
ಚಿಕ್ಕಮಗಳೂರು: ಸೇತುವೆಗೆ ತಡೆಗೋಡೆ ಇಲ್ಲದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ರಭಸವಾಗಿ ಹರಿಯುತ್ತಿದ್ದ ನದಿಗೆ ಬಿದ್ದಿದೆ. ಕಾರಿನಲ್ಲಿದ್ದ ಬೆಂಗಳೂರು ಮೂಲದ ಪ್ರವಾಸಿ ದಂಪತಿ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನಲ್ಲಿ ಸಂಭವಿಸಿದೆ. ಕಳಸ ತಾಲೂಕಿನ ಗಣಪತಿ ಕಟ್ಟೆ ಬಳಿ ಈ ಅಪಘಾತ ನಡೆದಿದೆ. ದಂಪತಿ ಪ್ರಯಾಣಿಸುತ್ತಿದ್ದ ಕಾರು ನೇರವಾಗಿ ಸೋಮಾವತಿ ನದಿಯ ಮಧ್ಯಕ್ಕೆ ಬಿದ್ದಿದೆ.
ಸೋಮಾವತಿ ನದಿಗೆ ನಿರ್ಮಿಸಲಾಗಿರುವ ಸೇತುವೆಗೆ ಯಾವುದೇ ಸುರಕ್ಷತಾ ತಡೆಗೋಡೆ (Retaining Wall) ಇಲ್ಲದಿರುವುದೇ ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಕಾರು ನಿಯಂತ್ರಣ ತಪ್ಪಿ ನದಿಗೆ ಬೀಳುತ್ತಿದ್ದಂತೆ ನದಿಯ ಮಧ್ಯದಲ್ಲಿದ್ದ ಬೃಹತ್ ಬಂಡೆಯೊಂದು ಅಡ್ಡ ಸಿಕ್ಕಿದೆ. ನದಿಯಲ್ಲಿ ನೀರಿನ ಹರಿವು ರಭಸವಾಗಿದ್ದರೂ ಕಾರು ಈ ಬಂಡೆಯ ಮಧ್ಯೆ ಸಿಲುಕಿಕೊಂಡಿದ್ದರಿಂದ ಕೊಚ್ಚಿ ಹೋಗದೆ ಅಲ್ಲಿಯೇ ನಿಂತಿದೆ. ಒಂದು ವೇಳೆ ಈ ಬಂಡೆ ಅಡ್ಡ ಸಿಗದಿದ್ದರೆ ದಂಪತಿ ಕಾರಿನ ಸಮೇತ ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಭೀತಿ ಇತ್ತು.
ಕಾರು ನದಿಗೆ ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿಗಳು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ನದಿಯ ಮಧ್ಯದಲ್ಲಿದ್ದ ಕಾರಿನ ಬಳಿ ತೆರಳಿ ಅದೃಶ್ಯವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದ ಬೆಂಗಳೂರು ಮೂಲದ ಪ್ರವಾಸಿ ದಂಪತಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಪಾಯಕಾರಿ ಸೇತುವೆಯ ಕುರಿತು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಜಾಗದಲ್ಲಿ ವರ್ಷಕ್ಕೆ ಕನಿಷ್ಠ 3 ರಿಂದ 4 ಅಪಘಾತಗಳು ಸಂಭವಿಸುತ್ತಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹಲವು ಬಾರಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.