ಜೂನ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಭರ್ಜರಿ ಕಮಾಲ್!; ಒಂದೇ ತಿಂಗಳಲ್ಲಿ 1.14 ಲಕ್ಷ ಬೈಕ್ ಮಾರಾಟ, ಶೇ. 27 ರಷ್ಟು ವೃದ್ಧಿಸಿದ ಸೇಲ್ಸ್!

Published : Jul 02, 2026, 03:12 PM IST
Royal Enfield Bullet 650

ಸಾರಾಂಶ

ರಾಯಲ್ ಎನ್‌ಫೀಲ್ಡ್ ಕಂಪನಿಯು ಜೂನ್ 2026 ರಲ್ಲಿ 1,14,032 ಬೈಕ್‌ಗಳನ್ನು ಮಾರಾಟ ಮಾಡಿ ಶೇ. 27 ರಷ್ಟು ಬೆಳವಣಿಗೆ ಸಾಧಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಕಂಡರೂ, ರಫ್ತು ಕುಸಿತವನ್ನು ಎದುರಿಸಿದೆ. 

ಬೆಂಗಳೂರು (ಜು.2): ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯ ದೈತ್ಯ ಕಂಪನಿಗಳಲ್ಲೊಂದಾದ ‘ರಾಯಲ್ ಎನ್‌ಫೀಲ್ಡ್’ (Royal Enfield) ಜೂನ್ 2026 ರ ತಿಂಗಳಲ್ಲಿ ಅತ್ಯಂತ ಬಲಿಷ್ಠ ಮಾರಾಟ ಕಂಡಿದೆ. ಕಂಪನಿಯು ಈ ಒಂದೇ ತಿಂಗಳಲ್ಲಿ ಒಟ್ಟು 1,14,032 ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುವ ಮೂಲಕ ವಾರ್ಷಿಕ ಆಧಾರದ ಮೇಲೆ ಶೇಕಡಾ 27 ರಷ್ಟು ಭರ್ಜರಿ ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷದ ಜೂನ್ 2025 ರ ಅವಧಿಯಲ್ಲಿ ಕಂಪನಿಯು 89,540 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಈ ದಾಖಲೆಯ ಬೆಳವಣಿಗೆಗೆ ಭಾರತೀಯ ಮಾರುಕಟ್ಟೆಯಲ್ಲಿ ಉಂಟಾದ ಭಾರಿ ಬೇಡಿಕೆಯೇ ಪ್ರಮುಖ ಕಾರಣವಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಶೇ. 34 ರಷ್ಟು ಭಾರಿ ಜಂಪ್; ರಫ್ತು ಕುಸಿತ

ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಮಾರಾಟವು ಶೇಕಡಾ 34 ರಷ್ಟು ಭಾರಿ ಜಿಗಿತ ಕಂಡಿದ್ದು, ಒಟ್ಟು ಮಾರಾಟ 1,02,930 ಯುನಿಟ್‌ಗಳಿಗೆ ತಲುಪಿದೆ. ಆದರೆ, ಇದೇ ಅವಧಿಯಲ್ಲಿ ಕಂಪನಿಯ ವಿದೇಶಿ ರಫ್ತು (Export) ವ್ಯವಹಾರವು ತೀವ್ರ ಒತ್ತಡಕ್ಕೆ ಸಿಲುಕಿದೆ. ಜೂನ್ 2025 ರಲ್ಲಿ ಕಂಪನಿಯು 12,583 ಯುನಿಟ್‌ಗಳನ್ನು ವಿದೇಶಕ್ಕೆ ರಫ್ತು ಮಾಡಿತ್ತು, ಆದರೆ ಈ ವರ್ಷದ ಜೂನ್‌ನಲ್ಲಿ ಈ ಪ್ರಮಾಣವು 11,102 ಯುನಿಟ್‌ಗಳಿಗೆ ಇಳಿಕೆಯಾಗಿದೆ. ಅಂದರೆ ರಫ್ತು ವ್ಯವಹಾರದಲ್ಲಿ ಸುಮಾರು ಶೇಕಡಾ 12 ರಷ್ಟು ಕುಸಿತ ದಾಖಲಾಗಿದೆ. ಆದರೆ, ದೇಶೀಯ ಮಾರುಕಟ್ಟೆಯ ಗಟ್ಟಿಮುಟ್ಟಾದ ಬೇಡಿಕೆಯು ಒಟ್ಟಾರೆ ಮಾರಾಟದ ಗ್ರಾಫ್ ಕುಸಿಯದಂತೆ ನೋಡಿಕೊಂಡಿದೆ.

ಹೊಸ ಹಣಕಾಸು ವರ್ಷ 2026-27 ರ ಆರಂಭಿಕ ತಿಂಗಳುಗಳಲ್ಲೂ ರಾಯಲ್ ಎನ್‌ಫೀಲ್ಡ್ ತನ್ನ ಜಯಭೇರಿಯನ್ನು ಮುಂದುವರಿಸಿದೆ. ಪ್ರಸಕ್ತ ಹಣಕಾಸು ವರ್ಷದ ಈ ಅವಧಿಯಲ್ಲಿ ಕಂಪನಿಯು ಇದುವರೆಗೆ ಒಟ್ಟು 3,30,427 ಬೈಕ್‌ಗಳನ್ನು ಮಾರಾಟ ಮಾಡಿದೆ. ಇದು ಕಳೆದ ಹಣಕಾಸು ವರ್ಷದ ಇದೇ ಅವಧಿಯ ಮಾರಾಟಕ್ಕೆ (2,65,528 ಯುನಿಟ್‌ಗಳು) ಹೋಲಿಸಿದರೆ ಸುಮಾರು ಶೇಕಡಾ 24 ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ದೇಶೀಯ ಮಾರಾಟವು ಶೇ. 32 ರಷ್ಟು ಹೆಚ್ಚಳವಾಗಿ 3,01,174 ಯುನಿಟ್‌ಗಳಿಗೆ ತಲುಪಿದ್ದರೆ, ಒಟ್ಟಾರೆ ರಫ್ತು ಪ್ರಮಾಣವು ಶೇ. 20 ರಷ್ಟು ಕುಸಿದು 29,253 ಯುನಿಟ್‌ಗಳಿಗೆ ಬಂದು ನಿಂತಿದೆ.

ಬೆಂಗಳೂರಿನಿಂದಲೇ ಆರಂಭವಾಯ್ತು ರಾಯಲ್ ಎನ್‌ಫೀಲ್ಡ್ ಇ-ಬೈಕ್ ಜಮಾನಾ!

ಜೂನ್ ತಿಂಗಳು ಕಂಪನಿಯ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಕಂಪನಿಯು ತನ್ನ ಬಹುನಿರೀಕ್ಷಿತ ಚೊಚ್ಚಲ ಎಲೆಕ್ಟ್ರಿಕ್ ಬೈಕ್‌ನ ವಿತರಣೆಯನ್ನು (Delivery) ಇದೇ ತಿಂಗಳು ಅಧಿಕೃತವಾಗಿ ಪ್ರಾರಂಭಿಸಿದೆ. ಕಂಪನಿಯ ಹೊಸ ಎಲೆಕ್ಟ್ರಿಕ್ ವಿಭಾಗವಾದ ‘ಫ್ಲೈಯಿಂಗ್ ಫ್ಲೀ’ (Flying Flea) ಬ್ರ್ಯಾಂಡ್ ಅಡಿಯಲ್ಲಿ ಬಿಡುಗಡೆ ಮಾಡಲಾಗಿರುವ ‘C6’ (Model C6) ಮಾದರಿಯ ಮೊದಲ ಬ್ಯಾಚ್ ಬೈಕ್‌ಗಳ ವಿತರಣೆಯು ಐಟಿ ನಗರಿ ಬೆಂಗಳೂರಿನಿಂದಲೇ ಯಶಸ್ವಿಯಾಗಿ ಆರಂಭಗೊಂಡಿದೆ. ಈ ಮಾಡೆಲ್‌ನೊಂದಿಗೆ ಗ್ರಾಹಕರಿಗೆ ಅತ್ಯಾಧುನಿಕ ಸರ್ವಿಸ್ ಸಿಸ್ಟಮ್, ವಿಸ್ತಾರವಾದ ಡೀಲರ್‌ಶಿಪ್ ನೆಟ್‌ವರ್ಕ್ ಮತ್ತು 24×7 ರೋಡ್‌ಸೈಡ್ ಅಸಿಸ್ಟೆನ್ಸ್ (ರಸ್ತೆಬದಿಯ ತುರ್ತು ನೆರವು) ನಂತಹ ಪ್ರೀಮಿಯಂ ಸೌಲಭ್ಯಗಳನ್ನು ಕಂಪನಿ ಒದಗಿಸುತ್ತಿದೆ.

ಈ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಏಕಕಾಲದಲ್ಲಿ ಇಡೀ ದೇಶಾದ್ಯಂತ ಬಿಡುಗಡೆ ಮಾಡುವ ಬದಲಿಗೆ, ಹಂತ ಹಂತವಾಗಿ (Phase-wise) ಬೇರೆ ಬೇರೆ ನಗರಗಳಲ್ಲಿ ಪರಿಚಯಿಸಲು ಕಂಪನಿ ಯೋಜಿಸಿದೆ. ಇದರಿಂದ ಗ್ರಾಹಕರ ನೈಜ ಪ್ರತಿಕ್ರಿಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಇನ್ನಷ್ಟು ಬಲಪಡಿಸಲು ಕಂಪನಿಗೆ ಉತ್ತಮ ಅವಕಾಶ ಸಿಗಲಿದೆ. ಒಟ್ಟಾರೆಯಾಗಿ ಹೇಳುವುದಾದರೆ, ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಎಲೆಕ್ಟ್ರಿಕ್ ವಾಹನ (EV) ವಲಯಕ್ಕೆ ಭರ್ಜರಿಯಾಗಿ ಹೆಜ್ಜೆ ಇಟ್ಟಿರುವುದು ಕಂಪನಿಯ ಬೆಳವಣಿಗೆಯನ್ನು ಉತ್ತಮ ಸ್ಥಿತಿಯಲ್ಲಿಟ್ಟಿದೆ. ಆದರೆ ಜಾಗತಿಕ ರಫ್ತು ಮಾರುಕಟ್ಟೆಯಲ್ಲಿ ಎದುರಾಗಿರುವ ಕುಸಿತವನ್ನು ನಿಯಂತ್ರಿಸುವುದು ಕಂಪನಿಯ ಮುಂದಿರುವ ಪ್ರಮುಖ ಸವಾಲಾಗಿದೆ.

 

PREV
Read more Articles on
click me!

Recommended Stories

ಟಿವಿಎಸ್ ಮೋಟಾರ್ ಷೇರು ಅಬ್ಬರ: ಜೂನ್ ಮಾರಾಟದಲ್ಲಿ ಶೇ.47 ಪ್ರಗತಿ; ನಾರ್ಟನ್ ನಷ್ಟದ ನಡುವೆಯೂ ಹೂಡಿಕೆದಾರರ ವಿಶ್ವಾಸ
ಫೈಬರ್‌, ಪ್ಲಾಸ್ಟಿಕ್ ಸ್ಕೂಟರ್‌ಗಳ ಜಮಾನಾದಲ್ಲಿ ಇವಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿವೆ Metal Body ಹೊಂದಿರುವ ಈ ಎರಡು ಸ್ಕೂಟರ್‌ಗಳು!