ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ತಮ್ಮ ವಾಸದ ಮನೆ ಹಾಗೂ ಜಮೀನು ಬಿಟ್ಟು ಕೊಡಲು ಈವರೆಗೆ 44 ಕುಟುಂಬಗಳು ಒಪ್ಪಿಗೆ ಪತ್ರವನ್ನು ಮೂಡಿಗೆರೆ ತಾಲೂಕು ಆಡಳಿತಕ್ಕೆ ನೀಡಿವೆ.
ಚಿಕ್ಕಮಗಳೂರು (ನ.01): ಭಾರೀ ಮಳೆಗೆ ತತ್ತರಿಸಿ ಬದುಕು ಕಳೆದುಕೊಂಡಿರುವ ಮೂಡಿಗೆರೆ ತಾಲೂಕಿನ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ತಮ್ಮ ವಾಸದ ಮನೆ ಹಾಗೂ ಜಮೀನು ಬಿಟ್ಟು ಕೊಡಲು ಈವರೆಗೆ 44 ಕುಟುಂಬಗಳು ಒಪ್ಪಿಗೆ ಪತ್ರವನ್ನು ಮೂಡಿಗೆರೆ ತಾಲೂಕು ಆಡಳಿತಕ್ಕೆ ನೀಡಿವೆ.
ಮಧುಗುಂಡಿಯ 18, ಅಲೇಖಾನ್ ಹೊರಟ್ಟಿಯ 15, ಮಲೆಮನೆ ಮೇಗೂರು 8, ಜಾವಳಿ ಮಲೆಮನೆ ಗ್ರಾಮದ 3 ಕುಟುಂಬಗಳು ಒಪ್ಪಿಗೆ ಪತ್ರ ನೀಡಿವೆ.
ಮನೆ ಹಾಗೂ ಜಮೀನು ಕಳೆದುಕೊಂಡಿರುವ ಮೂಡಿಗೆರೆ ತಾಲೂಕಿನ ಒಟ್ಟು 70 ಕುಟುಂಬಗಳಲ್ಲಿ 44 ಕುಟುಂಬಗಳು ತಾವು ಬೇರೆಡೆಗೆ ಹೋಗಲು ಸಿದ್ಧವಿರುವುದಾಗಿ ಹೇಳಿದ್ದು, ಇನ್ನುಳಿದ 26 ಕುಟುಂಬಗಳು ಈವರೆಗೆ ತಟಸ್ಥವಾಗಿವೆ. ಮಧುಗುಂಡಿ ಗ್ರಾಮದ 5 ಹಾಗೂ ಯಡೂರು ಗ್ರಾಮದ 7 ಕುಟುಂಬಗಳು ತಾವು ಈ ಹಿಂದಿದ್ದ ಸ್ಥಳದಲ್ಲೇ ವಾಸವಿರುವುದಾಗಿ ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
139 ಮನೆಗಳ ಸ್ಥಳಾಂತರ: ಮೂಡಿಗೆರೆ ತಾಲೂಕಿನಲ್ಲಿ ಕಳೆದ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಗೆ ಸಂಪೂರ್ಣವಾಗಿ ಹಾಳಾಗಿರುವ, ಮುಂದೆ ನೆರೆ ಬಂದರೆ ಸಂಪರ್ಕ ಕಳೆದುಕೊಳ್ಳಬಹುದಾದ ಮನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು 199 ಮನೆಗಳನ್ನು ಮೂಡಿಗೆರೆ ತಾಲೂಕು ಆಡಳಿತ ಗುರುತು ಮಾಡಿದೆ. ಈ ಪೈಕಿ 139 ಕುಟುಂಬಗಳು ತಮಗೆ ಬೇರೆಡೆಗೆ ವಾಸದ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟರೆ ಈಗ ವಾಸವಿರುವ ಮನೆಯ ಜಾಗವನ್ನು ಬಿಟ್ಟುಕೊಡಲು ಒಪ್ಪಿಗೆ ಪತ್ರವನ್ನು ನೀಡಿದ್ದಾರೆ. ಇನ್ನು 60 ಕುಟುಂಬಗಳು ಈವರೆಗೆ ಪ್ರಮಾಣಪತ್ರ ಸಲ್ಲಿಸಿಲ್ಲ. 6 ಕುಟುಂಬಗಳು ಜಮೀನು ಕಳೆದುಕೊಂಡಿದ್ದು, ಈ ಪೈಕಿ 3 ಕುಟುಂಬಗಳು ತಮ್ಮ ಜಮೀನು ಸರ್ಕಾರಕ್ಕೆ ಬಿಟ್ಟುಕೊಡಲು ಒಪ್ಪಿಗೆ ಪತ್ರ ನೀಡಿದ್ದಾರೆ.
ಜಾಗ ಗುರುತು: ನಿರಾಶ್ರಿತರಿಗೆ ಮನೆ ಹಾಗೂ ಜಮೀನು ನೀಡಲು ತಾಲೂಕು ಆಡಳಿತ ಈಗಾಗಲೇ ಕಳಸ, ಗೋಣಿಬೀಡು ಹೋಬಳಿಗಳಲ್ಲಿ ಸುಮಾರು 365 ಎಕರೆ ಜಾಗವನ್ನು ಗುರುತು ಮಾಡಿದೆ. ಈಗ ಒಪ್ಪಿಗೆ ಪತ್ರ ಸಲ್ಲಿಸಿರುವವರ ಸಭೆಯನ್ನು ಕರೆದು ಅವರಿಗೆ ಸೂಕ್ತವಾದ ಪ್ರದೇಶದಲ್ಲಿ ನಿವೇಶನ ಮತ್ತು ಜಮೀನು ನೀಡಲಾಗುವುದು. ಈ ಸಂದರ್ಭದಲ್ಲಿ ಜಮೀನು ಮತ್ತು ಮನೆ ಒಂದೇ ಕಡೆ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.
ಈ ಎಲ್ಲ ಪ್ರಕ್ರಿಯೆ ಮುಗಿದ ನಂತರ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಸರ್ಕಾರದ ಮಟ್ಟದಲ್ಲಿ ಅಂತಿಮ ಆದೇಶವಾಗಲಿದೆ.
ಮನೆ ಹಾಗೂ ಜಮೀನಿನ ಜಾಗವನ್ನು ಬಿಟ್ಟುಕೊಡಲು ಮೂಡಿಗೆರೆ ತಾಲೂಕಿನ 44 ಕುಟುಂಬಗಳು ಒಪ್ಪಿಗೆ ಪತ್ರ ಸಲ್ಲಿಸಿವೆ. ಈ ಅರ್ಜಿಗಳ ಆಧಾರದ ಮೇಲೆ ಮುಂದಿನ ಹಂತದ ಕ್ರಮಗಳನ್ನು ತೆಗೆದುಕೊಳ್ಳಲು ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ
- ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ