
ಹೀರೋ ಕಂಪನಿಯ ಎಲೆಕ್ಟ್ರಿಕ್ ಬ್ರ್ಯಾಂಡ್ Vida ಎಂದ್ರೆ ನಮಗೆ ತಕ್ಷಣ ನೆನಪಾಗೋದು ಎಲೆಕ್ಟ್ರಿಕ್ ಸ್ಕೂಟರ್. ಆದ್ರೆ ಈಗ ಕಂಪನಿ ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲೂ ಆಸಕ್ತಿ ತೋರಿಸ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹೊಸ ಮೈಕ್ರೋ ಎಲೆಕ್ಟ್ರಿಕ್ ಕಾರು NEX 3 ವಿನ್ಯಾಸದ ಪೇಟೆಂಟ್ಗಾಗಿ ಭಾರತದಲ್ಲಿ ಅರ್ಜಿ ಸಲ್ಲಿಸಿದೆ.
Vida Novus ಸರಣಿಯಲ್ಲಿ NEX 1, NEX 2 ಮತ್ತು NEX 3 ಎಂಬ ಮೂರು ವಾಹನಗಳನ್ನು ಪರಿಚಯಿಸುವ ಯೋಜನೆ ಕಂಪನಿಗಿದೆ. ಈ ವರ್ಷದ ಜೂನ್ನಲ್ಲಿ NEX 2 ಹೆಸರಿನ ಮೂರು ಚಕ್ರಗಳ ಸೆಲ್ಫ್ ಬ್ಯಾಲೆನ್ಸಿಂಗ್ ಎಲೆಕ್ಟ್ರಿಕ್ ಸ್ಕೂಟರ್ಗೆ ಪೇಟೆಂಟ್ ಸಲ್ಲಿಸಿತ್ತು. ಈಗ NEX 3 ಕಾರಿನ ವಿನ್ಯಾಸ ಪೇಟೆಂಟ್ ಸಲ್ಲಿಸಿರುವುದು ಗಮನ ಸೆಳೆದಿದೆ. ಕಳೆದ ವರ್ಷ ನಡೆದ ಮಿಲಾನ್ ಮೋಟಾರ್ಸೈಕಲ್ ಶೋ (EICMA)ನಲ್ಲಿ ಹೀರೋ ಮೊದಲ ಬಾರಿಗೆ NEX 3 ಕಾರನ್ನು ಪ್ರದರ್ಶಿಸಿತ್ತು. ಇದೀಗ ಹೊರಬಂದಿರುವ ಡಿಸೈನ್ ಪೇಟೆಂಟ್ನಲ್ಲಿ ಕಾರಿನ ವಿನ್ಯಾಸದ ಹಲವು ವಿಶೇಷತೆಗಳು ಕಾಣಿಸಿಕೊಂಡಿವೆ. ಉತ್ಪಾದನೆಗೆ ಬಂದಾಗಲೂ ಕಾನ್ಸೆಪ್ಟ್ ಮಾದರಿಯ ಬಹುತೇಕ ವಿನ್ಯಾಸ ಉಳಿಯುವ ಸಾಧ್ಯತೆಯಿದೆ.
ಈ ಕಾರಿನಲ್ಲಿರುವ ಅತ್ಯಂತ ವಿಶೇಷವಾದ ಅಂಶವೆಂದರೆ ಇದರ ಬಾಗಿಲು. ಸಾಮಾನ್ಯ ಕಾರುಗಳಂತೆ ಬಾಗಿಲು ಪಕ್ಕಕ್ಕೆ ತೆರೆಯುವುದಿಲ್ಲ. ಬದಲಿಗೆ ಮೇಲಕ್ಕೆ ತೆರೆಯುತ್ತದೆ. ಈ ವಿಂಗ್ ಸ್ಟೈಲ್ ಡೋರ್ ಕಾರಿಗೆ ಸೂಪರ್ಕಾರ್ನಂತಹ ಲುಕ್ ನೀಡುತ್ತದೆ. ಕಿರಿದಾದ ಜಾಗದಲ್ಲಿ ಕಾರು ಪಾರ್ಕ್ ಮಾಡಿದಾಗಲೂ ಬಾಗಿಲು ತೆರೆಯಲು ಹೆಚ್ಚು ಜಾಗ ಬೇಕಾಗುವುದಿಲ್ಲ. ಬಾಗಿಲು ದೊಡ್ಡದಾಗಿರುವುದರಿಂದ ಕಾರಿನ ಒಳಗೆ ಕುಳಿತುಕೊಳ್ಳಲು ಮತ್ತು ಹೊರಬರಲು ಸಮಸ್ಯೆ ಇಲ್ಲ.
ಕಾರಿನ ಗಾತ್ರ ಚಿಕ್ಕದಾಗಿದ್ದರೂ ಒಳಗೆ ಕುಳಿತವರಿಗೆ ಕಿರಿಕಿರಿಯಾಗಬಾರದು ಎಂಬ ಕಾರಣಕ್ಕೆ ದೊಡ್ಡ ವಿಂಡೋ ನೀಡಲಾಗಿದೆ. ಹೀರೋ ಈ ಕಾರನ್ನು ಮೈಕ್ರೋ ಎಸ್ಯುವಿ ಎಂದು ಕರೆಯುತ್ತಿದೆ. ಮುಂಭಾಗದಲ್ಲಿ V ಆಕಾರದ ಗ್ರಿಲ್ ಇದ್ದು, ಅದರ ಎರಡೂ ಬದಿಗಳಲ್ಲಿ ಉದ್ದವಾದ ಎಲ್ಇಡಿ ಲೈಟ್ಗಳನ್ನು ನೀಡಲಾಗಿದೆ. ಬಾನೆಟ್ನ ಉದ್ದಕ್ಕೂ ಎಲ್ಇಡಿ ಲೈಟ್ ಸ್ಟ್ರಿಪ್ ಇರುವ ಸಾಧ್ಯತೆಯಿದೆ. ದೊಡ್ಡ ಅಲಾಯ್ ವೀಲ್ಗಳು, ಕಡಿಮೆ ಎತ್ತರದ ಟೈರ್ಗಳು, ಹೊರಭಾಗಕ್ಕೆ ಉಬ್ಬಿಕೊಂಡಿರುವ ವೀಲ್ ಆರ್ಚ್ಗಳು ಇದರ ಲುಕ್ ಹೆಚ್ಚಿಸಿವೆ.
ಹಿಂಭಾಗದಲ್ಲಿ ದೊಡ್ಡ ಕಿಟಕಿ, ಇಳಿಜಾರಾದ ರೂಫ್ ಮತ್ತು ಷಡ್ಭುಜಾಕೃತಿಯ ಬೂಟ್ ಲಿಡ್ ನೀಡಲಾಗಿದೆ. ಜೊತೆಗೆ ದೊಡ್ಡ ಸ್ಪೋರ್ಟಿ ಬಂಪರ್ ಕೂಡ ಇರಲಿದೆ.
Hero Vida NEX 3 ಇಬ್ಬರು ಪ್ರಯಾಣಿಸಬಹುದಾದ ಎರಡು ಸೀಟಿನ ಕಾರು. ಇದರ ಒಳಭಾಗ ಸರಳವಾಗಿದ್ದರೂ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಕೆಲವು ಕಡೆಗಳಲ್ಲಿ ಆಕರ್ಷಕ ಬಣ್ಣಗಳನ್ನು ಬಳಸಲಾಗಿದೆ. ಇದರಲ್ಲಿ ಷಡ್ಭುಜಾಕೃತಿಯ ಸ್ಟೀರಿಂಗ್ ವೀಲ್, ಎರಡು ವೃತ್ತಾಕಾರದ ಇನ್ಸ್ಟ್ರುಮೆಂಟ್ ಡಯಲ್ಗಳು ಮತ್ತು ಸರಳವಾದ ಡ್ಯಾಶ್ಬೋರ್ಡ್ ಇರಲಿವೆ. ಇದರ ಮತ್ತೊಂದು ವಿಶೇಷತೆ ಎಂದರೆ ಗ್ರಾಹಕರು ತಮ್ಮ ಇಷ್ಟಕ್ಕೆ ತಕ್ಕಂತೆ ಕಾರಿನ ಒಳಭಾಗವನ್ನು ಬದಲಾಯಿಸಿಕೊಳ್ಳಬಹುದು. ಇಬ್ಬರು ಆರಾಮವಾಗಿ ಕುಳಿತುಕೊಳ್ಳುವಂತೆ ಸೀಟ್ಗಳನ್ನು ವಿನ್ಯಾಸಗೊಳಿಸಲಾಗಿದೆ.
ಆದರೆ ಕಾರಿನ ಮೋಟಾರ್, ಬ್ಯಾಟರಿ ಸಾಮರ್ಥ್ಯ ಮತ್ತು ಒಮ್ಮೆ ಚಾರ್ಜ್ ಮಾಡಿದರೆ ಎಷ್ಟು ದೂರ ಚಲಿಸುತ್ತದೆ ಎಂಬ ಮಾಹಿತಿಯನ್ನು ಹೀರೋ ಇನ್ನೂ ಬಹಿರಂಗಪಡಿಸಿಲ್ಲ. ಆಟೋಮ್ಯಾಟಿಕ್ ಎಸಿ ಮತ್ತು ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸೌಲಭ್ಯ ಸಿಗುವ ನಿರೀಕ್ಷೆಯಿದೆ. ಸದ್ಯ ಹೀರೋ ಕಂಪನಿ ಈ ಕಾರಿನ ಡಿಸೈನ್ ಪೇಟೆಂಟ್ ಸಲ್ಲಿಸಿದೆ. ಆದರೆ ಯಾವಾಗ ಮಾರುಕಟ್ಟೆಗೆ ಬರಲಿದೆ ಮತ್ತು ಬೆಲೆ ಎಷ್ಟಿರಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.