
ಬೆಂಗಳೂರು (ಜು.1): ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯು ಜೂನ್ 2026ರಲ್ಲಿ ಭಾರೀ ಪ್ರಗತಿ ಕಂಡಿದೆ. ಈ ಒಂದೇ ತಿಂಗಳಿನಲ್ಲಿ ದೇಶದಲ್ಲಿ 4 ಲಕ್ಷ ಕಾರುಗಳು ಮಾರಾಟವಾಗಿದ್ದು, ಕಳೆದ ವರ್ಷದ ಜೂನ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.24 ರಷ್ಟು ಪ್ರಗತಿ ದಾಖಲಾಗಿದೆ. ಹೊಸ ಕಾರುಗಳ ಬಿಡುಗಡೆ, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ (EV) ಹೆಚ್ಚುತ್ತಿರುವ ಬೇಡಿಕೆ ಹಾಗೂ ಗ್ರಾಹಕರ ಖರೀದಿ ಪ್ರವೃತ್ತಿಯು ಈ ಭಾರಿ ಜಿಗಿತಕ್ಕೆ ಪ್ರಮುಖ ಕಾರಣಗಳಾಗಿವೆ. ಇನ್ನು ಜೂನ್ ತಿಂಗಳ ಮಾರಾಟ ಪಟ್ಟಿಯಲ್ಲಿ ಪ್ರಮುಖ ಕಾರು ತಯಾರಿಕಾ ಸಂಸ್ಥೆಗಳ ಸ್ಥಾನಪಲ್ಲಟವಾಗಿದ್ದು, ಟಾಟಾ ಖುಷಿಯಿಂದ ನಲಿದಾಡಿದೆ.
ಭಾರತದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಅಗ್ರಸ್ಥಾನವನ್ನು ಯಶಸ್ವಿಯಾಗಿ ಕಾಯ್ದುಕೊಂಡಿದೆ. ಕಂಪನಿಯು ಜೂನ್ 2026 ರಲ್ಲಿ ಒಟ್ಟು 1,50,150 ಕಾರುಗಳನ್ನು ಮಾರಾಟ ಮಾಡಿದೆ. ಜೂನ್ 2025 ರಲ್ಲಿ ಈ ಅಂಕಿ-ಅಂಶ 1,21,339 ಯುನಿಟ್‌ಗಳಷ್ಟಿತ್ತು. ಮಾರುತಿಯ ಈ ಯಶಸ್ಸಿಗೆ ಸಿಎನ್‌ಜಿ ವಾಹನಗಳ ಭಾರಿ ಬೇಡಿಕೆಯೇ ಮುಖ್ಯ ಕಾರಣ. ಅದರಲ್ಲೂ ಪ್ರಮುಖವಾಗಿ ಕಂಪನಿಯ ಹೊಸ 'ವಿಕ್ಟೋರಿಸ್' (Victoris) ಕಾರಿನಲ್ಲಿ ಪರಿಚಯಿಸಲಾದ ಅಂಡರ್‌ಬಾಡಿ ಸಿಎನ್‌ಜಿ (Underbody CNG System) ತಂತ್ರಜ್ಞಾನವನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ.
ಜಾಗತಿಕವಾಗಿ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ವಾತಾವರಣವಿದ್ದರೂ, ಮಾರುತಿ ದೀರ್ಘ ಸಮುದ್ರ ಮಾರ್ಗಗಳ ಮೂಲಕ ತನ್ನ ರಫ್ತು ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಂದುವರಿಸಿದೆ. ಜೂನ್ ತಿಂಗಳಿನಲ್ಲಿ ಕಂಪನಿಯು 42,768 ವಾಹನಗಳನ್ನು ರಫ್ತು ಮಾಡಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.13 ರಷ್ಟು ಹೆಚ್ಚಾಗಿದೆ.
ಜೂನ್ ತಿಂಗಳ ಕಾರು ಮಾರುಕಟ್ಟೆಯ ಅತ್ಯಂತ ದೊಡ್ಡ ಬದಲಾವಣೆ ಕಂಡುಬಂದಿದ್ದು ಎರಡನೇ ಸ್ಥಾನದಲ್ಲಿ. ಟಾಟಾ ಮೋಟಾರ್ಸ್ ಸಂಸ್ಥೆಯು ಜೂನ್‌ನಲ್ಲಿ 62,076 ಕಾರುಗಳನ್ನು ಮಾರಾಟ ಮಾಡುವ ಮೂಲಕ ಮಹೀಂದ್ರಾ ಕಂಪನಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ, ತಾನು ಎರಡನೇ ಸ್ಥಾನವನ್ನು ಅಲಂಕರಿಸಿದೆ. ಕಳೆದ ವರ್ಷದ ಜೂನ್‌ನಲ್ಲಿ ಟಾಟಾ ಕೇವಲ 37,083 ವಾಹನಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಹೊಸ ಮತ್ತು ಅಪ್‌ಡೇಟೆಡ್ ಕಾರುಗಳಾದ ಪಂಚ್ (Punch), ನೆಕ್ಸಾನ್ (Nexon SUV) ಮತ್ತು ಸಿಯೆರಾ (Sierra) ಕಾರುಗಳಿಗೆ ಲಭಿಸುತ್ತಿರುವ ಭರ್ಜರಿ ಜನಪ್ರಿಯತೆಯೇ ಈ ಯಶಸ್ಸಿಗೆ ಕಾರಣವಾಗಿದೆ.
ಮತ್ತೊಂದೆಡೆ, ಮಹೀಂದ್ರಾ & ಮಹೀಂದ್ರಾ ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಂಪನಿಯು ಜೂನ್ 2026 ರಲ್ಲಿ 60,393 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಆದರೆ, ವಾಣಿಜ್ಯ ವಾಹನಗಳೂ ಸೇರಿದಂತೆ ಒಟ್ಟಾರೆ ವಾಹನ ಮಾರಾಟದ ಲೆಕ್ಕಾಚಾರದಲ್ಲಿ ಮಹೀಂದ್ರಾ 1,06,207 ಯುನಿಟ್‌ಗಳನ್ನು ಮಾರಾಟ ಮಾಡಿ, ವಾರ್ಷಿಕ ಆಧಾರದ ಮೇಲೆ ಶೇ.37 ರಷ್ಟು ಬೆಳವಣಿಗೆಯನ್ನು ಕಾಯ್ದುಕೊಂಡಿದೆ.
ದಕ್ಷಿಣ ಕೊರಿಯಾದ ಪ್ರಮುಖ ಕಾರು ಸಂಸ್ಥೆ ಹುಂಡೈಗೆ ಜೂನ್ ತಿಂಗಳು ನಿರಾಸೆ ಮೂಡಿಸಿದೆ. ಕಂಪನಿಯ ದೇಶೀಯ ಮಾರಾಟವು ಸುಮಾರು ಶೇ.10 ರಷ್ಟು ಕುಸಿತ ಕಂಡು 39,635 ಯುನಿಟ್‌ಗಳಿಗೆ ತಲುಪಿದೆ. ಹುಂಡೈ ಸಂಸ್ಥೆಯ ಪ್ರಮುಖ ಬಿಡಿಭಾಗಗಳ ಸರಬರಾಜುದಾರರ (Supplier) ಫ್ಯಾಕ್ಟರಿಯಲ್ಲಿ ಆಕಸ್ಮಿಕ ಅಗ್ನಿ ದುರಂತ ಸಂಭವಿಸಿದ್ದರಿಂದ, ಸುಮಾರು 22 ದಿನಗಳ ಕಾಲ ಹುಂಡೈ ಪ್ಲಾಂಟ್‌ಗಳಲ್ಲಿ ಉತ್ಪಾದನೆ ಕುಂಠಿತಗೊಂಡಿದ್ದೇ ಈ ಮಾರಾಟ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಸದ್ಯ ಉತ್ಪಾದನೆ ಯಥಾಸ್ಥಿತಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ನಷ್ಟ ಭರ್ತಿ ಮಾಡಿಕೊಳ್ಳುವ ವಿಶ್ವಾಸವನ್ನು ಕಂಪನಿ ವ್ಯಕ್ತಪಡಿಸಿದೆ. ಇನ್ನೊಂದೆಡೆ, ಜಪಾನ್ ಮೂಲದ ಟೊಯೋಟಾ ಕಂಪನಿಯು ಜೂನ್‌ನಲ್ಲಿ 28,441 ವಾಹನಗಳನ್ನು ಮಾರಾಟ ಮಾಡಿ ಉತ್ತಮ ಪ್ರದರ್ಶನ ನೀಡಿದೆ. ಕಂಪನಿಯ ಜನಪ್ರಿಯ ಇನೋವಾ ಕ್ರಿಸ್ಟಾ (Innova Crysta) ಕಾರಿಗೆ ಮಾರುಕಟ್ಟೆಯಲ್ಲಿ ನಿರಂತರವಾಗಿರುವ ಗಟ್ಟಿಯಾದ ಬೇಡಿಕೆಯೇ ಇದಕ್ಕೆ ಕಾರಣ.
ಪ್ರಮುಖ ಮೂರ್ನಾಲ್ಕು ಕಂಪನಿಗಳಷ್ಟೇ ಅಲ್ಲದೆ, ಮಾರುಕಟ್ಟೆಯ ಇತರೆ ಸಣ್ಣ ಕಾರು ತಯಾರಕರು ಸಹ ಉತ್ತಮ ಪೈಪೋಟಿ ನೀಡಿದ್ದಾರೆ. ಕಿಯಾ ಇಂಡಿಯಾ (Kia India) ಜೂನ್ ತಿಂಗಳಿನಲ್ಲಿ 24,552 ಕಾರುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ಇತ್ತೀಚೆಗಷ್ಟೇ ಮಾರುಕಟ್ಟೆಗೆ ಜಂಟಿಯಾಗಿ ಲಗ್ಗೆ ಇಟ್ಟಿರುವ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ (JSW MG Motor) 7,568 ವಾಹನಗಳನ್ನು ಮಾರಾಟ ಮಾಡಿ ಭರವಸೆ ಮೂಡಿಸಿದೆ. ನಿಸ್ಸಾನ್ ಸಂಸ್ಥೆಯು 3,006 ಕಾರುಗಳನ್ನು ಮಾರಾಟ ಮಾಡಿದ್ದು, ಅದರ 'ಮ್ಯಾಗ್ನೈಟ್' (Magnite) ಮಾಡೆಲ್‌ಗೆ ಬೇಡಿಕೆ ಸ್ಥಿರವಾಗಿದೆ. ರೆನಾಲ್ಟ್ ಇಂಡಿಯಾ (Renault India) ಕಂಪನಿಯ ಮಾರಾಟದಲ್ಲೂ ಈ ಬಾರಿ ಉತ್ತಮ ಸುಧಾರಣೆ ಕಂಡುಬಂದಿದೆ.
ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯು ಈಗ ಅತ್ಯಂತ ವೇಗವಾಗಿ ಕೇವಲ ಪೆಟ್ರೋಲ್ ಮತ್ತು ಡೀಸೆಲ್‌ನಿಂದ ಮುಂದುವರಿದ ತಂತ್ರಜ್ಞಾನಗಳಾದ ಸಿಎನ್‌ಜಿ (CNG), ಎಲೆಕ್ಟ್ರಿಕ್ (EV), ಹೈಬ್ರಿಡ್ ಮತ್ತು ಫ್ಲೆಕ್ಸ್-ಫ್ಯುಯೆಲ್ (Flex-Fuel) ತಂತ್ರಜ್ಞಾನದ ಕಡೆಗೆ ಹೆಜ್ಜೆ ಇಡುತ್ತಿದೆ ಎಂದು ಆಟೋ ಉದ್ಯಮದ ತಜ್ಞರು ವಿಶ್ಲೇಷಿಸಿದ್ದಾರೆ. ಮುಂಬರುವ ಹಬ್ಬದ ದಿನಗಳಲ್ಲಿ ಹಲವು ಹೊಸ ಎಸ್‌ಯುವಿ ಹಾಗೂ ಇವಿ ಕಾರುಗಳು ಲಾಂಚ್ ಆಗಲಿರುವುದರಿಂದ ಪೈಪೋಟಿ ಮತ್ತಷ್ಟು ತೀವ್ರವಾಗಲಿದೆ.