
ಎಲೆಕ್ಟ್ರಿಕ್ ಸ್ಕೂಟರ್ (Electric scooter) ಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಜನರು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಹೊಸ ಹಣಕಾಸು ವರ್ಷದ ಮೊದಲ ತಿಂಗಳು ಅಂದ್ರೆ ಏಪ್ರಿಲ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಈ ತಿಂಗಳು ದೇಶದಾದ್ಯಂತ 91, 791 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವಾಗಿದೆ. ಈ ಬಾರಿ ಸೇಲ್ಸ್ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಕಾಣ್ಬಹುದು. ಮಾರುಕಟ್ಟೆ ಆಳ್ತಿದ್ದ ಓಲಾಗೆ ಹೊಡೆತ ಬಿದ್ದಿದೆ. ಓಲಾ ಪಟ್ಟಿಯಲ್ಲಿ ಹಿಂದೆ ಬಿದ್ದಿದೆ. ಚೇತಕ್ ಕೂಡ ಹಿನ್ನಡೆ ಅನುಭವಿಸಿದೆ. ಹಾಗಿದ್ರೆ ಏಪ್ರಿಲ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಇಲೆಕ್ಟ್ರಿಕ್ ಸ್ಕೂಟರ್ ಯಾವ್ದು ಗೊತ್ತಾ?
ಏಪ್ರಿಲ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 5 ಸ್ಕೂಟರ್ :
ಹೀರೋ ಮೋಟೋಕಾರ್ಪ್(Hero MotoCorp) : ನಂಬರ್ ಐದನೇ ಸ್ಥಾನದಲ್ಲಿ ಹೀರೋ ಮೋಟೋಕಾರ್ಪ್ ಸ್ಥಾನ ಪಡೆದಿದೆ. ಹೀರೋ ಮೋಟೋಕಾರ್ಪ್ ಎಲೆಕ್ಟ್ರಿಕ್ ಸ್ಕೂಟರ್ ವಿಡಾ, 6,123 ಯುನಿಟ್ ಮಾರಾಟ ಮಾಡಿದೆ. ಕೆಲ ದಿನಗಳ ಹಿಂದೆ ಕಂಪನಿ ವಿಡಾ ಮೇಲೆ ಆಫರ್ ನೀಡಿತ್ತು. ವಿಡಾ, ಜುಲೈ 2022ರಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಅಥರ್ ಎನರ್ಜಿ (Ather Energy) : ಅಥರ್ ಎನರ್ಜಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ. ಅಥರ್ ಎನರ್ಜಿ, ಎಪ್ರಿಲ್ 2025ರಲ್ಲಿ 13, 167 ಯುನಿಟ್ ಮಾರಾಟ ಮಾಡಿದೆ. ಕಂಪನಿ ಪೋರ್ಟ್ಪೋಲಿಯೋದಲ್ಲಿ ನಾಲ್ಕು ಸ್ಕೂಟರ್ ಸೇರಿದೆ. ಅಥರ್ ಎನರ್ಜಿಯನ್ನು ಬಜೆಟ್ ಫ್ರೆಂಡ್ಲಿ ಸ್ಕೂಟರ್ ಎಂದೇ ಕರೆಯಲಾಗುತ್ತದೆ.
ಬಜಾಜ್ ಚೇತಕ್ (Bajaj Chetak) : ಏಪ್ರಿಲ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಪಟ್ಟಿಯಲ್ಲಿ ಬಜಾಜ್ ಚೇತಕ್ ಮೂರನೇ ಸ್ಥಾನದಲ್ಲಿದೆ. ಬಜಾಜ್ ಚೇತಕ್ನ 19, 001 ಯೂನಿಟ್ ಏಪ್ರಿಲ್ ತಿಂಗಳಿನಲ್ಲಿ ಮಾರಾಟವಾಗಿದೆ. ಏಪ್ರಿಲ್ ನಲ್ಲಿ ಚೇತಕ್ ಬೇಡಿಕೆ ಗಣನೀಯವಾಗಿ ಇಳಿದಿದೆ ಎಂದೇ ಹೇಳ್ಬಹುದು. ಮಾರ್ಚ್ ನಲ್ಲಿ ಅತಿ ಹೆಚ್ಚು ಮಾರಾಟವಾಗಿದ್ದ ಬಜಾಜ್ ಚೇತಕ್, ಏಪ್ರಿಲ್ ನಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದೆ. ಬಜಾಜ್ ಚೇತಕ್ ಇಲೆಕ್ಟ್ರಿಕ್ ಸ್ಕೂಟಿ 98,498 ರಿಂದ ರೂ.1.02 ಲಕ್ಷ ರೂಪಾಯಿಗೆ ಲಭ್ಯವಿದೆ. ಬಜಾಜ್ ಕಂಪನಿ ಸದ್ಯ ಬಜಾಜ್ ಚೇತಕ್ 3503 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. 1.10 ಲಕ್ಷ ರೂಪಾಯಿಗೆ ನೀವು ಈ ಸ್ಕೂಟರ್ ಖರೀದಿ ಮಾಡ್ಬಹುದು. ಸಂಪೂರ್ಣ ಚಾರ್ಜ್ ಆಗಲು ಮೂರು ಗಂಟೆ 25 ನಿಮಿಷ ಬೇಕು.
ಓಲಾ ಎಲೆಕ್ಟ್ರಿಕ್ (Ola Electric) : ಏಪ್ರಿಲ್ ಪಟ್ಟಿಯಲ್ಲಿ ಓಲಾ ಎಲೆಕ್ಟ್ರಿಕ್ ಎರಡನೇ ಸ್ಥಾನದಲ್ಲಿದೆ. ಏಪ್ರಿಲ್ ನಲ್ಲಿ ಓಲಾ ಎಲೆಕ್ಟ್ರಿಕ್ ನ 19, 709 ಯುನಿಟ್ ಮಾರಾಟವಾಗಿದೆ. ಇದಕ್ಕೆ ಭಾರತದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ರಸ್ತೆಯಲ್ಲಿ ಅನೇಕ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಓಡ್ತಿರೋದೇ ಇದಕ್ಕೆ ಸಾಕ್ಷ್ಯ.
ಟಿವಿಎಸ್ ಐಕ್ಯೂಬ್ (TVS iQube) : ಟಿವಿಎಸ್ ನ ಒಂದೇ ಒಂದು ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಐಕ್ಯೂಬ್, ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಓಲಾ ಹಾಗೂ ಬಜಾಜ್ ಚೇತಕ್ ಹಿಂದಿಕ್ಕಿರುವ ಟಿವಿಎಸ್ ಐಕ್ಯೂಬ್, ಏಪ್ರಿಲ್ ನಲ್ಲಿ 19, 736 ಯುನಿಟ್ ಮಾರಾಟ ಮಾಡಿದೆ. ಓಲಾ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಐಕ್ಯೂಬ್ ಮಧ್ಯೆ ದೊಡ್ಡ ಅಂತರವಿಲ್ಲ. ಟಿವಿಎಸ್ ಐಕ್ಯೂಬ್ ನ ಕೇವಲ 27 ಯುನಿಟ್ ಮಾತ್ರ ಹೆಚ್ಚುವರಿ ಮಾರಾಟವಾಗಿದೆ.
ಫೆಬ್ರವರಿಯಲ್ಲಿ ಓಲಾ ಎಲೆಕ್ಟ್ರಿಕ್ ತನ್ನ ಮಾರಾಟದ ಬಗ್ಗೆ ತಪ್ಪು ಮಾಹಿತಿ ನೀಡಿದೆ ಎಂದು ಗ್ರಾಹಕರು ಆರೋಪ ಮಾಡಿದ್ದರು. ಆದ್ರೆ ಅದನ್ನು ಕಂಪನಿ ಅಲ್ಲಗಳೆದಿತ್ತು.