ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿ ಕಾರುಗಳ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಆಟೋಮೊಬೈಲ್ ಕಂಪನಿಗಳು ಇದೀಗ ಸಿಎನ್‌ಜಿ ವರ್ಶನ್ ಕಾರು ಬಿಡುಗಡೆ ಮಾಡುತ್ತಿದೆ. ಸಿಎನ್‌ಜಿ ಕಾರುಗಳಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಸಿಎನ್‌ಜಿ ರೂಪದಲ್ಲಿ ಬಿಡುಗಡೆಯಾಗಿದೆ. ಈ ಕುರಿತ ವಿವರ ಇಲ್ಲಿವೆ.
ನವದೆಹಲಿ(ಆ.12): ಪೆಟ್ರೋಲ್ ಡೀಸೆಲ್ ಬೆಲೆ ದುಬಾರಿಯಾಗಿರುವ ಕಾರಣ ಜನರು ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿ ಕಾರುಗಳತ್ತ ಮುಖಮಾಡಿದ್ದಾರೆ. ಎಲೆಕ್ಟ್ರಿಕ್ ಕಾರು ಕೈಗೆಟುಕುವ ದರದಲ್ಲಿ ಇಲ್ಲದಿರುವ ಕಾರಣ ಹೆಚ್ಚಿನವರು ಸಿಎನ್‌ಜಿ ಕಾರಿನತ್ತ ವಾಲುತ್ತಿದ್ದಾರೆ. ಉತ್ತಮ ಮೈಲೇಜ್, ಪೆಟ್ರೋಲ್, ಡೀಸೆಲ್‌ಗಿಂತ ಕಡಿಮೆ ಇಂಧನ ಖರ್ಚು ಸೇರಿದಂತೆ ಹಲವು ಉಪಯೋಗಗಳು ಈ ಕಾರಿನಲ್ಲಿದೆ. ಸಿಎನ್‌ಜಿ ಕಾರಿನ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಇದೀಗ ಮಾರುತಿ ಸುಜುಕಿ ಅತ್ಯಧಿಕ ಮಾರಾಟವಾಗುವ ಹಾಗೂ ಜನಪ್ರಿಯ ಸ್ವಿಫ್ಟ್ ಕಾರನ್ನು ಸಿಎನ್‌ಜಿ ರೂಪದಲ್ಲಿ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಸಿಎನ್‌ಜಿ ಕಾರಿನ ಬೆಲೆ 7.77 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇದು ಎಕ್ಸ್ ಶೋ ರೂಂ ಬೆಲೆಯಾಗಿದೆ. ಈ ಕಾರಿನ ಮತ್ತೊಂದು ವಿಶೇಷತೆ ಅಂದರೆ ಒಂದು ಕೆಜಿ ಸಿಎನ್‌ಜಿಗೆ 30.90 ಕೀ.ಮೀ ಮೈಲೇಜ್ ನೀಡಲಿದೆ. ಪ್ರತಿ ಕೆಜಿ ಸಿಎನ್‌ಜಿ ಬೆಲೆ 80 ಅಸುಪಾಸಿನಲ್ಲಿದೆ.
ನೂತನ ಮಾರುತಿ ಸ್ವಿಫ್ಟ್ CNG ಕಾರು 1.2 ಲೀಟರ್ , 4 ಸಿಲಿಂಡರ್, ನ್ಯಾಚುರಲ್ ಆಸ್ಪೈರ್ಡ್. ಡ್ಯುಯೆಲ್ ಜೆಟ್, ಕೆ ಸೀರಿಸ್ ಎಂಜಿನ್ ಹೊಂದಿದೆ. ಸ್ವಿಫ್ಟ್ 89 Ps ಪವರ್ ಹಾಗೂ 113 nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇದೇ ಸಿಎನ್‌ಜಿ ಇಂಧನದಲ್ಲಿ 77 Ps ಪವರ್ ಹಾಗೂ 98 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಒಂದು ಕೆಜಿ ಸಿಎನ್‌ಜಿಯಲ್ಲಿ 30.90 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಸುಜುಕಿ ಇಂಡಿಯಾ ಮೈಲಿಗಲ್ಲು; 10 ಲಕ್ಷ ಸಿಎನ್‌ಜಿ ಕಾರು ಮಾರಾಟ
ಕೇವಲ ಎಂಜಿನ್ ಪವರ್‌ನಲ್ಲಿ ಕೆಲ ಬದಲಾವಣೆಗಳನ್ನು ಹೊರತುಪಡಿಸಿದರೆ, ಸ್ವಿಫ್ಟ್ ಕಾರಿನಲ್ಲಿ ಇತರ ಯಾವುದೇ ಬದಲಾವಣೆಗಳಿಲ್ಲ. ಮುಂಭಾಗದ ಗ್ರಿಲ್, ಟರ್ನ್ ಇಂಡಿಕೇಟರ್, ORVM ಹಾಗೂ LED ಲೈಟ್ಸ್ ಸೇರಿದಂತೆ ಎಲ್ಲವೂ ಇಂಧನ ಕಾರಿನ ವಿನ್ಯಾಸದಲ್ಲೇ ಇದೆ
ಇತ್ತೀಚೆಗೆ ಮಾರುತಿ ಸುಜುಕಿ ನ್ಯೂ ಏಜ್ ಬಲೆನೋ’ ಕಾರು ಬಿಡುಗಡೆ ಮಾಡಿದೆ..ನೂತನ ಬಲೆನೋ ಕಾರು ಕೂಡ ಸಿಎನ್‌ಜಿ ರೂಪದಲ್ಲಿ ಬಿಡುಗಡೆಯಾಗಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಮಾರುತಿ ಸುಜುಕಿ ಈಗಾಗಲೇ ಡೀಸೆಲ್ ಕಾರು ಸ್ಥಗಿತಗೊಳಿಸಿ, ಪೆಟ್ರೋಲ್ ಹಾಗೂ ಸಿಎನ್‌ಜಿ ಕಾರುಗಳ ಉತ್ಪಾದನೆಯತ್ತ ಹೆಚ್ಚಿನ ಗಮನಹರಿಸಿದೆ. 1.3 ಲೀಟರ್ ಮತ್ತು 1.5 ಲೀಟರ್‌ನ ಡೀಸೆಲ್ ಎಂಜಿನ್ ಕಾರುಗಳನ್ನು ಸ್ಥಗಿತಗೊಳಿಸಿರುವ ಮಾರುತಿ, ಇದರ ಬದಲು ಹೆಚ್ಚಿನ ಸಿಎನ್‌ಜಿ ಕಾರುಗಳಿಗೆ ಆದ್ಯತೆ ನೀಡಿದೆ. ಪ್ರಮುಖವಾಗಿ ಡೀಸೆಲ್ ಕಾರುಗಳು ಬಿಎಸ್6 ಎಮಿಶನ್ ಎಂಜಿನ್ ಮಾನದಂಡ ಪೂರೈಸಲು ಕಷ್ಟ ಅನ್ನೋ ಕಾರಣಕ್ಕೆ ಸ್ಥಗಿತಗೊಳಿಸಲಾಗಿದೆ.
ಮಾಲಿನ್ಯ ತಡೆ ಕಾನೂನಿನಿಂದ ಕಾರು ಉದ್ಯಮಕ್ಕೆ ಹೊಡೆತ: ಮಾರುತಿ
ಭಾರತ ಸರ್ಕಾರ ಯುರೋಪಿಯನ್ ಮಾದರಿಯಲ್ಲಿ ಜಾರಿಗೆ ತರಲು ಹೊರಟಿರುವ ಹೊಸ ಮಾಲಿನ್ಯ ನಿಯಂತ್ರಣ ಕಾನೂನು ಕೋವಿಡ್‌ನಿಂದ ಸಂಕಷ್ಟದಲ್ಲಿರುವ ಕಾರು ತಯಾರಿಕ ಉದ್ಯಮಕ್ಕೆ ಮತ್ತಷ್ಟುಪೆಟ್ಟು ನೀಡಲಿದೆ. ಮುಂದಿನ ದಿನಗಳಲ್ಲಿ ಕಾರುಗಳ ಬೆಲೆ ಏರಿಕೆಗೂ ಇದು ಕಾರಣವಾಗಬಹುದು ಎಂದು ಭಾರತದ ದೊಡ್ಡ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ಹೇಳಿದೆ.