ಲಾಕ್‌ಡೌನ್‌: ರೈತರಿಗೆ ಸಂಕಷ್ಟ, ಭಾರೀ ನಷ್ಟ: ದ್ರಾಕ್ಷಿ, ಸಪೋಟಾ ತಿಪ್ಪೆಗೆ!

By Kannadaprabha NewsFirst Published Mar 30, 2020, 10:47 AM IST
Highlights

ಲಾಕ್‌ಡೌನ್‌: ರೈತರಿಗೆ ಸಂಕಷ್ಟ, ಭಾರೀ ನಷ್ಟ | ಬೆಳೆದ ಬೆಳೆ ಮಾರಾಟ ಮಾಡಲಾಗುತ್ತಿಲ್ಲ| ಚಿಕ್ಕಬಳ್ಳಾಪುರದಲ್ಲಿ ದ್ರಾಕ್ಷಿ, ಮಂಡ್ಯದಲ್ಲಿ ಸಪೋಟಾ ತಿಪ್ಪಿಗೆ ಸುರಿದ ರೈತರು

ಬೆಂಗಳೂರು(ಮಾ.30): ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ನಿಂದಾಗಿ ರಾಜ್ಯಾದ್ಯಂತ ತರಕಾರಿ, ಸೊಪ್ಪು ಹಾಗೂ ಹಣ್ಣು ಹಂಪಲು ಸಾಗಣೆಯಲ್ಲಿ ಭಾರೀ ವ್ಯತ್ಯಯವಾಗಿದೆ. ಇದರ ನೇರ ಪರಿಣಾಮ ಈಗ ರೈತರ ಮೇಲಾಗಿದ್ದು, ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ಲಕ್ಷಾಂತರ ರುಪಾಯಿ ನಷ್ಟಕ್ಕೀಡಾಗಿದ್ದಾರೆ. ಖರೀದಿದಾರರಿಲ್ಲದೆ ಬೆಳೆಯನ್ನು ಕೆಲ ರೈತರು ತಿಪ್ಪೆಗೆಸೆದರೆ, ಇನ್ನು ಕೆಲವರು ಉಚಿತವಾಗಿ ಜನರಿಗೆ ಹಂಚಿದ ಅನೇಕ ಘಟನೆಗಳು ರಾಜ್ಯದಲ್ಲಿ ವರದಿಯಾಗಿವೆ.

ದಾವಣಗೆರೆ ಜಿಲ್ಲೆ ದಿಂಡದಹಳ್ಳಿಯಲ್ಲಿ ಸುರೇಶ್‌, ಲಕ್ಷ್ಮೇಕಾಂತ್‌ ಎಂಬವರ 5 ಎಕರೆ ಜಮೀನಿನಲ್ಲಿ ಬೆಳೆದಿರುವ ಸುಮಾರು 20 ಲಕ್ಷ ಮೌಲ್ಯದ ಕಲ್ಲಂಗಡಿ ಹಣ್ಣು ಮಾರುಕಟ್ಟೆಇಲ್ಲದ್ದರಿಂದ ಹೊಲದಲ್ಲೇ ಕೊಳೆಯುತ್ತಿದೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟದ ರೈತ ವಿಶ್ವನಾಥ ತಮ್ಮ ಮೂರ್ನಾಲ್ಕು ಎಕರೆ ಹೊಲದಲ್ಲಿ ಕೊಳೆತಿರುವ ಕಲ್ಲಂಗಡಿ ಹಣ್ಣುಗಳನ್ನು ಟ್ರ್ಯಾಕ್ಟರ್‌ ಹೊಡೆಸಿ ನಾಶ ಮಾಡಿದ್ದಾರೆ.

ಏತನ್ಮಧ್ಯೆ, ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದ ರೈತ ದೇವೇಂದ್ರ ಗೌಡ 3 ಟನ್‌ ಪಪ್ಪಾಯ, ಚಿಕ್ಕಬಳ್ಳಾಪುರ ಜಿಲ್ಲೆ ರೇಣುಮಾಲಹಳ್ಳಿ ಗ್ರಾಮದ ರೈತ ಮುನಿಶಾಮಪ್ಪ ಒಂದು ಲೋಡ್‌ ದ್ರಾಕ್ಷಿಬೆಳೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನ ರೈತ ಸೋಮ 2 ಲೋಡ್‌ ಸಪೋಟಾವನ್ನು ತಿಪ್ಪೆಗೆ ಸುರಿದಿದ್ದಾರೆ. ಪಾಂಡವಪುರ ತಾಲೂಕಿನ ಇಂಗಲಕುಪ್ಪೆ ರೈತ ಸಂತೋಷ್‌ ಒಂದು ಲೋಡ್‌ ಟೊಮೆಟೋವನ್ನು ತನ್ನದೇ ಕೆರೆಗೆ ಸುರಿದಿದ್ದಾರೆ.

ಕೊಪ್ಪಳ ತಾಲೂಕಿನ ಹಟ್ಟಿಗ್ರಾಮದ ರೈತ ಈರಣ್ಣ , 2 ಲಕ್ಷ ರು. ಮೌಲ್ಯದ ಕಲ್ಲಂಗಡಿ ಹಣ್ಣು, ಕೋಲಾರ ತಾಲೂಕಿನ ದಿನ್ನೂರು ಗ್ರಾಮದ ರೈತ ಪ್ರವೀಣ ಮಾರುಕಟ್ಟೆಗೆ ಟೆಂಪೋದಲ್ಲಿ ತಂದಿದ್ದ 2 ಟನ್‌ ಕ್ಯಾಪ್ಸಿಕಂ ಜನರಿಗೆ ಉಚಿತವಾಗಿ ಹಂಚಿದ್ದಾರೆ.

ಇನ್ನು ದ್ರಾಕ್ಷಿಗೆ ಹೆಸರಾಗಿರುವ ಚಿಕ್ಕಬಳ್ಳಾಪುರದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆಯನ್ನು ಕೊಳ್ಳುವವರೇ ಇಲ್ಲದಂತಾಗಿದೆ. ತಾಲೂಕಿನ ರೇಣುಮಾಕಲಹಳ್ಳಿಯ ರೈತರು ಟನ್‌ಗಟ್ಟಲೆ ದ್ರಾಕ್ಷಿಯನ್ನು ತಿಪ್ಪೆಗೆ ಹಾಕುತ್ತಿದ್ದಾರೆ.

ಈ ಮಧ್ಯೆ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೌಲತ್‌ ಪುರದ ರೈತರೊಬ್ಬರು ಬೆಳೆದಿರುವ ಈರುಳ್ಳಿ ಇದೀಗ ಕಟಾವಿಗೆ ಬಂದಿದ್ದು ಕೂಲಿ ಕಾರ್ಮಿಕರು ಸಿಗದೆ, ಮಾರುಕಟ್ಟೆಇಲ್ಲದ್ದರಿಂದ ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ರೈತರ ನೆರವಿಗೆ ಬರುವಂತೆ ಅವರು ಮನವಿ ಮಾಡಿದ್ದಾರೆ.

click me!