳೆ ಯಾವುದೇ ಕುಟುಂಬದ ಎಲ್ಲ ಸದಸ್ಯರು ಕೊರೋನಾದಿಂದ ಬಳಲುತ್ತಿದ್ದರೆ ಅವರು ವಾಸಿಸುತ್ತಿದ್ದ ಮನೆಗೆ ನೋಟಿಸ್ ಅಂಟಿಸಲಾಗುವುದು. ಇದರಿಂದ ನೆರೆಯ ಜನರು ಜಾಗೃತರಾಗಿರಲು ಹಾಗೂ ಪೀಡಿತ ಕುಟುಂಬದ ಜನರ ಮೇಲೆ ನಿಗಾ ವಹಿಸಲು ಅನುಕೂಲವಾಗುತ್ತದೆ ಎಂದು ಸಚಿವರು ತಿಳಿಸಿದರು.
ಹೊಸದಾಗಿ ಒಂದು ಸಾವಿರ ವೆಂಟಿಲೇಟರ್ ಖರೀದಿಸಲು ನಿರ್ಧರಿಸಲಾಗಿದೆ. ಜೊತೆಗೆ ಖಾಸಗಿ ಆಸ್ಪತ್ರೆಗಳು 100 ವೆಂಟಿಲೇಟರ್, ಇಸ್ಫೋಸಿಸ್ ಸಂಸ್ಥೆ 100 ವೆಂಟಿಲೇಟರ್ ನೀಡಲು ಮುಂದೆ ಬಂದಿವೆ. ಇದಲ್ಲದೇ ಅನೇಕ ಸಂಘ-ಸಂಸ್ಥೆಗಳು ಸಹ ವೆಂಟಿಲೇಟರ್ ನೀಡುವುದಾಗಿ ತಿಳಿಸಿವೆ. ಇದಲ್ಲದೇ 14 ಲಕ್ಷ ಮೂರು ಪರದೆಯ ಮಾಸ್ಕ್‌ಗಳನ್ನು ಪೂರೈಸುವ ಸಂಬಂಧ ಎಚ್‌ಎಲ್‌ಎಲ್ ಸಂಸ್ಥೆಗೆ ಸೂಚಿಸಲಾಗಿದೆ. ಇದಲ್ಲದೇ 10 ಲಕ್ಷ ವೈಯಕ್ತಿಕ ಸುರಕ್ಷತಾ ಕಿಟ್, ಐದು ಲಕ್ಷ ಎನ್-95 ಮಾಸ್ಕ್ ಖರೀದಿಸಿ ಸಂಗ್ರಹಿಸಿಡಲು ಕ್ರಮ ಕೈಗೊಳ್ಳಲಾಗಿದೆ. ಜ್ವರ ಬಂದವರು ನೇರವಾಗಿ ಆಸ್ಪತ್ರೆಗೆ ಬಾರದೇ ವೈದ್ಯರ ಶಿಫಾರಸಿನ ಮೇರೆಗೆ ಬರುವಂತೆ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.