ಫೇಸ್‌ಬುಕ್‌ನಲ್ಲಿ ಸುಳ್ಳು ಸುದ್ದಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು| ವ್ಯಕ್ತಿಯ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಐಗಳಿ ಠಾಣೆಯ ಪೊಲೀಸರು| ಸುಳ್ಳು ವದಂತಿ ಹರಡಿಸುವ ಕಿಡಿಗೇಡಿಗಳಿಗೆ ಬಿಸಿ ಮುಟ್ಟಿಸಿದ ಬೆಳಗಾವಿ ಪೊಲೀಸರು|
ಬೆಳಗಾವಿ(ಮಾ.26): ಕೊರೋನಾ ವೈರಸ್ ಸೊಂಕಿತ ಐವರು ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸುಳ್ಳು ಸುದ್ದಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಜಿಲ್ಲೆಯ ಐಗಳಿ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೌಡೇಶ ಬಿರಾದಾರ ತುಂಗಳ ಎಂಬಾತನ ಹೆಸರಿನ ಫೇಸ್‌ಬುಕ್ ಅಕೌಂಟ್ ನಿಂದ ಮಾ.24 ರಂದು ಗೋವಾಗೆ ದುಡಿಯಲು ಹೋದ ಐಗಳಿ ಗ್ರಾಮದ 5 ಜನರು ಕೊರೋನಾ ಸೊಂಕಿಗೆ ಬಲಿ, ಇವತ್ತು ಗೋವಾದಿಂದ ಮರಳಿ ಬರುವಾಗ ಅಥಣಿಯಲ್ಲಿ ವಶಕ್ಕೆ ಪಡೆದುಕೊಂಡ ಎಂದು ಬರೆದು ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಡಿದ್ದ.
ಕೊರೋನಾ ವೈರಸ್ ಕಾಟಕ್ಕಿಂತ ಸುಳ್ಳು ಸುದ್ದಿ ಕಾಟವೇ ಹೆಚ್ಚು!
ಕೊರೋನಾ ಸೊಂಕಿನ ಬಗ್ಗೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ನೆಮ್ಮದಿ ಹಾಳು ಮಾಡಿದ ಅಪರಾಧದ ಮೇಲೆ ಐಗಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ ಹರಡಿಸುವ ಕಿಡಿಗೇಡಿಗಳಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ಬೆಳಗಾವಿ ಪೊಲೀಸರು ಕೈಗೊಂಡಿದ್ದಾರೆ.