
ನವದೆಹಲಿ (ಆ.13): ವಿಶ್ವದ ಪ್ರಸಿದ್ಧ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆಯಾದ 'ಟೆಸ್ಲಾ' (Tesla) ಕಾರಿನಲ್ಲಿರುವ ಅತ್ಯಾಧುನಿಕ 'ಆರ್ಟಿಫಿಶಿಯಲ್ ಇಂಟೆಲಿಜೆನ್ಸ್' (AI) ವ್ಯವಸ್ಥೆಯು ಭಾರತದ ರಸ್ತೆಗಳಲ್ಲಿನ ಅಸ್ತವ್ಯಸ್ತ ಹಾಗೂ ಕಾಂಪ್ಲೆಕ್ಸ್ ಟ್ರಾಫಿಕ್ ಅನ್ನು ಅರ್ಥೈಸಿಕೊಳ್ಳಲಾಗದೆ ಪರದಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು, "ಇಂಡಿಯಾ ಎನ್ನುವುದು ಟೆಸ್ಲಾಗೆ ಹೇಳಿಮಾಡಿಸಿದ್ದಲ್ಲ!" ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ, ಟೆಸ್ಲಾ ಕಾರಿನ ಒಳಗಿರುವ ವಿಸ್ಯುವಲೈಸೇಶನ್ ಸ್ಕ್ರೀನ್ (Visualization Screen) ಎದುರಿನಿಂದ ಹಾಗೂ ವಿಭಿನ್ನ ದಿಕ್ಕುಗಳಿಂದ ಬರುವ ಸಾಲು ಸಾಲು ಜನರು ಮತ್ತು ವಾಹನಗಳನ್ನು ಟ್ರ್ಯಾಕ್ ಮಾಡಲು ಹೆಣಗಾಡುತ್ತಿರುವುದು ಕಂಡುಬರುತ್ತದೆ. ಅಷ್ಟರಲ್ಲೇ ಇದ್ದಕ್ಕಿದ್ದಂತೆ ಲಾರಿಯೊಂದು ಅಡ್ಡಬಂದಾಗ ಕಾರಿನ ಡಿಸ್ಪ್ಲೇ ಪರದೆಯಲ್ಲಿ ಹಲವು ಚಿತ್ರಗಳು ಗೊಂದಲಮಯವಾಗಿ ಮೂಡುತ್ತವೆ. ಭಾರತದ ರಸ್ತೆಗಳ ನೈಜ ಚಿತ್ರಣಕ್ಕೆ ಟೆಸ್ಲಾ ಸಿಲುಕಿಕೊಂಡ ಈ ದೃಶ್ಯ ನೆಟ್ಟಿಗರಿಗೆ ಭಾರಿ ಹಬ್ಬವನ್ನು ಒದಗಿಸಿದೆ.,ಆದರೆ, ಈ ವಿಡಿಯೋದ ಸತ್ಯಾಸತ್ಯತೆ ಹಾಗೂ ಇದು ಚಿತ್ರೀಕರಣಗೊಂಡ ಸ್ಥಳವನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದೆ. ಯೂಸರ್ ಒಬ್ಬ, 'ಟೆಸ್ಲಾ AI ಮನಸ್ಸಿನಲ್ಲಿ 'ಇದೇನಿದು ಗುರು ವಿಚಿತ್ರ ಟೆಸ್ಟ್, ಇಷ್ಟೊಂದು ಕಷ್ಟಕರವಾಗಿದೆ' ಎಂದು ಅಂದುಕೊಳ್ಳುತ್ತಿರಬಹುದು" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮಾರ್ವೆಲ್ ಸಿನಿಮಾದ ಶೀರ್ಷಿಕೆಯನ್ನು ಉಲ್ಲೇಖಿಸಿ "ಟೆಸ್ಲಾ: ನೋ ವೇ ಹೋಮ್" (Tesla: No Way Home) ಎಂದು ಕಾಲೆಳೆದಿದ್ದಾರೆ.
ಕಾರಿನ ನ್ಯಾವಿಗೇಷನ್ ಸಿಸ್ಟಮ್ ಈ ಸನ್ನಿವೇಶವನ್ನು ನೋಡಿ, "ಸ್ವಾಮಿ... ನಮಗೆ ಭಾರತದ ರಸ್ತೆಯಲ್ಲಿ ಓಡಾಡಲು ಇನ್ನು ಹೆಚ್ಚಿನ 'ಕಂಪ್ಯೂಟಿಂಗ್ ಪವರ್' ಬೇಕಾಗಬಹುದು!" ಎಂದು ಹೇಳುತ್ತಿರುವಂತಿದೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು, "ಎಲಾನ್ ಮಸ್ಕ್ ಭಾರತದಲ್ಲಿ ಕಾರಿನ ಬದಲಿಗೆ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದು ಉತ್ತಮ" ಎಂದು ಸಲಹೆ ನೀಡಿದ್ದಾರೆ.
ಕೇವಲ ತಮಾಷೆಯಷ್ಟೇ ಅಲ್ಲದೆ, ಕೆಲ ತಂತ್ರಜ್ಞಾನ ಪ್ರಿಯರು ಈ ಬಗ್ಗೆ ಗಂಭೀರವಾಗಿ ಚರ್ಚಿಸಿದ್ದಾರೆ. ಭಾರತದ ರಸ್ತೆಗಳ ಅಸ್ತವ್ಯಸ್ತ ವಾತಾವರಣವೇ ಟೆಸ್ಲಾದ 'ಫುಲ್ ಸೆಲ್ಫ್ ಡ್ರೈವಿಂಗ್' (FSD) ತಂತ್ರಜ್ಞಾನಕ್ಕೆ ಅತ್ಯುತ್ತಮ ನೈಜ ಪ್ರಪಂಚದ ಪರೀಕ್ಷಾ ಸ್ಥಳ (Real-world testing ground) ಎಂದು ವಾದಿಸಿದ್ದಾರೆ.
"ಟೆಸ್ಲಾ ಎಫ್‌ಎಸ್‌ಡಿಗೆ ವಾಹನಗಳು ಮತ್ತು ಅದರ ಸುತ್ತಮುತ್ತಲಿನ ನಡೆನುಡಿಗಳ ಬಗ್ಗೆ ಸಿಗುವ ಡೇಟಾವೇ ಪ್ರಮುಖ ಇಂಧನ. ಈ ದೃಷ್ಟಿಯಿಂದ ಭಾರತದ ಅಸ್ತವ್ಯಸ್ತ ಟ್ರಾಫಿಕ್ ಟೆಸ್ಲಾಗೆ ಒಂದು ಬಂಗಾರದ ಗಣಿಯಿದ್ದಂತೆ. ಈ ಡೇಟಾದಿಂದ ಟೆಸ್ಲಾ ಎಐ ಮತ್ತಷ್ಟು ಬುದ್ಧಿವಂತವಾಗಲಿದೆ" ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
"ಲಾರಿಯ ಮೇಲಿದ್ದ ಜನರ ಚಿತ್ರ ಹಾಗೂ ರಸ್ತೆಯ ಮಧ್ಯೆ ನಡೆಯುತ್ತಿದ್ದ ನೈಜ ಜನರ ನಡುವೆ ವ್ಯತ್ಯಾಸ ಗುರುತಿಸಲು ಕಾರಿನ ಸೆನ್ಸಾರ್‌ಗಳಿಗೆ ಸಾಧ್ಯವಾಗುತ್ತಿಲ್ಲ" ಎಂದು ಇನ್ನು ಕೆಲವರು ಪಾಯಿಂಟ್ ಔಟ್ ಮಾಡಿದ್ದಾರೆ.
"ನಮ್ಮಲ್ಲಿನ ಟ್ರಾಫಿಕ್ ಅತ್ಯಂತ ಜಾಣ ತಂತ್ರಜ್ಞಾನವನ್ನೇ ಬುದ್ಧಿವಂತಿಕೆಯಿಂದ ಸೋಲಿಸಬಲ್ಲದು. ಬಹುಶಃ ಭಾರತದ ರಸ್ತೆಗಳಲ್ಲಿ ಹೇಗೆ ಸಾಗಬೇಕು ಎಂದು ಎಐ (AI) ತಂತ್ರಜ್ಞಾನಕ್ಕೆ ಕಲಿಸುವ ಮೊದಲು, ನಾವು ನಮಗೆ ಸ್ವಲ್ಪ ಟ್ರಾಫಿಕ್ ಮತ್ತು ನಾಗರಿಕ ಪ್ರಜ್ಞೆಯನ್ನು ಕಲಿಸಿಕೊಳ್ಳಬೇಕಿದೆ! ಎಂದು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಟ್ವೀಟ್ ಮಾಡಿದ್ದಾರೆ.
India is not for Tesla pic.twitter.com/KLVzkDYWaR
— T-Rex (@T_RexRoars) August 12, 2026