ರಾಜ್ಯದಲ್ಲಿ ಲಾಕ್‌ಡೌನ್ ಎಲ್ಲಿಯವರೆಗೆ? ಸಿಎಂ ಪತ್ರಿಕಾ ಪ್ರಕಟಣೆ ರಿಲೀಸ್

By Suvarna News  |  First Published Mar 30, 2020, 4:49 PM IST

ಮಾರಣಾಂತಿಕ ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೊಳಿಸಿದ 21 ದಿನಗಳ ಲಾಕ್ ಡೌನ್ ಅನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದುವರಿಸುವ ಸಿದ್ಧತೆಯಲ್ಲಿದೆ ಎಂಬ ಊಹಾಪೋಹವನ್ನು ಅಲ್ಲಗಳೆದಿದ್ದು, ಸದ್ಯ ಅಂತಹ ಯಾವುದೇ ಯೋಜನೆ ಇಲ್ಲ ಎಂದು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಬಿಎಸ್‌ವೈ ಪತ್ರಿಕಾ ಪ್ರಕಟಣೆಯೊಂದು ಹೊರಡಿಸಿದ್ದಾರೆ.


ಬೆಂಗಳೂರು(ಮಾ.30): ಸೋಂಕು ಬೀರುತ್ತಿರುವ ದುಷ್ಪರಿಣಾಮಗಳು ಹಾಗೂ ಸರ್ಕಾರ ವಿಧಿಸಿರುವ ನಿರ್ಬಂಧವನ್ನು ಜನರು ಪಾಲಿಸಬೇಕಾದ ಅನಿವಾರ್ಯತೆ ಮತ್ತು ತೋರಬೇಕಾದ ಜವಾಬ್ದಾರಿಗಳ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ನಾಡಿನ ಜನತೆ ಲಾಕ್‍ಡೌನ್‍ಅನ್ನು ನಮ್ಮೆಲ್ಲರ ಒಳಿತಿಗಾಗಿ ಕಟ್ಟುನಿಟ್ಟಾಗಿ ಪಾಲನೆ ಮಾಡಿ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಶಿಸ್ತು ಪಾಲನೆ ಮಾಡಬೇಕಾಗಿರುತ್ತದೆ. ಲಾಕ್​ಡೌನ್ ಅವಧಿ ನಾವು ಕಟ್ಟುನಿಟ್ಟಿನ ಪಾಲನೆ ಮಾಡುವುದರ ಮೇಲೆ ಅವಲಂಬಿತವಾಗಿದೆ ಎಂದು ಸಿಎಂ ಯಡಿಯೂರಪ್ಪಹೇಳಿದ್ದಾರೆ.

Tap to resize

Latest Videos

ಲಾಕ್‌ಡೌನ್‌ ವಿಸ್ತರಣೆ ವದಂತಿ ಅಲ್ಲಗೆಳೆದ ಭಾರತ ಸರ್ಕಾರ!

ಕೊರೋನಾ ವೈರಸ್​ ನಮ್ಮ ತಾಳ್ಮೆಯನ್ನು ಪರೀಕ್ಷಿಸಲೆಂದೇ ಬಂದ ಒಂದು ವಿಪತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ 21 ದಿನಗಳ ಕಾಲ ಲಾಕ್‍ಡೌನ್ ವಿಧಿಸಿದ್ದಾರೆ‌. ಅನಿವಾರ್ಯ ಪರಿಸ್ಥಿತಿಯಿಂದಾಗಿ ಇಡೀ ದೇಶದ ಜನತೆಯ ಕ್ಷಮೆಯನ್ನು ಪ್ರಧಾನಿಗಳು ಕೇಳಿದ್ದಾರೆ. ಒಬ್ಬ ಪ್ರಧಾನಮಂತ್ರಿ ದೇಶದ ಜನತೆಯ ಕ್ಷಮೆ ಕೇಳುವ ಅನಿವಾರ್ಯತೆ ಇದೆಯೆಂದರೆ, ಪರಿಸ್ಥಿತಿಯ ಗಂಭೀರತೆಯನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ದೇಶಕ್ಕೆ ಯಾಕೆ ಜಗತ್ತಿನ ಇತಿಹಾಸದಲ್ಲಿಯೇ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಈಗ ಇಂತಹ ಪರಿಸ್ಥಿತಿ ಬಂದಿದೆ ಎಂದರೆ ಅದನ್ನು ನಾವು ಎದುರಿಸಲೇಬೇಕಾಗಿದೆ. ನಾವು ಪ್ರಧಾನಿಗಳ ಕೆಲಸದ ಬಗ್ಗೆ ಮೆಚ್ಚುಗೆ ಮತ್ತು ಹೆಮ್ಮೆ ಪಡುವುದು ಮಾತ್ರವಲ್ಲದೇ ಅವರ ಆಜ್ಞೆಯನ್ನು ಪಾಲಿಸಬೇಕಿದೆ. ಜಾಗೃತ ನಾಗರಿಕರಾದ ನಾವೆಲ್ಲ ಪ್ರಧಾನಮಂತ್ರಿಯವರ ಈ ದಿಟ್ಟ ನಿಲುವನ್ನು ಮತ್ತು ನಿರ್ಧಾರವನ್ನು ಬೆಂಬಲಿಸಬೇಕಾಗಿದೆ ಎಂದು ಯಡಿಯೂರಪ್ಪ ಕರೆ ನೀಡಿದ್ದಾರೆ.

ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಕೆಲವು ನಗರ ಪ್ರದೇಶಗಳಲ್ಲಿನ ಜನತೆ ಕರ್ಫ್ಯೂ ಧಿಕ್ಕರಿಸಿ ರಸ್ತೆಗಳಲ್ಲಿ ಓಡಾಡುವುದು ಮಾಡುತ್ತಿದ್ದಾರೆ. ಈ ಸಮಯದಲ್ಲಿ ನನ್ನ ಕಳಕಳಿಯ ಮನವಿ ಏನೆಂದರೆ, ಎಲ್ಲರೂ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಬೆಲೆ ಕೊಡಿ ಮತ್ತು ಲಾಕ್‍ಡೌನ್ ಪಾಲಿಸಿ. ಪೊಲೀಸರು ಕೂಡ ನಿಮ್ಮ ಹಿತವನ್ನೇ ಬಯಸುವವರು. ಅವರೇನು ನಿಮ್ಮ ವೈರಿಗಳಲ್ಲ. ಪೊಲೀಸರಿಗೆ ಅನಿವಾರ್ಯತೆಯನ್ನು ಸೃಷ್ಟಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಇನ್ನೂ 16 ದಿನಗಳು ನಿಮ್ಮ ಮನೆಯಲ್ಲಿಯೇ ಇರಿ. ಮನೆಯವರೊಂದಿಗೆ ಕಾಲ ಕಳೆಯಲು ನಿಮಗೆ ಒದಗಿ ಬಂದ ಒಂದು ಸದಾವಕಾಶ ಎಂದು ಭಾವಿಸಿ. ನೀವು ಎಷ್ಟು ಮನೆಯ ಒಳಗಡೆ ಇರುತ್ತೀರೋ ಅದರಿಂದ ನಿಮಗೆ ಮತ್ತು ದೇಶಕ್ಕೆ ಒಳ್ಳೆಯದಾಗುತ್ತದೆ. ಮನೆಯಲ್ಲಿದ್ದು ಪುಸ್ತಕಗಳನ್ನು ಓದಿರಿ. ಬಡವರು ಕೂಡ ನೀವಿದ್ದ ಸ್ಥಳದಲ್ಲಿಯೇ ಸಕಾರಾತ್ಮಕ ಸದಾಕಾಲ ಚಟುವಟಿಕೆಗಳಲ್ಲಿ ಕಾಲ ಕಳೆಯಿರಿ ಎಂದು ಸಲಹೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಕೊರೋನಾ ವೈರಸ್ ಪೀಡಿತ ನೂರಾರು ಜನರ ಪ್ರಾಣ ಉಳಿಸಲು ಸತತವಾಗಿ ಕೆಲಸದಲ್ಲಿ ತೊಡಗಿರುವ ವೈದ್ಯರು, ದಾದಿಯರು, ಆರೋಗ್ಯ ಸಿಬ್ಬಂದಿ ಮತ್ತು ನಾಗರಿಕ ಸೇವೆಯಲ್ಲಿ ತೊಡಗಿರುವ ಸಾವಿರಾರು ಕಾರ್ಯಕರ್ತರಿಗೆ ನಾವುಗಳು ನೈತಿಕ ಬೆಂಬಲ ವ್ಯಕ್ತಪಡಿಸೋಣ. ಅವರ ಮನೋಸ್ಥೈರ್ಯ ಕುಗ್ಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ಲಾಕ್‌ಡೌನ್ ಮುಗಿಯಲು ಕಟ್ಟುನಿಟ್ಟಿನ ಪಾಲನೆ ಅಗತ್ಯ
ಲಾಕ್‍ಡೌನ್ ಬೇಗ ಮುಗಿಯಲು ಕಟ್ಟುನಿಟ್ಟಿನ ಪಾಲನೆ ಅಗತ್ಯ. ನಿಮ್ಮ ಆಹಾರ, ಊಟಕ್ಕೆ ತೊಂದರೆಯಾಗದಂತೆ ಸರಕಾರ ಎಚ್ಚರ ವಹಿಸಿದೆ. ಯಾವುದೇ ಸುಳ್ಳು ಸುದ್ದಿಗಳಿಗೆ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ. ನೀವು ಎಷ್ಟು ಕಟ್ಟುನಿಟ್ಟಿನಿಂದ ಮನೆಯಲ್ಲಿ ಇರುವುದನ್ನು ಪಾಲಿಸುತ್ತೀರೋ ಅಷ್ಟು ಬೇಗ ಅಂದರೆ ಏಪ್ರಿಲ್ 14 ಕ್ಕೆ ಲಾಕ್‍ಡೌನ್ ಮುಗಿಯುವುದು.  ಲಾಕ್‍ಡೌನ್ ಪರಿಸ್ಥಿತಿ ನಿಮ್ಮ ಕರ್ಫ್ಯೂ ಪಾಲನೆ ಮೇಲೆ ಅವಲಂಬಿತವಾಗಿದೆ. ಇನ್ನೊಮ್ಮೆ ನಿಮ್ಮೆಲ್ಲರಲ್ಲಿ ಮನವಿ ಏನೆಂದರೆ ಕಟ್ಟುನಿಟ್ಟಾಗಿ ಕರ್ಫ್ಯೂ ಪಾಲಿಸಿ ಎಂದು ಸಿಎಂ ಯಡಿಯೂರಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸೋಂಕು ಬೀರುತ್ತಿರುವ ದುಷ್ಪರಿಣಾಮಗಳು ಹಾಗೂ ಸರ್ಕಾರ ವಿಧಿಸಿರುವ ನಿರ್ಬಂಧವನ್ನು ಜನರು ಪಾಲಿಸಬೇಕಾದ ಅನಿವಾರ್ಯತೆ ಮತ್ತು ತೋರಬೇಕಾದ ಜವಾಬ್ದಾರಿಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. pic.twitter.com/dlxCvgqZpO

— CM of Karnataka (@CMofKarnataka)
click me!