ಇವಿ ಕಾರುಗಳ ಚಾರ್ಜಿಂಗ್ ಟೆನ್ಷನ್‌ಗೆ ಗುಡ್‌ಬೈ, ಭಾರತಕ್ಕೆ ಬರ್ತಿವೆ ಬಜೆಟ್ ಸ್ನೇಹಿ ಸಣ್ಣ ಹೈಬ್ರಿಡ್ ಕಾರುಗಳು

Published : Oct 06, 2026, 10:02 PM IST
Maruti Suzuki e Vitara

ಸಾರಾಂಶ

ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಮತ್ತು ಚಾರ್ಜಿಂಗ್ ಸಮಸ್ಯೆಗೆ ಪರಿಹಾರವಾಗಿ ಮುಂದಿನ 18-24 ತಿಂಗಳುಗಳಲ್ಲಿ ಭಾರತಕ್ಕೆ ಹಲವು ಸಣ್ಣ ಹೈಬ್ರಿಡ್ ಕಾರುಗಳು ಲಗ್ಗೆ ಇಡಲಿವೆ. ಮಾರುತಿ, ಹ್ಯುಂಡೈ, ಟೊಯೋಟಾ ಮತ್ತು ರೆನಾಲ್ಟ್ ಕಂಪನಿಗಳು ಕೈಗೆಟುಕುವ ದರದಲ್ಲಿ ಈ ಕಾರುಗಳನ್ನು ಪರಿಚಯಿಸಲಿವೆ.

ಬೆಂಗಳೂರು (ಅ.6): ಎಲೆಕ್ಟ್ರಿಕ್ ವಾಹನಗಳ (EV) ಬ್ಯಾಟರಿ ಖಾಲಿಯಾಗುವ ಮತ್ತು ಚಾರ್ಜಿಂಗ್ ಅನುಕೂಲ ಸಿಗದೆ ಇರುವ ಸಮಸ್ಯೆಗೆ ವಾಹನ ತಯಾರಕ ಸಂಸ್ಥೆಗಳು ಭಾರಿ ಮಾಸ್ಟರ್ ಪ್ಲಾನ್ ರೂಪಿಸಿವೆ. ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಅರ್ಧ ಡಜನ್‌ಗೂ ಹೆಚ್ಚು ಸಣ್ಣ ಹೈಬ್ರಿಡ್ ಕಾರುಗಳು ಕಾಲಿಡಲು ಸಜ್ಜಾಗಿವೆ. ಹೊಸ ಮಾದರಿಗಳ ಆಗಮನದಿಂದಾಗಿ ಮಧ್ಯಮ ವರ್ಗದ ಬಜೆಟ್ ಗ್ರಾಹಕರಿಗೂ ಸಹ ಹೈಬ್ರಿಡ್ ತಂತ್ರಜ್ಞಾನದ ಕಾರುಗಳನ್ನು ಕೈಗೆಟುಕುವ ದರದಲ್ಲಿ ಖರೀದಿಸುವ ಸುವರ್ಣ ಅವಕಾಶ ಲಭಿಸಲಿದೆ.

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ, ಹ್ಯುಂಡೈ, ಟೊಯೋಟಾ ಮತ್ತು ರೆನಾಲ್ಟ್ ಸೇರಿದಂತೆ ಪ್ರಮುಖ ದೈತ್ಯ ಕಂಪನಿಗಳು ಅಗ್ಗದ ದರದ ಹೈಬ್ರಿಡ್ ಮಾದರಿಗಳನ್ನು ಪರಿಚಯಿಸಲು ಭರಪೂರ ಸಿದ್ಧತೆ ನಡೆಸುತ್ತಿವೆ. ಈ ಎಲ್ಲಾ ಕಾರುಗಳನ್ನು ವಿಶೇಷವಾಗಿ 4 ಮೀಟರ್‌ಗಿಂತ ಕಡಿಮೆ ಉದ್ದವಿರುವ 'ಕಾಂಪ್ಯಾಕ್ಟ್' ಕಾರುಗಳ ವಿಭಾಗದಲ್ಲೇ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ.

ಮಾರುತಿಯ ಸಣ್ಣ ಕಾರುಗಳಲ್ಲೇ ಸಿಗಲಿದೆ ಹೈಬ್ರಿಡ್ ತಂತ್ರಜ್ಞಾನ

ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ಅತ್ಯಂತ ಬಜೆಟ್ ಸ್ನೇಹಿ ಹೈಬ್ರಿಡ್ ವ್ಯವಸ್ಥೆಯನ್ನು ಸ್ವತಃ ಸಿದ್ಧಪಡಿಸುತ್ತಿದೆ. ಇದನ್ನು ತನ್ನ ಜನಪ್ರಿಯ ಸಣ್ಣ ಕಾರುಗಳಲ್ಲಿ ಬಳಸಿಕೊಳ್ಳಲು ಕಂಪನಿ ತೀರ್ಮಾನಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಮಾರುತಿಯ ಫ್ರಾಂಕ್ಸ್ (Fronx), ಬಲೆನೋ (Baleno), ಸ್ವಿಫ್ಟ್ (Swift) ಮತ್ತು ಬ್ರೆಝಾ (Brezza) ಕಾರುಗಳು ಈ ಅತ್ಯಾಧುನಿಕ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಲಿವೆ. ಇವುಗಳಲ್ಲಿ ಮೊದಲ ಹೈಬ್ರಿಡ್ ಮಾದರಿಯು 2027ರಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯಿದೆ.

ರೇಸ್‌ನಲ್ಲಿ ಹ್ಯುಂಡೈ, ಟೊಯೋಟಾ ಹಾಗೂ ರೆನಾಲ್ಟ್!

ಮಾರುತಿಗೆ ಪೈಪೋಟಿ ನೀಡಲು ದಕ್ಷಿಣ ಕೊರಿಯಾದ ಹ್ಯುಂಡೈ ಸಂಸ್ಥೆಯು ಭಾರತಕ್ಕಾಗಿ ಪ್ರತ್ಯೇಕ ಸಣ್ಣ ಹೈಬ್ರಿಡ್ ಕಾರನ್ನು ವಿನ್ಯಾಸಗೊಳಿಸುತ್ತಿದ್ದು, ಇದು 2027ರ ಮಧ್ಯಭಾಗದಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ.

ಇನ್ನೊಂದೆಡೆ, ಜಪಾನ್‌ನ ಟೊಯೋಟಾ ಕಂಪನಿಯು ತನ್ನ 'ಅರ್ಬನ್ ಕ್ರೂಸರ್ ಟೈಸರ್' (Urban Cruiser Taisor) ಕಾರಿನ ಹೈಬ್ರಿಡ್ ಆವೃತ್ತಿಯನ್ನು ತರಲು ಸಜ್ಜಾಗಿದೆ. ಈ ಮಾದರಿಯು ಮಾರುತಿ ಫ್ರಾಂಕ್ಸ್ ಹೈಬ್ರಿಡ್ ಆವೃತ್ತಿಯ ಬಿಡುಗಡೆಯ ಬೆನ್ನಲ್ಲೇ ಮಾರುಕಟ್ಟೆಗೆ ಬರಲಿದೆ. ಫ್ರೆಂಚ್ ವಾಹನ ದೈತ್ಯ ರೆನಾಲ್ಟ್ (Renault) ಸಹ ಈ ರೇಸ್‌ನಲ್ಲಿದ್ದು, 'ಬ್ರಿಡ್ಜರ್' (Bridger) ಕಾನ್ಸೆಪ್ಟ್ ಆಧಾರಿತ 4 ಮೀಟರ್‌ಗಿಂತ ಸಣ್ಣದಾದ ಹೊಸ ಅರ್ಬನ್ ಎಸ್‌ಯುವಿ ಸಿದ್ಧಪಡಿಸುತ್ತಿದೆ. ಇದರಲ್ಲಿಯೂ ಹೈಬ್ರಿಡ್ ಪವರ್‌ಟ್ರೇನ್ ಇರಲಿದ್ದು, ಮುಂದಿನ ವರ್ಷದ ಅಂತ್ಯದ ವೇಳೆಗೆ ರಸ್ತೆಗಿಳಿಯಲಿದೆ.

ಇಲ್ಲಿಯವರೆಗೆ ದುಬಾರಿಯಾಗಿದ್ದ ಹೈಬ್ರಿಡ್ ಕಾರುಗಳು; ಈಗ ಪರಿಸ್ಥಿತಿ ಬದಲಾಗಿದ್ದೇಗೆ?

ಪ್ರಸ್ತುತ ಭಾರತದಲ್ಲಿ ಮಾರುತಿ ಸುಜುಕಿ, ಹೋಂಡಾ, ಕಿಯಾ ಮತ್ತು ಟೊಯೋಟಾ ಕಂಪನಿಗಳು ಈಗಾಗಲೇ ಹೈಬ್ರಿಡ್ ಕಾರುಗಳನ್ನು ಮಾರಾಟ ಮಾಡುತ್ತಿವೆಯಾದರೂ, ಅವುಗಳ ಬೆಲೆ 16 ಲಕ್ಷ ರೂಪಾಯಿಗಿಂತಲೂ ಹೆಚ್ಚಾಗಿದೆ. ಅಲ್ಲದೆ, ಸದ್ಯ ಲಭ್ಯವಿರುವ ಹೆಚ್ಚಿನ ಹೈಬ್ರಿಡ್ ಮಾದರಿಗಳು 4 ಮೀಟರ್‌ಗಿಂತ ದೊಡ್ಡದಾಗಿದ್ದು, ಇವುಗಳ ಮೇಲೆ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸುತ್ತಿತ್ತು.

ಆದರೆ ಸಣ್ಣ ಹೈಬ್ರಿಡ್ ಕಾರುಗಳ ಆಗಮನದಿಂದ ಈ ಚಿತ್ರಣ ಸಂಪೂರ್ಣ ಬದಲಾಗಲಿದೆ. ಜಿಎಸ್‌ಟಿ (GST) ವ್ಯವಸ್ಥೆಯಲ್ಲಿನ ಅಪ್‌ಡೇಟ್‌ ನಂತರ, 4 ಮೀಟರ್‌ಗಿಂತ ಸಣ್ಣ ಹೈಬ್ರಿಡ್ ಕಾರುಗಳ ಮೇಲಿನ ತೆರಿಗೆಯನ್ನು ಶೇ.18ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಕಂಪನಿಗಳಿಗೆ ಕಡಿಮೆ ವೆಚ್ಚದಲ್ಲಿ ಕಾರು ತಯಾರಿಸಲು ಮತ್ತು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿದೆ.

ಹೈಬ್ರಿಡ್ ಕಾರುಗಳ ಪ್ರಮುಖ ಲಾಭ ಹಾಗೂ 'CAFE-3' ನಿಯಮ

ಹೈಬ್ರಿಡ್ ಕಾರುಗಳ ಅತ್ಯಂತ ದೊಡ್ಡ ಅನುಕೂಲವೆಂದರೆ ಇವುಗಳಲ್ಲಿ ಎಲೆಕ್ಟ್ರಿಕ್ ಮೋಟಾರ್ ಮತ್ತು ಪೆಟ್ರೋಲ್ ಇಂಜಿನ್ ಎರಡೂ ಜೊತೆಯಾಗಿ ಕೆಲಸ ಮಾಡುತ್ತವೆ. ಇದರಿಂದ ಎಲೆಕ್ಟ್ರಿಕ್ ಕಾರುಗಳಂತೆ ಬ್ಯಾಟರಿ ಚಾರ್ಜ್ ಮುಗಿಯುತ್ತದೆ ಎಂಬ ಚಿಂತೆ ಗ್ರಾಹಕರಿಗೆ ಇರುವುದಿಲ್ಲ. ಜತೆಗೆ ಸಾಮಾನ್ಯ ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಅತ್ಯುತ್ತಮ ಮೈಲೇಜ್ ಸಿಗುತ್ತದೆ.

ಹೈಬ್ರಿಡ್ ಕಾರುಗಳ ಬಿಡುಗಡೆಗೆ ಮತ್ತೊಂದು ಮುಖ್ಯ ಕಾರಣ CAFE-3 (Corporate Average Fuel Efficiency) ನಿಯಮಗಳು. ಇಂಧನ ದಕ್ಷತೆಗೆ ಸಂಬಂಧಿಸಿದ ಈ ಹೊಸ ನಿಯಮಗಳ ಮೂರನೇ ಹಂತವು ಏಪ್ರಿಲ್ 1, 2027 ರಿಂದ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ ಹೆಚ್ಚಿನ ಇಂಧನ ದಕ್ಷತೆಯ ಹೈಬ್ರಿಡ್ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ವಾಹನ ತಯಾರಕ ಕಂಪನಿಗಳು ಸರ್ಕಾರದ ಸರಾಸರಿ ಇಂಧನ ಉಳಿತಾಯದ ಗುರಿಯನ್ನು ಸುಲಭವಾಗಿ ತಲುಪಲು ನೆರವಾಗಲಿದೆ.

PREV
Read more Articles on
click me!

Recommended Stories

Tata Motors Offers: ಹಬ್ಬದ ಸೀಸನ್ ಬೆನ್ನಲ್ಲೇ ಟಾಟಾ ಕಾರುಗಳ ಮೇಲೆ ಬಂಪರ್ ಆಫರ್; ಈ ಮಾಡೆಲ್‌ಗೆ ಲಕ್ಷ ಲಕ್ಷ ಡಿಸ್ಕೌಂಟ್!
ಕಡಿಮೆ ಬೆಲೆ, ಭರ್ಜರಿ ಮೈಲೇಜ್‌; ಭಾರತದಲ್ಲಿ ಸಣ್ಣ ಹೈಬ್ರಿಡ್ ಕಾರುಗಳ ಹವಾ: ಕಾರ್ ಮಾರ್ಕೆಟ್‌ನಲ್ಲಿ ಹೈಬ್ರಿಡ್ ಕ್ರಾಂತಿ!