ಮೈಸೂರಿಗೂ ತಬ್ಲೀಘಿ ಜಮಾತ್‌ ಸಂಕಟ: ಒಂದೇ ದಿನ 7 ಜನರಲ್ಲಿ ಸೋಂಕು ದೃಢ

By Kannadaprabha NewsFirst Published Apr 5, 2020, 10:16 AM IST
Highlights

ಮೈಸೂರಿನಲ್ಲಿ ಶನಿವಾರ 7 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಬ್ಬರು ಜ್ಯುಬಿಲಿಯಂಟ್‌ ಕಾರ್ಖಾನೆಯ ಸೋಂಕಿತರಾದ ಪಿ 52 ಮತ್ತು ಪಿ 78ನ ಮೂಲಕ ಸೋಂಕು ತಗುಲಿದೆ. ಉಳಿದ ಐದು ಮಂದಿ ದೆಹಲಿ ಮೂಲದವರಾಗಿದ್ದು, ತಬ್ಲೀಘಿ ಜಮಾತ್‌ಗೆ ಸೇರಿದವರು.

ಮೈಸೂರು(ಏ.05): ದೆಹಲಿ ಮೂಲದ ತಬ್ಲೀಘಿ ಜಮಾತ್‌ಗೆ ಸೇರಿದ ಐವರಲ್ಲಿ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಂಡ್ಯ ಮತ್ತು ಬೆಂಗಳೂರಿನಲ್ಲಿ ಸಂಪರ್ಕಿತರ ಬಗ್ಗೆ ಪರಿಶೀಲಿಸುವಂತೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ತಿಳಿಸಿದ್ದಾರೆ.

ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಅವರು, ಮೊನ್ನೆವರೆಗೆ 21 ಮಂದಿ ಸೋಂಕಿತರಿದ್ದರು. ಆದರೆ ಇಂದು 7 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಬ್ಬರು ಜ್ಯುಬಿಲಿಯಂಟ್‌ ಕಾರ್ಖಾನೆಯ ಸೋಂಕಿತರಾದ ಪಿ 52 ಮತ್ತು ಪಿ 78ನ ಮೂಲಕ ಸೋಂಕು ತಗುಲಿದೆ. ಉಳಿದ ಐದು ಮಂದಿ ದೆಹಲಿ ಮೂಲದವರಾಗಿದ್ದು, ತಬ್ಲೀಘಿ ಜಮಾತ್‌ಗೆ ಸೇರಿದವರು. ಸುಮಾರು 10 ಮಂದಿ ಜನವರಿ ಅಂತ್ಯದಲ್ಲಿಯೇ ಮೈಸೂರಿಗೆ ಬಂದು ಫೆಬ್ರವರಿ ತಿಂಗಳು ಪೂರ್ತಿ ಮೈಸೂರಿನಲ್ಲಿಯೇ ಉಳಿದಿದ್ದರು.

ಲಾಕ್‌ಡೌನ್‌: ಕೊಳೆಗೇರಿ ನಿವಾಸಿಗಳಿಗೆ 10 ಸಾವಿರ ಲೀಟರ್ ಹಾಲು

ಮಾ. 13 ರಿಂದ 30 ರವರೆಗೆ ಮಂಡ್ಯಕ್ಕೆ ತೆರಳಿದ್ದರು. ಮತ್ತೆ ಮೈಸೂರಿಗೆ ಬರುವಾಗ ಚೆಕ್‌ಪೋಸ್ವ್‌ನಲ್ಲಿ ತಪಾಸಣೆ ನಡೆಸುವ ವೇಳೆ ಇವರು ಸ್ಥಳೀಯರಲ್ಲ ಎಂಬುದು ತಿಳಿದು ತಪಾಸಣೆಗೆ ಒಳಪಡಿಸಲಾಯಿತು. ಹತ್ತು ಮಂದಿಯ ಪೈಕಿ ಐವರಿಗೆ ಸೋಂಕು ದೃಢಪಟ್ಟಿದೆ. ಮೈಸೂರಿನಲ್ಲಿ ಇವರಿಗೆ ಪ್ರಾಥಮಿಕ ಸಂಪರ್ಕ ಬಹಳ ಕಡಿಮೆ. ಸುಮಾರು 8 ಮಂದಿ ಮಾತ್ರ. ಅವರನ್ನು ಕೊರಂಟೈನ… ನಲ್ಲಿ ಇರಿಸಲಾಗಿದೆ. ಆದರೆ ಇವರಿಗೆ ಸೋಂಕು ತಗುಲಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಇವರಲ್ಲಿ ಒಬ್ಬರು ಬೆಂಗಳೂರಿಗೆ ತೆರಳಿದ್ದ ಬಗ್ಗೆ ಮಾಹಿತಿ ಇದೆ. ಆದ್ದರಿಂದ ಮಂಡ್ಯ ಅಥವಾ ಬೆಂಗಳೂರಿನಲ್ಲಿ ಸೋಂಕು ತಗಲಿರಬಹುದು. ಈಗ ಬೆಂಗಳೂರು ಮತ್ತು ಮಂಡ್ಯ ಜಿಲ್ಲಾಡಳಿತ ಕೂಡ ತನಿಖೆ ನಡೆಸುತ್ತಿದೆ ಎಂದರು.

ಸಂಜೆ 6 ರ ಬಳಿಕ ಎಲ್ಲಾ ಅಂಗಡಿ ಬಂದ್‌:

ನಗರದಲ್ಲಿ ಅನಗತ್ಯವಾಗಿ ಸಂಚರಿಸಿದ ಸುಮಾರು 500ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ. ಆದರೂ ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಸಂಜೆ 6 ಗಂಟೆ ಬಳಿಕ ಆಸ್ಪತ್ರೆ, ಔಷಧ ಮತ್ತು ಆಹಾರ ಪೊಟ್ಟಣ ಪೂರೈಸುವ ಮಳಿಗೆಯನ್ನು ಹೊರತುಪಡಿಸಿ, ದಿನಸಿ, ತರಕಾರಿ ಅಂಗಡಿ ಸೇರಿದಂತೆ ಎಲ್ಲಾ ಅಂಗಡಿಗಳು ತೆರೆಯಬಾರದು. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇಬ್ಬರಿಗೆ ಬಿಡುಗಡೆ ಭಾಗ್ಯ

ಜಿಲ್ಲೆಯಲ್ಲಿ ಮೊದಲು ಸೋಂಕು ಕಂಡುಬಂದ ಪಿ- 20 ಮತ್ತು ಪಿ- 27 ಅವರು 14 ದಿನಗಳ ನಿಗಾ ಅವಧಿ ಪೂರ್ಣಗೊಂಡಿದೆ. ಇವರಿಬ್ಬರೂ ವಿದೇಶದಿಂದ ಬಂದವರು. ಇವರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿ ನೆಗೆಟಿವ್‌ ಬಂದರೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ವಿವರಿಸಿದರು. ಜಿಲ್ಲೆಯಲ್ಲಿ ಒಟ್ಟು 2,833 ಮಂದಿ ಆರೋಗ್ಯದ ಮೇಲೆ ನಿಗಾ ವಹಿಸಲಾಗಿತ್ತು. ಈ ಪೈಕಿ ಜ್ಯುಬಿಲಿಯಂಟ್‌ ನೌಕರರು ಸೇರಿ 1626 ಮಂದಿಯನ್ನು ಮನೆಯಲ್ಲಿಯೇ ಇರಿಸಿ ನಿಗಾವಹಿಸಲಾಗುತ್ತಿದೆ. 1179 ಮಂದಿ 14 ದಿನಗಳ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.

ಸೋಂಕು ದೃಢಪಟ್ಟ28 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಎಂದು ಅವರು ಹೇಳಿದರು. ಸೋಂಕು ಪತ್ತೆ ಹಚ್ಚುವ ಆರ್‌ಎನ್‌ಎ ಎಕ್ಸಾಟ್ರಾಕ್ಟರ್‌ ಪರೀಕ್ಷಾ ಯಂತ್ರ ಬಂದಿದೆ. ಇದರಿಂದಾಗಿ ಪರೀಕ್ಷೆ ಬೇಗ ನಡೆಯುತ್ತದೆ. ಜೊತೆಗೆ ಸಿಎಫ್‌ ಟಿಆರ್‌ಐ ಸಿಬ್ಬಂದಿ 2 ಪಿಸಿಆರ್‌ ಯಂತ್ರವನ್ನು ಏ. 5 ರಂದು ನೀಡುತ್ತಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಈಗ ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಯ ಪರೀಕ್ಷೆ ಬೇಗ ಆಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

click me!