ವಿಶ್ವ ಮೋಟಾರ್ ಸೈಕಲ್ ದಿನ ವಿಶೇಷ: ರಾಯಲ್ ಎನ್ ಫೀಲ್ಡ್ ನಿಂದ ದಿ ಗ್ರೇಟ್ ಇಂಡಿಯನ್ ಕ್ರಾಸ್ ರೋಡ್ಸ್ ರೈಡ್

Published : Jun 21, 2026, 12:43 PM IST
Royal Enfield’s Great Indian Cross Roads Ride

ಸಾರಾಂಶ

ವಿಶ್ವ ಮೋಟಾರ್ ಸೈಕಲ್ ದಿನ ರಾಯಲ್ ಎನ್‌ಫೀಲ್ಡ್ ದಿ ಗ್ರೇಟ್ ಇಂಡಿಯನ್ ಕ್ರಾಸ್ ರೋಡ್ಸ್ ರೈಡ್ ಆರಂಭಗೊಂಡಿದೆ. ಒಟ್ಟು 750 ಕಿಲೋಮೀಟರ್ ಸುದೀರ್ಘ ಪಯಣ. ಪಂಜಾಬ್-ಹರಿಯಾಣದ ಹೆಬ್ಬಾಗಿಲು ಚಂಡೀಗಢದಿಂದ ಈ ರೈಡ್ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ.

"ನಾವು ಪ್ರಯಾಣಕ್ಕಾಗಿ ಬೈಕ್ ಓಡಿಸುವುದಿಲ್ಲ, ಬೈಕ್ ಓಡಿಸುವಾಗ ನಾವು ಜೀವಂತವಾಗಿದ್ದೇವೆ ಎಂಬ ಭಾವನೆ ಬರುತ್ತದೆ" - ಇದು ಜಗತ್ತಿನ ಪ್ರತಿಯೊಬ್ಬ ಬೈಕ್ ಪ್ರೇಮಿಯ ಮನದ ಮಾತು.

ಇಂದು ಜೂನ್ 21, ವಿಶ್ವ ಮೋಟಾರ್ ಸೈಕಲ್ ದಿನ. ವಿಶೇಷವೆಂದರೆ, ಇಂದು ವರ್ಷದ ಅತ್ಯಂತ ಸುದೀರ್ಘ ದಿನವೂ ಹೌದು. ಸೂರ್ಯ ಮುಳುಗಲು ಹೆಚ್ಚು ಸಮಯ ತೆಗೆದುಕೊಳ್ಳುವ, ಸವಾರಿಗೆ ದೀರ್ಘಾವಧಿಯ ಬೆಳಕನ್ನು ನೀಡುವ ಇದೇ ಕಾರಣಕ್ಕಾಗಿ ಜೂನ್ 21 ಅನ್ನು ವಿಶ್ವ ಮೋಟಾರ್ ಸೈಕಲ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವಿಶೇಷ ಸಂದರ್ಭದಲ್ಲಿ, ಭಾರತದ ಹೆಮ್ಮೆಯ ಬೈಕಿಂಗ್ ಸಂಸ್ಕೃತಿಯ ಮುಂಚೂಣಿ ಸಂಸ್ಥೆಯಾದ ರಾಯಲ್ ಎನ್ಫೀಲ್ಡ್ ಅತ್ಯಂತ ರೋಮಾಂಚಕ ರೈಡ್ ಒಂದನ್ನು ಆಯೋಜಿಸಿದೆ.

ದೇಶದಲ್ಲಿ ರೈಡಿಂಗ್ ಸಂಸ್ಕೃತಿಯನ್ನು ಕೇವಲ ಹವ್ಯಾಸವಾಗಿಸದೆ, ಅದನ್ನೊಂದು ಜೀವನಶೈಲಿಯನ್ನಾಗಿ ಬೆಳೆಸುತ್ತಾ ಬಂದಿರುವ ರಾಯಲ್ ಎನ್ಫೀಲ್ಡ್, ಈ ಬಾರಿ ದಿ ಗ್ರೇಟ್ ಇಂಡಿಯನ್ ಕ್ರಾಸ್ ರೋಡ್ಸ್ ಹೆಸರಿನ ವಿಶಿಷ್ಟ ರೈಡ್ ಅನ್ನು ಹಮ್ಮಿಕೊಂಡಿದೆ.

ದಕ್ಷಿಣ ಭಾರತದ ಸವಾರರಿಗೆ ರೋಮಾಂಚನಕಾರಿ ಅನುಭವ

ಇದು ಕೇವಲ ಬೈಕ್ ಸವಾರಿಯಲ್ಲ; ಭೌಗೋಳಿಕ ಗಡಿಗಳನ್ನು ಮೀರಿದ ಒಂದು ಸೊಗಸಾದ ಅನುಭವ. ದಕ್ಷಿಣ ಭಾರತದ ಬೈಕ್ ಸವಾರರಿಗೆ ಉತ್ತರ ಭಾರತದ ಕಡಿದಾದ, ರೋಮಾಂಚನಕಾರಿ ರಸ್ತೆಗಳು ಹಾಗೂ ಹಿಮಾಲಯದ ಸುಂದರ ಕಣಿವೆಗಳನ್ನು ಪರಿಚಯಿಸುವುದು ಈ ರೈಡ್ ನ ಮುಖ್ಯ ಉದ್ದೇಶವಾಗಿದೆ. ವಿಶ್ವ ಮೋಟಾರ್ ಸೈಕಲ್ ದಿನ ಸಂದರ್ಭದಲ್ಲಿ ಆರಂಭವಾಗಿರುವ ಈ ವಿಶಿಷ್ಟ ರೈಡ್ ಒಟ್ಟು 750 ಕಿಲೋಮೀಟರ್ಗಳ ಸುದೀರ್ಘ ಹಾದಿಯನ್ನು ಒಳಗೊಂಡಿದೆ.

ಪಂಜಾಬ್-ಹರಿಯಾಣದ ಹೆಬ್ಬಾಗಿಲು ಚಂಡೀಗಢದಿಂದ ಈ ರೈಡ್ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. ಚಂಡೀಗಢದಿಂದ ಹೊರಡುವ ರೈಡರ್ ಗಳ ತಂಡವು ಸುಂದರ ಬೆಟ್ಟಗಳ ನಗರಿ ಶಿಮ್ಲಾ, ಪ್ರಕೃತಿ ಸೊಬಗಿನ ಕುಲು ಕಣಿವೆಯ ಸೌಂದರ್ಯವನ್ನು ಸವಿಯುತ್ತಾ ಸಾಗಿ, ಹಿಮಾಲಯದ ಸವಾಲಿನ ರಸ್ತೆಗಳನ್ನು ಸವೆಸಿ, ಪ್ರಕೃತಿಯ ಮಡಿಲಲ್ಲಿ ಮೋಟಾರ್ ಸೈಕಲ್ ದಿನವನ್ನು ಆಚರಿಸಿದ ನಂತರ ಈ ತಂಡವು ಪುನಃ ಚಂಡೀಗಢಕ್ಕೆ ಮರಳಲಿದೆ.

ಹಿಮಾಲಯದ ಕಡಿದಾದ ರಸ್ತೆಗಳಲ್ಲಿ ಸವಾರರ ಸುರಕ್ಷತೆ ಮತ್ತು ರೈಡ್ ಯಶಸ್ವಿಯಾಗಿ ನಡೆಯಲು ರಾಯಲ್ ಎನ್ ಫೀಲ್ಡ್ ತಂಡದ ಇಬ್ಬರು ಅನುಭವಿಗಳು ಈ ಯಾತ್ರೆಯ ಮುಂಚೂಣಿಯಲ್ಲಿದ್ದಾರೆ. ರಾಯಲ್ ಎನ್ ಫೀಲ್ಡ್ ಸಂಸ್ಥೆಯ ಪಿಆರ್ ಆಂಡ್ ಕಮ್ಯುನಿಕೇಷನ್ಸ್ ತಂಡದ ವ್ಯವಸ್ಥಾಪಕರಾದ ಬಾಲಾಜಿ ಮತ್ತು ರಾಯಲ್ ಎನ್ಫೀಲ್ಡ್ ಸಂಸ್ಥೆಯ ರೈಡಿಂಗ್ ಟೀಮ್ ತಂಡದ ನಾಯಕ ಮುಖ್ಯಸ್ಥರಾದ ರೋಹನ್ ಪಿಂಪ್ಲೆ ಈ ರೈಡ್ ನ ನಿರ್ವಹಣೆ ಮಾಡುತ್ತಿದ್ದಾರೆ. ಅವರ ಜೊತೆಗೆ ರಾಯಲ್ ಎನ್ ಫೀಲ್ಡ್ ರೈಡಿಂಗ್ ತಂಡದ ಅಮಲ್, ವರುಣ್, ಅಮಿತ್, ಸುಮಿತ್ ಇದ್ದಾರೆ.

ರಾಯಲ್ ಎನ್ಫೀಲ್ಡ್ ಕೇವಲ ಬೈಕ್ ತಯಾರಿಸುವ ಕಂಪನಿಯಲ್ಲ, ಬಹುತೇಕರಿಗೆ ಅದೊಂದು ಭಾವ. ದಕ್ಷಿಣ ಭಾರತದ ಕರಾವಳಿ, ಬಯಲು ಸೀಮೆಯ ರಸ್ತೆಗಳಲ್ಲಿ ಬೈಕ್ ಓಡಿಸಿ ರೂಢಿಯಿರುವ ಸವಾರರು, ಹಿಮಾಲಯದ ಕಣಿವೆಗಳಲ್ಲಿ, ಮೈನಡುಗಿಸುವ ಚಳಿಯಲ್ಲಿ ಬೈಕ್ ಓಡಿಸುವುದು ಒಂದು ಜೀವಮಾನದ ಅನುಭವ. ವಿಶ್ವ ಮೋಟಾರ್ ಸೈಕಲ್ ದಿನದಂದು ಇಂತಹದ್ದೊಂದು ಸಾಹಸಕ್ಕೆ ಮುನ್ನುಡಿ ಬರೆದಿರುವ ರಾಯಲ್ ಎನ್ಫೀಲ್ಡ್ ಸಂಸ್ಥೆ ಹಾಗೂ ಅದರಲ್ಲಿ ಭಾಗವಹಿಸಿರುವ ಎಲ್ಲಾ ರೈಡರ್ ಗಳಿಗೆ ಹ್ಯಾಪಿ ರೈಡಿಂಗ್.

ರಸ್ತೆ ನಿಮ್ಮದಾಗಲಿ, ಸವಾರಿ ಸುರಕ್ಷಿತವಾಗಿರಲಿ.

 

PREV
Read more Articles on
click me!

Recommended Stories

ಬೆಂಗಳೂರಲ್ಲಿ Royal Enfield ಇವಿ ಬೈಕ್ ಫ್ಲೈಯಿಂಗ್ ಫ್ಲಿಯಾ C6 ವಿತರಣೆ, 154 ಕಿ.ಮೀ ರೇಂಜ್, ಅತ್ಯಾಧುನಿಕ ಫೀಚರ್‌!
ಕೇವಲ ಸ್ಟೈಲ್ ಅಷ್ಟೇ ಅಲ್ಲ, ಸುರಕ್ಷತೆಯೂ ಮುಖ್ಯ! ಹೆಲ್ಮೆಟ್ ಖರೀದಿಸುವಾಗ ಈ ವಿಷಯಗಳು ನೆನಪಿರಲಿ