ಸೋಷಿಯಲ್ ಮೀಡಿಯಾ ಬ್ಯಾನ್ ಬೆನ್ನಲ್ಲೇ ಸಚಿವ ಲಾಡ್ ಸ್ಫೋಟಕ ಹೇಳಿಕೆ, ನಮ್ಮ ಸ್ಕ್ರೀನ್ ಟೈಂ ಕೂಡ ಏಳೆಂಟು ಗಂಟೆ ಆಗಿದೆ!

Published : Mar 06, 2026, 02:38 PM IST
Santosh Lad

ಸಾರಾಂಶ

ಸಚಿವ ಸಂತೋಷ್ ಲಾಡ್, 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್ ಮಾಡುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದೇ ವೇಳೆ, ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡು, ಅಲ್ಪಸಂಖ್ಯಾತರ ಓಲೈಕೆ, ಪಾರ್ಟಿ ಫಂಡ್ ಮತ್ತು ಬೀಫ್ ರಫ್ತು ವಿಚಾರಗಳಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣ ಬಳಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ಮತ್ತು ಮೊಬೈಲ್ ಬ್ಯಾನ್ ಮಾಡಿದೆ. ಈ ವಿಚಾರವನ್ನು ಸ್ವಾಗತಿಸಿರುವ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಒಳ್ಳೆಯ ನಿರ್ಧಾರ ಎಂದು ಹೇಳಿದ್ದಾರೆ. ಬೆಂಗಳೂರಿನ ಕೆಂಗಲ್ ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಆರೋಗ್ಯ ಮತ್ತು ಮಾನಸಿಕ ಬೆಳವಣಿಗೆಗೆ ಈ ಕ್ರಮ ಸಹಾಯಕವಾಗುತ್ತದೆ ಎಂದರು.

ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ವ್ಯಸನವು ಸಮಾಜದಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದೆ . “ಇಂದು ಮಕ್ಕಳಷ್ಟೇ ಅಲ್ಲ, ದೊಡ್ಡವರೂ ಸಹ ದಿನಕ್ಕೆ ಏಳು-ಎಂಟು ಗಂಟೆಗಳಷ್ಟು ಸ್ಕ್ರೀನ್ ಟೈಮ್ ಬಳಸುತ್ತಿದ್ದಾರೆ. ಮಕ್ಕಳು ಅಂತಾ ಅಲ್ಲ ನಮ್ಮ ಸ್ಕ್ರೀನ್ ಟೈಂ ಕೂಡ ಏಳೆಂಟು ಗಂಟೆ ಆಗಿದೆ‌. ಇದು ಒಳ್ಳೆಯ ಪ್ರವೃತ್ತಿಯಲ್ಲ. ಆದ್ದರಿಂದ ಮೊಬೈಲ್ ಬಳಕೆಗೆ ಕಡ್ಡಾಯವಾಗಿ ನಿಯಮಿತ ಮಿತಿಯನ್ನು ಇರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಮಕ್ಕಳಿಗೆ ಮಾತ್ರವಲ್ಲ, ಎಲ್ಲರೂ ತಮ್ಮ ಮೊಬೈಲ್ ಬಳಕೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯ ಎಂದರು.

ಚುನಾವಣೆ ಗೆಲ್ಲಲು  ಬಿಜೆಪಿ  ಇಂತಹ ಯೋಜನೆಗಳನ್ನು ಘೋಷಿಸುತ್ತದೆ

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಗ್ಯಾರಂಟಿ ಯೋಜನೆಗಳು ರಾಜ್ಯಕ್ಕೆ ಹೊರೆಯಾಗಿವೆ ಎಂಬ ಮಾತು ಸರಿಯಲ್ಲ. ಅಭಿವೃದ್ಧಿಯೊಂದಿಗೇ ಈ ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಿದೆ ಎಂದು ಸ್ಪಷ್ಟಪಡಿಸಿದರು. ಅವರು ಉದಾಹರಣೆಯಾಗಿ ಬಿಹಾರ ಚುನಾವಣೆಯನ್ನು ಉಲ್ಲೇಖಿಸಿ, ಬಿಹಾರದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯವರೇ ಹಲವು ಗ್ಯಾರಂಟಿ ರೀತಿಯ ಭರವಸೆಗಳನ್ನು ನೀಡಿದ್ದಾರೆ. ಚುನಾವಣೆ ಗೆಲ್ಲಲು ಅವರು ಸಹ ಇಂತಹ ಯೋಜನೆಗಳನ್ನು ಘೋಷಿಸುತ್ತಾರೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳೊಂದಿಗೆ ಹೋಲಿಸಿದರೆ, ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳು ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ಮಾಡುತ್ತಿವೆ ಎಂದು ಸಚಿವ ಸಂತೋಷ್ ಲಾಡ್ ಅಭಿಪ್ರಾಯಪಟ್ಟರು. ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅದು ಜನರಿಗೆ ನೇರವಾಗಿ ಪ್ರಯೋಜನಕಾರಿಯಾಗಿದೆ ಎಂದರು.

ಪಾಕಿಸ್ತಾನ ಎಂಬ ವಿಷಯಗಳನ್ನು ಮುಂದಿಟ್ಟುಕೊಂಡೇ ರಾಜಕೀಯ ಮಾಡುತ್ತಾರೆ

ಅಲ್ಪಸಂಖ್ಯಾತರ ಒಲೈಕೆ ಮಾಡುತ್ತಿದ್ದಾರೆ ಎಂಬ ಬಿಜೆಪಿ ಆರೋಪಗಳಿಗೂ ಅವರು ತೀವ್ರ ಪ್ರತಿಕ್ರಿಯೆ ನೀಡಿದರು. ಬಿಜೆಪಿಯವರು ಸದಾ ಅಲ್ಪಸಂಖ್ಯಾತರು ಅಥವಾ ಪಾಕಿಸ್ತಾನ ಎಂಬ ವಿಷಯಗಳನ್ನು ಮುಂದಿಟ್ಟುಕೊಂಡೇ ರಾಜಕೀಯ ಮಾಡುತ್ತಾರೆ. ಆ ವಿಷಯಗಳನ್ನು ಪ್ರಸ್ತಾಪಿಸದೇ ಇದ್ದರೆ ಅವರ ರಾಜಕೀಯ ನಡೆಯುವುದೇ ಇಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ದೇಶದ ದೊಡ್ಡ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿಗಳಿಗೆ ಸರ್ಕಾರದಿಂದ ನೀಡಲಾಗುತ್ತಿರುವ ನೆರವುಗಳ ಬಗ್ಗೆ ಪ್ರಶ್ನೆ ಎತ್ತಿದ ಅವರು, “ಅವರಿಗೆ ಎಷ್ಟು ಸೌಲಭ್ಯಗಳನ್ನು ನೀಡಲಾಗಿದೆ ಎಂಬುದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಆದರೆ ಅಲ್ಪಸಂಖ್ಯಾತರ ವಿಷಯ ಬಂದಾಗ ಮಾತ್ರ ದೊಡ್ಡ ಚರ್ಚೆ ನಡೆಯುತ್ತದೆ,” ಎಂದರು.

ಬಿಜೆಪಿಯ ಪಾರ್ಟಿ ನಿಧಿ ಕುರಿತೂ ಪ್ರಶ್ನೆ ಎತ್ತಿದ ಸಚಿವರು, “ಬಿಜೆಪಿಯವರ ಪಾರ್ಟಿ ಫಂಡ್ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿಯಷ್ಟು ಇದೆ ಎಂದು ಹೇಳಲಾಗುತ್ತದೆ. ಆಷ್ಟು ದೊಡ್ಡ ಮೊತ್ತ ಎಲ್ಲಿಂದ ಬಂದಿದೆ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಬೇಕು,” ಎಂದು ಹೇಳಿದರು.

ಇದಲ್ಲದೆ ಗೋಹತ್ಯೆ ಹಾಗೂ ಬೀಫ್ ರಫ್ತು ವಿಷಯದಲ್ಲಿಯೂ ಅವರು ಬಿಜೆಪಿ ವಿರುದ್ಧ ಟೀಕೆ ಮಾಡಿದರು. ಬೀಫ್ ಎಕ್ಸ್‌ಪೋರ್ಟ್ ಮಾಡುವವರಿಂದಲೇ ಕೋಟ್ಯಂತರ ರೂಪಾಯಿ ಚಂದಾ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ವಿಷಯಗಳ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.

ಪ್ರಧಾನ ಮಂತ್ರಿ ರಿಲೀಫ್ ಫಂಡ್ ಕುರಿತು ಪ್ರಶ್ನೆ ಮಾಡಬಾರದು ಎಂಬ ಹೇಳಿಕೆಗಳಿಗೂ ಅವರು ವಿರೋಧ ವ್ಯಕ್ತಪಡಿಸಿದರು. ಸಾರ್ವಜನಿಕ ಹಣ ಬಳಸುವ ಯಾವುದೇ ನಿಧಿ ಕುರಿತು ಪ್ರಶ್ನಿಸುವ ಹಕ್ಕು ಜನರಿಗೆ ಇದೆ ಎಂದು ಅಭಿಪ್ರಾಯಪಟ್ಟರು. ಒಟ್ಟಾರೆ, ಮಕ್ಕಳಲ್ಲಿ ಮೊಬೈಲ್ ಬಳಕೆಗೆ ನಿಯಂತ್ರಣ ಅಗತ್ಯವೆಂಬುದರಿಂದ ಹಿಡಿದು ಗ್ಯಾರಂಟಿ ಯೋಜನೆಗಳು, ಬಿಜೆಪಿ ಆರೋಪಗಳು ಮತ್ತು ರಾಜಕೀಯ ವಿಚಾರಗಳ ಕುರಿತು ಸಚಿವ ಸಂತೋಷ್ ಲಾಡ್ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

PREV
Read more Articles on
click me!

Recommended Stories

ಉನ್ನತ ಶಿಕ್ಷಣಕ್ಕೆ ಬಜೆಟ್ ಬಲ: ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಗೆ, ರೋಹಿತ್ ವೇಮುಲ ಕಾಯ್ದೆ ಜಾರಿಗೆ
Karnataka Budget: 60 ವರ್ಷದ ಹಳೆ ಅಬಕಾರಿ ನೀತಿಗೆ ಸರ್ಜರಿ; ಎಷ್ಟು ಪ್ರಮಾಣದ ಎಣ್ಣೆ ಕುಡಿತೀರೋ ಅಷ್ಟು ಟ್ಯಾಕ್ಸ್!