ಸಭೆ ಸೇರಬಾರದೆಂದು ಗೊತ್ತಿರಲಿಲ್ಲ: ಜಮಾತ್‌ನಲ್ಲಿ ಪಾಲ್ಗೊಂಡ ಹುಬ್ಬಳ್ಳಿ ಯುವಕನ ಮಾತು!

By Kannadaprabha NewsFirst Published Apr 2, 2020, 7:21 AM IST
Highlights

 ‘ಕೊರೋನಾ ಹಿನ್ನೆಲೆಯಲ್ಲಿ ಯಾರೂ ದೊಡ್ಡ ಸಂಖ್ಯೆಯಲ್ಲಿ ಸಭೆ ಸೇರಬಾರದು ಎಂಬ ನಿಯಮದ ಕುರಿತು ನಮಗೇನೂ ಗೊತ್ತಿಲ್ಲ| ಧರ್ಮ ಪ್ರಚಾರದ ಸಭೆ ಇತ್ತು. ಅದರಲ್ಲಿ ಪಾಲ್ಗೊಂಡೆವು. 

ಹುಬ್ಬಳ್ಳಿ(ಏ.02): ‘ಕೊರೋನಾ ಹಿನ್ನೆಲೆಯಲ್ಲಿ ಯಾರೂ ದೊಡ್ಡ ಸಂಖ್ಯೆಯಲ್ಲಿ ಸಭೆ ಸೇರಬಾರದು ಎಂಬ ನಿಯಮದ ಕುರಿತು ನಮಗೇನೂ ಗೊತ್ತಿಲ್ಲ. ಧರ್ಮ ಪ್ರಚಾರದ ಸಭೆ ಇತ್ತು. ಅದರಲ್ಲಿ ಪಾಲ್ಗೊಂಡೆವು. ನಮ್ಮ ಧರ್ಮ ಪ್ರಚಾರ ನಡೆಸಿ ವಾಪಸ್‌ ಬಂದೆವು ಅಷ್ಟೆ!’

ಇದು ದೇಶಾದ್ಯಂತ ಕೊರೋನಾ ಹರಡಿದ ಆತಂಕ ಸೃಷ್ಟಿಸಿರುವ ದೆಹಲಿಯ ನಿಜಾಮುದ್ದೀನ್‌ನ ಮಸೀದಿಯ ಧರ್ಮ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಕಳ್ಳಿಮಠ ಪ್ರದೇಶದ ಯುವಕನೊಬ್ಬ ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತು.

ಇನ್ನಷ್ಟು ಮಸೀದಿಗಳಲ್ಲಿ ದೆಹಲಿ ವೈರಸ್‌ ಹಬ್ಬುವ ಅಪಾಯ!

‘ನಾನು ಸೇರಿದಂತೆ ಒಟ್ಟು 12 ಜನ ದೆಹಲಿಯಲ್ಲಿ ನಡೆದ ಜಮಾತ್‌ಗೆ ಹೋಗಿದ್ದೆವು. 8 ಜನ ನವಲಗುಂದ ತಾಲೂಕಿನವರಾಗಿದ್ದರೆ, 4 ಜನ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದವರು. ಮಾ.13ರಂದೇ ವಾಪಸ್‌ ಬಂದಿದ್ದೇವೆ. ಆಗಿನಿಂದ ಈಗಿನ ವರೆಗೂ ನನಗಾಗಲಿ, ನನ್ನೊಂದಿಗೆ ಬಂದವರಿಗಾಗಲಿ ನೆಗಡಿಯೂ ಬಂದಿಲ್ಲ, ಜ್ವರನೂ ಬಂದಿಲ್ಲ. ನಾವೆಲ್ಲ ಆರೋಗ್ಯವಾಗಿಯೇ ಇದ್ದೇವೆ. ಜ.8ಕ್ಕೆ ಊರು ಬಿಟ್ಟಿದ್ದೆವು. ಆದರೆ ನಮಗೆ ಅವತ್ತು ನಿಜಾಮುದ್ದೀನ್‌ ರೈಲಿನಲ್ಲಿ ಸೀಟು ಸಿಕ್ಕಿರಲಿಲ್ಲ. ಈ ಕಾರಣಕ್ಕಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿನ ಮಸೀದಿಯಲ್ಲಿ ಹತ್ತು ದಿನ ಕಳೆದೆವು. ಅಲ್ಲಿ ಧರ್ಮಪ್ರಚಾರವನ್ನೇ ಮಾಡಿದೆವ ಎಂದು ಯುವಕ ವಿವರಿಸಿದ್ದಾನೆ. ದೆಹಲಿ, ನೊಯ್ಡಾ ಹೀಗೆ ಬೇರೆ ಬೇರೆ ಮಸೀದಿಗಳಲ್ಲಿ ಸೇರಿ ಒಟ್ಟು 30 ದಿನ ಅಲ್ಲೇ ಕಳೆದೆವು ಎಂದು ಆತ ತಿಳಿಸಿದ್ದಾನೆ.

ಇದೀಗ ಕೊರೋನಾ ವೈರಾಣು ಸೋಂಕಿನ ಕುರಿತು ತಪಾಸಣೆ ಮಾಡಬೇಕು ಎಂದು ಕರೆದುಕೊಂಡು ಬಂದಿದ್ದಾರೆ. ಸರ್ಕಾರ ಏನು ಹೇಳುತ್ತದೆಯೋ ಹಾಗೆ ಮಾಡುತ್ತೇವೆ. ನಮ್ಮಿಂದ ಇನ್ನೊಬ್ಬರಿಗೆ ತೊಂದರೆಯಾಗುವುದು ಬೇಡ. ಎಷ್ಟುದಿನ ಕ್ವಾರಂಟೈನ್‌ನಲ್ಲಿ ಇರಬೇಕೆಂದು ಸೂಚನೆ ನೀಡುತ್ತಾರೋ ಅಷ್ಟುದಿನ ಇರುತ್ತೇವೆ ಎಂದು ಹೇಳಿದ.

ಲಾಕ್‌ಡೌನ್: ಕರ್ನಾಟಕದ ಮಸೀದಿಗಳಿಗೆ ಮತ್ತೊಮ್ಮೆ ಖಡಕ್ ಸೂಚನೆ

click me!