ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದೆ. ಕ್ಯಾರ್ ಚಂಡ ಮಾರುತ ಕರಾವಳಿಗೆ ಅಪ್ಪಳಿಸುತ್ತಿದ್ದರೆ ಮಲೆನಾಡಿನಲ್ಲಿ ಪರಿಣಾಮ ಉಂಟಾಗುತ್ತಿದೆ. ಭಾರಿ ಮಳೆ ಬಿರುಗಾಳಿಗೆ ಮಲೆನಾಡಿನ ಅನೇಕ ಜಿಲ್ಲೆಗಳು ತತ್ತರಿಸುತ್ತಿವೆ.
ಚಿಕ್ಕಮಗಳೂರು (ಅ.25): ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಮಳೆಯಬ್ಬರ ಹೆಚ್ಚಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಕ್ಯಾರ್ ಚಂಡಮಾರುತದ ಪ್ರಭಾವದಿಂದ ಭಾರೀ ಬಿರುಗಾಳಿ ಬೀಸುತ್ತಿದೆ. ಮೂಡಿಗೆರೆ, ಶೃಂಗೇರಿ, NR ಪುರ, ಕೊಪ್ಪ ಕೊಟ್ಟಿಗೆ ಹಾರದಲ್ಲಿ ಮತ್ತೆ ಮಳೆಯ ಆರ್ಭಟ ಜೋರಾಗಿದೆ.
ಬಿರುಗಾಳಿ ಬೀಸುತ್ತುದ್ದು, ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಮನೆ, ಶಾಲೆ ಹಾಗೂ ಗ್ರಾಮ ಪಂಚಾಯಿತಿ ಕಟ್ಟಡಗಳ ಹಂಚುಗಳು ಹಾರಿ ಹೋಗಿವೆ. ಹೇಮಾವತಿ ನದಿಯಲ್ಲಿಯೂ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಮಲೆನಾಡಿಗರಲ್ಲಿ ಮತ್ತೆ ಆತಂಕ ಮೂಡಿಸಿದೆ. ಚಾರ್ಮಾಡಿ ಘಾಟ್ ಪ್ರದೇಶದಲ್ಲಿಯೂ ವರುಣ ಅಬ್ಬರಿಸುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿದ್ದು, ಕಳೆದೆರಡು ದಿನಗಳಿಂದ ವಿದ್ಯುತ್ ಸಂಪರ್ಕವು ಕಡಿತವಾಗಿದೆ.