ಧರ್ಮ ಪ್ರಚಾರಕ್ಕೆ ಬಂದವರಿಗೆ ಮಸೀದಿಯಲ್ಲೇ ಹೋಂ ಕ್ವಾರೆಂಟೈನ್

By Kannadaprabha NewsFirst Published Apr 2, 2020, 11:27 AM IST
Highlights

ಧರ್ಮ ಪ್ರಚಾರಕ್ಕಾಗಿ ಮಂಡ್ಯಕ್ಕೆ ತೆಲಂಗಾಣ ಹಾಗೂ ಗುಜರಾತ್‌ನಿಂದ 55 ಮಂದಿ ಮುಸ್ಲಿಂ ಪ್ರಚಾರಕರು ಆಗಮಿಸಿದ್ದಾರೆ. ಅವರೆಲ್ಲರನ್ನೂ ಈಗ ಮಸೀದಿಯಲ್ಲೇ ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ಮಂಡ್ಯ(ಏ.02): ಧರ್ಮ ಪ್ರಚಾರಕ್ಕಾಗಿ ಮಂಡ್ಯಕ್ಕೆ ತೆಲಂಗಾಣ ಹಾಗೂ ಗುಜರಾತ್‌ನಿಂದ 55 ಮಂದಿ ಮುಸ್ಲಿಂ ಪ್ರಚಾರಕರು ಆಗಮಿಸಿದ್ದಾರೆ. ಅವರೆಲ್ಲರನ್ನೂ ಈಗ ಮಸೀದಿಯಲ್ಲೇ ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ವಿಷಯವನ್ನು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಧರ್ಮ ಪ್ರಚಾರಕ್ಕೆ ಆಗಮಿಸಿರುವ ಎರಡು ರಾಜ್ಯಗಳ 55 ಮಂದಿ ಪ್ರಚಾರಕನ್ನು ಈಗ ಮಸೀದಿಯಲ್ಲೇ ಕ್ವಾರಂಟೈನ್‌ ಮಾಡಲಾಗಿದೆ. ಕಳೆದ 28 ದಿನಗಳಿಂದ ಮಂಡ್ಯದಲ್ಲೇ ವಾಸ್ತವ್ಯ ಮಾಡಿರುವ ಹಿನ್ನೆಲೆಯಲ್ಲಿ ಯಾರಿಗೂ ಕೊರೋನಾ ಶಂಕೆ ಕೂಡ ಇಲ್ಲ. ಆದರೂ ಮುಂಜಾಗೃತ ಕ್ರಮವಾಗಿ ಹಾಗೂ ಸರ್ಕಾರದ ನಿರ್ದೇಶನದಂತೆ ಕ್ವಾರೆಂಟೇನ್‌ನಲ್ಲಿ ಇಡಲಾಗಿದೆ ಎಂದು ಹೇಳಿದರು.

ತೆಲಾಂಗಣದಲ್ಲಿ ಮೃತರ ಸಂಖ್ಯೆ 9ಕ್ಕೆ; 30 ಮಂದಿಯಲ್ಲಿ ಸೋಂಕು ಪತ್ತೆ

ಈಗ ಧರ್ಮ ಪ್ರಚಾರಕ್ಕಾಗಿ ಬಂದಿರುವ ಎಲ್ಲರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಕಟ್ಟು ನಿಟ್ಟಿನ ಆದೇಶ ನೀಡಿ ಎಲ್ಲಿಯೂ ಹೋಗದಂತೆ ಸೂಚನೆ ಕೂಡ ನೀಡಿಲಾಗಿದೆ. ತಮ್ಮ ತಮ್ಮ ರಾಜ್ಯಗಳಿಗೆ ಹೋಗಲು ಅನುಮತಿಯನ್ನು ಎಲ್ಲರೂ ಕೇಳಿದ್ದಾರೆ. ಆದರೆ ಸರ್ಕಾರ ಮಾರ್ಗದರ್ಶನದಂತೆ ಏ. 14ರವರೆಗೂ ಯಾರಿಗೂ ಹೊರಗೆ ಹೋಗಲು ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಯಾರೂ ದೆಹಲಿಗೆ ಹೋಗಿಲ್ಲ:

ಮಂಡ್ಯದ ಮುಸ್ಲಿಂಮರಾರೂ ದೆಹಲಿ ಮಸೀದಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಈ ಕುರಿತಂತೆ ಎಲ್ಲವನ್ನೂ ಪರಿಶೀಲನೆ ಮಾಡಲಾಗಿದೆ. ಕೊರೋನಾ ವೈರಸ್‌ ಶಂಕೆಯ ಪ್ರಕರಣಗಳೂ ಇಲ್ಲ ಜಿಲ್ಲಾಧಿಕಾರಿ ವೆಂಕಟೇಶ್‌ ಸ್ಪಷ್ಟನೆ ನೀಡಿದ್ದಾರೆ.

ರೇಷನ್‌ ವಿತರಣೆ ಆರಂಭ:

ಸುದೀರ್ಘ ದಿನಗಳ ಕಾಲ ಲಾಕ್‌ಡೌನ್‌ ಆಗಿರುವ ಹಿನ್ನಲೆ ಏಕಕಾಲಕ್ಕೆ 2ತಿಂಗಳ ಪಡಿತರ ವಿತರಣೆ ಮಂಡ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಆರಂಭಿಸಲಾಗಿದೆ. ಎರಡು ತಿಂಗಳಿಗೆ ಸಾಕಾಗುವಷ್ಟುಒಟ್ಟಿಗೆ ಪಡಿತರ ನೀಡಲಿರುವ ವಿತರಕರು ಸರ್ಕಾರದ ಆದೇಶದಂತೆ ಏಪ್ರಿಲ್/ಮೇ ತಿಂಗಳ ರೇಷನ್‌ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಒಬ್ಬ ಸದಸ್ಯರಿರುವ ಕಾರ್ಡ್‌ಗೆ ಈಗ 10ಕೆಜಿ ಅಕ್ಕಿ 4ಕೆಜಿ ಗೋಧಿ ವಿತರಣೆ ಮಾಡಲಾಗುವುದು. ಒಂದು ಕಾರ್ಡ್‌ನಲ್ಲಿ 4ಸದಸ್ಯರಿದ್ದರೆ 40ಕೆಜಿ ಅಕ್ಕಿ 4ಕೆಜಿ ಗೋಧಿ ಅಂತ್ಯೋದಯ ಕಾರ್ಡ್‌ಗೆ 70ಕೆಜಿ ಅಕ್ಕಿ ವಿತರಣೆ ಮಾಡಲು ವಿತರಕರು ಸಿದ್ದತೆ ಮಾಡಿಕೊಂಡಿದ್ದಾರೆ.

ಅಂತರ ಕಾಯ್ದುಕೊಳ್ಳಲು ಮನವಿ

ಪಡಿತರ ವಿತರಣೆ ವೇಳೆ ಜನರ ಗುಂಪಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನ್ಯಾಯಬೆಲೆ ಅಂಗಡಿ ಮುಂದೆ ಅಂತರ ಕಾಯುವ ಮಾರ್ಕ್ 3 ಅಡಿಗಳ ಅಂತರಕ್ಕೆ ಮಾರ್ಕ ಹಾಕಿರುವ ರೇಷನ್ ವಿತರಕರು ರೇಷನ್ ಪಡೆಯುವ ಮುನ್ನ ಗ್ರಾಹಕರು ಸ್ಯಾನಿಟೈಸರ್‌ನಿಂದ ಕೈ ಸ್ವಚ್ಛಗೊಳಿಸಿಕೊಳ್ಳಬೇಕು. ಬಯೋಮೆಟ್ರಿಕ್ ಸರ್ವರ್‌ ಸಮಸ್ಯೆ ಎದುರಾದರೆ ಮೊಬೈಲ್ ಒಟಿಪಿ ಪಡೆದು ರೇಷನ್ ನೀಡಲು ಸೂಚಿಸಲಾಗಿದೆ. ಹೆಚ್ಚುವರಿ ವಿತರಣೆಗೆ ಬೇಕಾಗುವ ರೇಷನ್ ದಾಸ್ತಾನು ಮಾಡಿರುವ ವಿತರಕರು ಮುಂದಿನ ತಿಂಗಳು ಅಕ್ಕಿ ಗೋಧಿ ಜೊತೆ ಸಕ್ಕರೆ, ಬೆಳೆ, ಉಪ್ಪು ವಿತರಣೆ ಮಾಡಲಿದ್ದಾರೆಂದು ಹೇಳಿದರು.

click me!