Safest Hatchback Cars: ಕಡಿಮೆ ಬೆಲೆ ಅಂತ ಕಡೆಗಣಿಸಬೇಡಿ; 5-ಸ್ಟಾರ್ ಸೇಫ್ಟಿ ಇರೋ ಈ ಕಾರುಗಳು ಫ್ಯಾಮಿಲಿಗೆ ಬೆಸ್ಟ್..!

Published : Sep 30, 2026, 03:40 PM IST
TATA Punch

ಸಾರಾಂಶ

ಕಾರು ಖರೀದಿಸುವಾಗ ಬೆಲೆ ಮತ್ತು ಮೈಲೇಜ್ ಜೊತೆಗೆ ಸೇಫ್ಟಿಗೂ ಹೆಚ್ಚಿನ ಆದ್ಯತೆ ನೀಡುವುದು ಮುಖ್ಯ. ಟಾಟಾ ಆಲ್ಟ್ರೋಸ್ ಮತ್ತು ಪಂಚ್ 5-ಸ್ಟಾರ್ ರೇಟಿಂಗ್ ಪಡೆದಿದ್ದರೆ, ಸ್ವಿಫ್ಟ್, ಬಲೆನೊ, ಟಿಯಾಗೊ ಮತ್ತು ಐ20 ಕಾರುಗಳು ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿವೆ. ನಿಮ್ಮ ಬಜೆಟ್ ಮತ್ತು ಸುರಕ್ಷತೆಯನ್ನು ಪರಿಶೀಲಿಸಿ ಸರಿಯಾದ ಕಾರನ್ನು ಆಯ್ಕೆ ಮಾಡಿ.

ಕಾರು ಖರೀದಿಸುವಾಗ ಬೆಲೆ, ಮೈಲೇಜ್ ಹಾಗೂ ಫೀಚರ್ಸ್ ಜೊತೆಗೆ ಸೇಫ್ಟಿಗೂ ನಾವು ಹೆಚ್ಚಿನ ಆದ್ಯತೆ ನೀಡಬೇಕು. ಅದರಲ್ಲೂ ಫ್ಯಾಮಿಲಿಗಾಗಿ ಕಾರು ತೆಗೆದುಕೊಳ್ಳುವಾಗ ಬಿಲ್ಡ್ ಕ್ವಾಲಿಟಿ ಹಾಗೂ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಚೆನ್ನಾಗಿರುವ ಮಾಡೆಲ್‌ಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಭಾರತದ ಮಾರುಕಟ್ಟೆಯಲ್ಲಿರುವ ಹಲವು ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ, ಸೇಫ್ಟಿ ವಿಚಾರದಲ್ಲಿ ಕೆಲವು ಮಾಡೆಲ್‌ಗಳು ಮುಂಚೂಣಿಯಲ್ಲಿವೆ.

ಟಾಟಾ ಆಲ್ಟ್ರೋಸ್; 5-ಸ್ಟಾರ್ ಸೇಫ್ಟಿ

ಭಾರತದ ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಟಾಟಾ ಆಲ್ಟ್ರೋಸ್ ಕೂಡ ಒಂದು. ಗ್ಲೋಬಲ್ ಎನ್‌ಸಿಎಪಿ (Global NCAP) ಹಾಗೂ ಭಾರತ್ ಎನ್‌ಸಿಎಪಿ (Bharat NCAP) ಎರಡರಲ್ಲೂ ಈ ಕಾರು 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಸೇಫ್ಟಿಗೆ ಹೆಚ್ಚು ಒತ್ತು ನೀಡುವ ಗ್ರಾಹಕರ ಫೇವರಿಟ್ ಲಿಸ್ಟ್‌ನಲ್ಲಿ ಆಲ್ಟ್ರೋಸ್ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ಆಯ್ಕೆಗಳಲ್ಲಿ ಈ ಕಾರು ಲಭ್ಯವಿದೆ. ಆಕರ್ಷಕ ಡಿಸೈನ್, ಗಟ್ಟಿಮುಟ್ಟಾದ ಬಿಲ್ಡ್ ಕ್ವಾಲಿಟಿ ಹಾಗೂ ವಿವಿಧ ಇಂಜಿನ್ ಆಯ್ಕೆಗಳು ಈ ಕಾರಿನ ಪ್ಲಸ್ ಪಾಯಿಂಟ್. ಸಿಟಿ ಡ್ರೈವ್ ಹಾಗೂ ಲಾಂಗ್ ಡ್ರೈವ್ ಎರಡಕ್ಕೂ ಈ ಹ್ಯಾಚ್‌ಬ್ಯಾಕ್ ಹೇಳಿ ಮಾಡಿಸಿದಂತಿದೆ.

5-ಸ್ಟಾರ್ ಸೇಫ್ಟಿಯೊಂದಿಗೆ ಟಾಟಾ ಪಂಚ್

ಸಾಮಾನ್ಯ ಹ್ಯಾಚ್‌ಬ್ಯಾಕ್ ಕಾರುಗಳಿಗಿಂತ ಭಿನ್ನವಾಗಿರುವ ಮೈಕ್ರೋ ಎಸ್‌ಯುವಿ ಡಿಸೈನ್ ಟಾಟಾ ಪಂಚ್‌ನ ಪ್ರಮುಖ ಆಕರ್ಷಣೆ. ಕಾಂಪ್ಯಾಕ್ಟ್ ಸೈಜ್ ಜೊತೆಗೆ ರಗಡ್ ಲುಕ್ ಹಾಗೂ ಎತ್ತರದ ಸೀಟಿಂಗ್ ಪೊಸಿಷನ್ ಈ ಕಾರಿನಲ್ಲಿದೆ. ಗ್ಲೋಬಲ್ ಎನ್‌ಸಿಎಪಿ ಹಾಗೂ ಭಾರತ್ ಎನ್‌ಸಿಎಪಿಯಲ್ಲಿ ಪಂಚ್ ಕೂಡ 5-ಸ್ಟಾರ್ ಸೇಫ್ಟಿ ರೇಟಿಂಗ್ ಗಿಟ್ಟಿಸಿಕೊಂಡಿದೆ. ಬೆಂಗಳೂರಿನಂತಹ ಟ್ರಾಫಿಕ್ ತುಂಬಿದ ರಸ್ತೆಗಳಲ್ಲಿ ಹಾಗೂ ಕಿರಿದಾದ ಜಾಗಗಳಲ್ಲಿ ಈ ಕಾರನ್ನು ಸುಲಭವಾಗಿ ಹ್ಯಾಂಡಲ್ ಮಾಡಬಹುದು. ಎತ್ತರದ ಸೀಟಿಂಗ್ ಪೊಸಿಷನ್ ಇರುವುದರಿಂದ ಡ್ರೈವರ್‌ಗೆ ಮುಂದಿನ ರಸ್ತೆ ಹಾಗೂ ಟ್ರಾಫಿಕ್ ಕ್ಲಿಯರ್ ಆಗಿ ಕಾಣುತ್ತದೆ.

ಸ್ವಿಫ್ಟ್, ಬಲೆನೊ, ಟಿಯಾಗೊ ಹಾಗೂ ಐ20 ಕಥೆ ಏನು?

ಮಾರುತಿ ಸುಜುಕಿ ಸ್ವಿಫ್ಟ್, ಬಲೆನೊ, ಟಾಟಾ ಟಿಯಾಗೊ ಹಾಗೂ ಹ್ಯುಂಡೈ ಐ20 ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಸಖತ್ ಡಿಮ್ಯಾಂಡ್ ಇರುವ ಹ್ಯಾಚ್‌ಬ್ಯಾಕ್ ಕಾರುಗಳು. ಸ್ವಿಫ್ಟ್ ಕಾರು ತನ್ನ ಮೈಲೇಜ್, ಸ್ಮೂತ್ ಡ್ರೈವಿಂಗ್ ಹಾಗೂ ಕಡಿಮೆ ಮೇಂಟೆನೆನ್ಸ್ ವೆಚ್ಚಕ್ಕೆ ಹೆಸರುವಾಸಿಯಾಗಿದೆ. ಬಲೆನೊ ವಿಶಾಲವಾದ ಕ್ಯಾಬಿನ್ ಹಾಗೂ ಮಾಡರ್ನ್ ಫೀಚರ್ಸ್ ಹೊಂದಿರುವ ಪ್ರೀಮಿಯಂ ಹ್ಯಾಚ್‌ಬ್ಯಾಕ್. ಬಜೆಟ್ ಬೆಲೆಯಲ್ಲಿ ಸಿಗುವ ಟಾಟಾ ಟಿಯಾಗೊ ಕೂಡ ಉತ್ತಮ ಆಯ್ಕೆ. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಇದು 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಇನ್ನು ಪ್ರೀಮಿಯಂ ಇಂಟೀರಿಯರ್, ಮಾಡರ್ನ್ ಡಿಸೈನ್ ಹಾಗೂ ಭರ್ಜರಿ ಫೀಚರ್ಸ್ ಹ್ಯುಂಡೈ ಐ20 ಕಾರಿನ ಹೈಲೈಟ್ಸ್.

ಕಾರು ಖರೀದಿಸುವಾಗ ಸೇಫ್ಟಿ ಚೆಕ್ ಮಾಡಿಕೊಳ್ಳಿ

ಮೈಲೇಜ್ ಹಾಗೂ ಬೆಲೆ ಮುಖ್ಯ ಹೌದು, ಆದರೆ ಸೇಫ್ಟಿಯನ್ನು ಮಾತ್ರ ಕಡೆಗಣಿಸಬೇಡಿ. ಫ್ಯಾಮಿಲಿಗಾಗಿ ಕಾರು ಖರೀದಿಸುವಾಗ ಕ್ರ್ಯಾಶ್ ಟೆಸ್ಟ್ ರೇಟಿಂಗ್, ಸೇಫ್ಟಿ ಫೀಚರ್ಸ್ ಹಾಗೂ ಯಾವ ಟೆಸ್ಟ್ ಪ್ರೋಟೋಕಾಲ್ ಬಳಸಿದ್ದಾರೆ ಎಂಬುದನ್ನು ತಪ್ಪದೇ ಪರಿಶೀಲಿಸಿ. ಟಾಟಾ ಆಲ್ಟ್ರೋಸ್ ಹಾಗೂ ಟಾಟಾ ಪಂಚ್ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿವೆ. ಆದರೆ ಬೇರೆ ಕಾರುಗಳ ರೇಟಿಂಗ್ ಹೋಲಿಕೆ ಮಾಡುವಾಗ, ಅವು ಯಾವ ಕ್ರ್ಯಾಶ್ ಟೆಸ್ಟ್‌ನಲ್ಲಿ ಆ ರೇಟಿಂಗ್ ಪಡೆದಿವೆ ಎಂಬುದನ್ನು ಗಮನಿಸಬೇಕು. ನಿಮ್ಮ ಬಜೆಟ್, ಬಳಕೆ, ಮೈಲೇಜ್, ಫೀಚರ್ಸ್, ಸೇಫ್ಟಿ ಹಾಗೂ ಮೇಂಟೆನೆನ್ಸ್ ವೆಚ್ಚ - ಈ ಎಲ್ಲಾ ಅಂಶಗಳನ್ನು ಲೆಕ್ಕಾಚಾರ ಹಾಕಿದ ಮೇಲೆಯೇ ಸರಿಯಾದ ಕಾರನ್ನು ಆಯ್ಕೆ ಮಾಡಿ.

PREV
Read more Articles on
click me!

Recommended Stories

ಹೊಸ Hyundai Cretaಗೆ Strong Hybrid ಎಂಜಿನ್‌? i20, i10ಗೂ ಬಿಗ್‌ ಚೇಂಜ್‌; ಇಲ್ಲಿದೆ ಡೀಟೇಲ್ಸ್‌
456 ಕಿ.ಮೀ ರೇಂಜ್‌, ಭರ್ಜರಿ ಫೀಚರ್ಸ್‌; ಆದ್ರೂ Mahindra XUV400 ಖರೀದಿಸಿದವರು ಕೇವಲ 10 ಮಂದಿ!