ಕೊರೋನಾತಂಕದ ಮೆಡಿಕಲ್ ಎಮರ್ಜನ್ಸಿ ಇರುವ ಈ ಊರಲ್ಲೀಗ ಖಾಸಗಿ ಆಸ್ಪತ್ರೆಯವರ ಹಠಮಾರಿತನದಿಂದ ಹೊಸ ಎಮರ್ಜನ್ಸಿ ಸೃಷ್ಟಿ | ನಿಮ್ಮ ಅನಾರೋಗ್ಯ ಸ್ವರೂಪ- ಕಾರಣ ಅದೇನೇ ಇರಲಿ, ಕೋವಿಡ್- 19 ನೆಗೆಟಿವ್ ಪ್ರಮಾಣ ಪತ್ರಕ್ಕಾಗಿ ಪೀಡಿಸುತ್ತಿರುವ ಖಾಸಗಿ ಆಸ್ಪತ್ರೆಗಳು|
ಶೇಷಮೂರ್ತಿ ಅವಧಾನಿ
ಕಲಬುರಗಿ(ಏ.05): ಕೊರೋನಾ ಹೆಮ್ಮಾರಿಯಿಂದ ಮೊದಲೇ `ಮೆಡಿಕಲ್ ಎಮರ್ಜನ್ಸಿ' ಕಾಡುತ್ತಿರುವ ಕಲಬುರಗಿಯಲ್ಲೀಗ ಖಾಸಗಿ ಆಸ್ಪತ್ರೆಗಳ ಅಲಿಖಿತ ನಿಯಮದಿಂದ ತೀವ್ರ ಸ್ವರೂಪದ ಮೆಡಿಕಲ್ ಎಮರ್ಜನ್ಸಿ ಎದುರಾದಂತಾಗಿದೆ.
`ನಿಮ್ಮನ್ನು ಕಾಡುತ್ತಿರುವ ಅನಾರೋಗ್ಯದ ಸ್ವರೂಪ, ಕಾರಣ ಅದೇನೇ ಇರಲಿ, ಕೋವಿಡ್- 19 ನೆಗೆಟಿವ್ ರಿಪೋರ್ಟ್ ಇದ್ರೆ ಮಾತ್ರ ನಮ್ಮಲ್ಲಿ ಚಿಕಿತ್ಸೆ ಲಭ್ಯ' ಎಂದು ಕಳೆದೊಂದು ವಾರದಿಂದ ಕಲಬುರಗಿಯಲ್ಲಿನ ಕೆಲವು ಹೆಸರಾಂತ ಖಾಸಗಿ ಆಸ್ಪತ್ರೆಗಳು ರೋಗಿ, ಬಂಧುಗಳಿಗೆ ವಿಧಿಸುತ್ತಿರುವ ಮೌಖಿಕ ಷರತ್ತು ಕಲಬುರಗಿ ಮಂದಿ ದುಗುಡು ಹೆಚ್ಚಿಸಿದೆ.
undefined
ಟ್ರಾಮಾ (ಅಪಘಾತ), ಬಿಪಿ- ಶುಗರ್, ಕ್ರಾನಿಕ್ ಅಸ್ಥಮಾ, ಹೃದ್ರೋಗ ಕಾಯಿಲೆ ಪೇಷಂಟ್‍ಗಳಿಗೂ `ಕೋವಿಡ್- 19' ನೆಗೆಟಿವ್ ಪತ್ರ ಕೇಳುತ್ತಿರುವ ನಗರದ ಖಾಸಗಿ ಆಸ್ಪತ್ರೆಗಳು ಅದಿಲ್ಲದವರಿಗೆ ಪ್ರವೇಶ ಸಹ ನಿರಾಕರಿಸಿದ ಪ್ರಸಂಗಗಳು ವರದಿಯಾಗಿವೆ.
ಏಪ್ರಿಲ್ 14ರ ನಂತ್ರ ಈ ದೇಶದಲ್ಲಿ ಏನಾಗುತ್ತದೆ? ಊಹಿಸಲು ಸಾಧ್ಯವಿದೆ!
ಅಪಘಾತದಿಂದ ಕಳೆದ 20 ದಿನಿದಂದ ಪ್ರಜ್ಞಾಹೀನ ಸ್ಥಿತಿಯಲ್ಲಿರುವ, ಬೆಂಗಳೂರಿನಿಂದ ಚಿಕಿತ್ಸೆ ಪಡೆದು ಕಲಬುರಗಿಗೆ ಆ್ಯಂಬುಲೆನ್ಸ್‌ನಲ್ಲಿ ಮರಳಿದ್ದ ರೋಗಿ ಆಸ್ಪತ್ರೆ ಪ್ರವೇಶ, ಐಸಿಯೂ ಚಿಕಿತ್ಸೆಗಾಗಿ ಗೋಗರೆಯುತ್ತ 3 ಗಂಟೆಗಳ ಕಾಲ ಕಾದ ಪ್ರಸಂಗ ಕಲಬುರಗಿ ಏರ್‌ಪೋರ್ಟ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದ ಬಗ್ಗೆ `ಕನ್ನಡಪ್ರಭ'ಕ್ಕೆ ಖಚಿತ ಮಾಹಿತಿ ದೊರಕಿದೆ.
ವೆಂಟಿಲೇಟರ್ ಸಪೋರ್ಟ್‍ನಲ್ಲಿ ಆ್ಯಂಬುಲೆನ್ಸ್‍ನಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಸದರಿ ರೋಗಿ ಮಲಗಿದ್ದು ಅರಿತರೂ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಕ್ಯಾರೆ ಎನ್ನದೆ ಕೋವಿಡ್- 19 ನೆಗೆಟಿವ್ ಪ್ರಮಾಣ ಪತ್ರಕ್ಕಾಗಿ ಹಿಡಿದ್ದಾರೆ. ಪಟ್ಟು ಸಡಿಲಿಸದೆ ಹೋದಾಗ ಬೇರೊಂದು ದಾರಿ ಕಾಣದೆ ರೋಗಿಯ ಬಂಧುಗಳು ಕಣ್ಣೀರು ಹಾಕುತ್ತ, ಆಸ್ಪತ್ರೆಗೆ ಹಿಡಿಶಾಪ ಹಾಕಿ ಬೇರೊಂದು ಆಸ್ಪತ್ರೆಗೆ ತೆರಳಿದರೆಂದು ಗೊತ್ತಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕ್ರಾನಿಕ್ ಅಸ್ಥಮಾ ರೋಗಿ ಐಸಿಯೂ ಚಿಕಿತ್ಸೆ ಬಯಸಿದರೂ ಸಹ ಕೊರೋನಾ ನೆಗೆಟೀವ್ ರಿಪೋರ್ಟ್ ತನ್ನಿರೆಂದು ಸದರಿ ರೋಗಿಯ ಬಂಧುಗಳಿಗೂ ಖಾಸಗಿ ಆಸ್ಪತ್ರೆಯೊಂದು ಆಗ್ರಹಿಸಿ ತುಂಬ ತೊಂದರೆ ಕೊಟ್ಟಿತೆಂದು ಹೆಸರು ಹೆಳಲು ಬಯಸದ ಬಂಧುಗಳು `ಕನ್ನಡಪ್ರಭ' ತಾವು ಅನುಭವಿಸಿದ ಗೋಳು- ಯಾತನೆ ವಿವರಿಸಿದರು.
ಕೋವಿಡ್- 19 ನೆಗೆಟಿವ್ ರಿಪೋರ್ಟ್ ಬೇಕೇಬೇಕು!
ಅನಾರೋಗ್ಯಕ್ಕೆ ಅದೇನೇ ಕಾರಣಗಳಿರಲಿ, ಖಾಸಗಿ ಆಸ್ಪತ್ರೆಗಳನ್ನರಸಿ ಬಂದ್ರೆ ಕೊರೋನಾ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ ಎನ್ನುತ್ತಿದ್ದಾರೆ. ಪ್ರಮಾಣ ಪತ್ರಕ್ಕಾಗಿ ಇಎಸ್‍ಐಸಿಗೆ ಹೋದರೆ ನೀವ್ಯಾಕಿಲ್ಲಿ ಎಂದು ಕೇಳುತ್ತಿದ್ದಾರೆಂದು ರೋಗಿಗಳೊಂದಿಗೆ ಬಂಧುಗಳು ಆಸ್ಪತ್ರೆ ಅಲೆಯುವಂತಾಗಿದೆ. ಜಿಲ್ಲಾಸ್ಪತ್ರೆ, ಇಎಸ್‍ಐಸಿ ಆಸ್ಪತ್ರೆಗಳು ಕೋವಿಡ್- 19 ಆಸ್ಪತ್ರೆಗಳಾಗಿಸಿರುವ ಜಿಲ್ಲಾಡಳಿತ ಇಲ್ಲಿನÀ ಐಸಿಯೂ ವಾರ್ಡ್ ತನ್ನ ವಶಕ್ಕೆ ಪಡೆದಿದೆ. ಇದರಿಂದ ಸಾಮಾನ್ಯ ರೋಗ, ರುಜಿನೆಯಿಂದ ಬಳಲುತ್ತಿರುವವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯೂ ಅಭಾವ ಕಾಡುತ್ತಿದೆ.
ಯಾವುದೇ ರೋಗವಿರಲಿ ಕೋರೋನಾ ನೆಗೆಟಿವ್ ಪ್ರಮಾಣ ಪತ್ರ ತನ್ನಿರೆಂಬ ಖಾಸಗಿ ಆಸ್ಪತ್ರೆಯರ ಹಠಮಾರಿತನದ ಧೋರಣೆಯಿಂದ ಕಲಬುರಗಿ ಸಾರ್ವಜನಿಕರು ಡಬ್ಬಲ್ ಆರೋಗ್ಯ ತುರ್ತು ಸಂದರ್ಭ ಎದುರಿಸುವಂತಾಗಿದೆ ಎಂದು ರೋಗಿಗಳ ಬಂಧುಗಳು ದೂರುತ್ತಿದ್ದಾರೆ. ಕೊರೋನಾ ಬಗ್ಗೆಯೇ ಲಕ್ಷ ಕೇಂದ್ರೀಕರಿಸಿರುವ ಜಿಲ್ಲಾಡಳಿತದ ಜನ ಎದುರಿಸುತ್ತಿರುವ ಇಂತಹ ಸಮಸ್ಯೆಗಳು ಕಾಣದಂತಾಗಿದೆ.