ಕರ್ನಾಟಕಕ್ಕೆ ಎಂಟ್ರಿ ಕೊಡುವ ಕಾಸರಗೋಡು - ಮಂಗಳೂರು ಕೇರಳ ಬಾರ್ಡರ್ ಮುಚ್ಚಿರುವ ವಿಚಾರದಲ್ಲಿ, ಮಾಜಿ ಪ್ರಧಾನಿ ದೇವೇಗೌಡ್ರು ಸರ್ಕಾರಕ್ಕೆ ಬರೆದಿರುವ ಪತ್ರಕ್ಕೆ ಸಿಎಂ ಯಡಿಯೂರಪ್ಪ ತೀಕ್ಷ್ಣವಾಗಿ ಮರು ಪತ್ರ ಬರೆದಿದ್ದಾರೆ. ಅದು ಈ ಕೆಳಗಿನಂತಿದೆ ನೋಡಿ.
ಬೆಂಗಳೂರು, (ಏ.05): ಕರ್ನಾಟಕ-ಕೇರಳ ನಡುವಿನ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ಬರೆದಿದ್ದ ಪತ್ರಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಉತ್ತರ ಕೊಟ್ಟಿದ್ದಾರೆ.
ಕೊರೋನಾ ನಿಯಂತ್ರಣ ಕಾರಣಕ್ಕಾಗಿ ಕರ್ನಾಟಕ ಹಾಗೂ ಕೇರಳದ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು ಗಡಿ ಪ್ರದೇಶದ ನಿವಾಸಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಕರ್ನಾಟಕ ಸರ್ಕಾರ ನಡೆ ಚರ್ಚೆಗೆ ಗ್ರಾಸವಾಗುತ್ತಿದ್ದು ನ್ಯಾಯಾಲಯದ ಮೆಟ್ಟಿಲನ್ನೇರಿದೆ. ಈ ನಡುವೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಮೂಲಕ ತುರ್ತು ಸಂಧರ್ಭದಲ್ಲಿ ಚಿಕಿತ್ಸೆಗಾಗಿ ಬರುವ ಅಂಬ್ಯುಲೆನ್ಸ್‌ಗಳನ್ನು ತಡೆದು ನಿಲ್ಲಿಸುವುದು ಅಮಾನವೀಯವಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಇದೀಗ ದೇವೇಗೌಡರ ಈ ಪತ್ರಕ್ಕೆ ಬಿ.ಎಸ್ ಯಡಿಯೂರಪ್ಪ ಉತ್ತರ ನೀಡಿದ್ದಾರೆ.
ಸಿಎಂ ಉತ್ತರ ಕೊಟ್ಟಿರುವ ಪತ್ರದಲ್ಲಿ ಹೀಗಿದೆ "ದಿನಾಂಕ 31.03.2020ರಂದು ನಮ್ಮ ಸರಕಾರಕ್ಕೆ ತಾವು ಬರೆದ ಪತ್ರ ತಲುಪಿದೆ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಪ್ರಾಣ ರಕ್ಷಣೆ ನನ್ನ ಸರಕಾರದ ಹೊಣೆ. ಗಡಿ ಮುಚ್ಚುವ ನಿರ್ಧಾರ ಏಕಾಏಕಿಯಾಗಿ ತೆಗೆದುಕೊಂಡ ನಿರ್ಧಾರವಲ್ಲ. ಪೂರಕ ದಾಖಲೆಗಳನ್ನು ಅವಲೋಕಿಸಿ, ನನ್ನ ಸರಕಾರ ತೆಗೆದುಕೊಂಡಿರುವ ಪ್ರಜ್ಞಾವಂತ ನಿರ್ಧಾರ ಇದಾಗಿದೆ.
ಕಾಸರಗೋಡು ಭಾಗದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿರುವ ವಿಚಾರ, ತಮಗೂ ತಿಳಿದಿರುವ ವಿಚಾರ. ಮಂಗಳೂರಿನ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಇತರ ಆರೋಗ್ಯ ಸಂಬಂಧಿ ಸಂಸ್ಥೆಗಳು ನೀಡಿದ ವರದಿ, ಪೂರಕ ದಾಖಲೆಗಳನ್ನು ಆಧರಿಸಿ, ಗಡಿ ದಿಗ್ಬಂಧನದ ನಿರ್ಧಾರಕ್ಕೆ ಬರಲಾಗಿದೆ.
ಒಂದು ವೇಳೆ ಗಡಿ ತೆರವುಗೊಳಿಸಿದರೆ ನನ್ನ ರಾಜ್ಯದ ನೆಮ್ಮದಿ ಹಾಳಾಗುತ್ತದೆ. ಮೃತ್ಯವನ್ನು ನಾವೇ ಆಲಂಗಿಸಿಕೊಂಡಂತಾಗುತ್ತದೆ. ಕೇರಳದಲ್ಲಿ ವಾಸಿಸುತ್ತಿರುವ ಸಹೋದರ-ಸಹೋದರಿಯರ ಹಿತ ಕಾಪಾಡುವ ಬಗ್ಗೆ ನನಗೂ ಅಂತಃಕರಣವಿದೆ. ಆದರೆ, ಕೊರೊನಾ ಮಹಾಮಾರಿ ಕ್ಷಣಮಾತ್ರದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಹಾಗಾಗಿ, ಗಡಿ ತೆರವು ಮಾಡಿದರೆ, ಎರಡೂ ರಾಜ್ಯದ ನೆಮ್ಮದಿ ಹಾಳು ಮಾಡಿದಂತಾಗುತ್ತದೆ.
ಮಾನವೀಯತೆಯ ದೃಷ್ಟಿಯಿಂದ ಗಡಿ ತೆರವುಗೊಳಿಸಬೇಕು ಎನ್ನುವ ತಮ್ಮ ಮತ್ತು ಸಿದ್ದರಾಮಯ್ಯನವರ ಅಭಿಪ್ರಾಯಕ್ಕೆ ನನ್ನ ಗೌರವವಿದೆ. ಗಡಿ ತೆರವುಗೊಳಿಸಲು ಸಾಧ್ಯವಿಲ್ಲ ಎನ್ನುವ ನನ್ನ ಸರಕಾರದ ನಿರ್ಧಾರದ ಹಿಂದೆ ಬಲವಾದ ಕಾರಣವಿದೆ ಎನ್ನುವುದನ್ನು ತಾವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ನಂಬಿದ್ದೇನೆ. ಕೂರೊನಾ ವಿರಾಟ ಸ್ವರೂಪದ ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ನೀಡಿದ ಸಹಕಾರ ಗಮನಾರ್ಹ. ನಿಮ್ಮಗಳ ಸಹಕಾರ ಮುಂದಿನ ದಿನಗಳಲ್ಲೂ ದೊರೆಯಲಿದೆ ಎನ್ನುವ ನಂಬಿಕೆ, ಆಶಯ ನನಗಿದೆ"