ಕ್ಲಾಸಿಕ್ ಲೆಜೆಂಡ್ಸ್ ವಹಿವಾಟು ಬರೋಬ್ಬರಿ ಶೇ. 55ರಷ್ಟು ಏರಿಕೆ, ವಾರ್ಷಿಕ 2 ಲಕ್ಷ ಬೈಕ್ ಉತ್ಪಾದನೆಯ ಗುರಿ

Published : Nov 17, 2026, 04:52 PM IST
Classic Legends

ಸಾರಾಂಶ

ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಐತಿಹಾಸಿಕ ಬ್ರ್ಯಾಂಡ್‌ಗಳಿಗೆ ಹೊಸ ರೂಪ ನೀಡಿರುವ ಮಹೀಂದ್ರಾ ಸಮೂಹದ ‘ಕ್ಲಾಸಿಕ್ ಲೆಜೆಂಡ್ಸ್’ ಸಂಸ್ಥೆಯು 2026ನೇ ಆರ್ಥಿಕ ವರ್ಷದಲ್ಲಿ ಬರೋಬ್ಬರಿ ಶೇ. 55ರಷ್ಟು ವಹಿವಾಟು ವೃದ್ಧಿಯೊಂದಿಗೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಬೆಂಗಳೂರು: ಮಹೀಂದ್ರಾ ಸಮೂಹದ ‘ಕ್ಲಾಸಿಕ್ ಲೆಜೆಂಡ್ಸ್’ ಸಂಸ್ಥೆಯ ವಹಿವಾಟು 2026ನೇ ಆರ್ಥಿಕ ವರ್ಷದಲ್ಲಿ ಶೇ. 55ರಷ್ಟು ಭಾರೀ ಏರಿಕೆ ಕಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಶೇ. 40ರಷ್ಟು ಪ್ರಗತಿ ಸಾಧಿಸಿರುವ ಸಂಸ್ಥೆಯು, ಇದೀಗ 2026ರ ಅಂತ್ಯದ ವೇಳೆಗೆ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು 1.20 ಲಕ್ಷದಿಂದ 2 ಲಕ್ಷಕ್ಕೂ ಹೆಚ್ಚು ಬೈಕ್‌ಗಳಿಗೆ ಏರಿಸಲು ಮುಂದಾಗಿದೆ.

ಇದರ ಜೊತೆಗೆ ದೇಶಾದ್ಯಂತ ಸದ್ಯ ಇರುವ 450ಕ್ಕೂ ಹೆಚ್ಚು ಮಾರಾಟ ಮತ್ತು ಸೇವಾ ಕೇಂದ್ರಗಳನ್ನು 2028ನೇ ಆರ್ಥಿಕ ವರ್ಷದೊಳಗೆ 700ಕ್ಕೂ ಅಧಿಕ ಕೇಂದ್ರಗಳಿಗೆ ವಿಸ್ತರಿಸಲು ಹಾಗೂ ಸಿಕೆಡಿ ಮಾದರಿಯಲ್ಲಿ ವಿದೇಶಿ ಮಾರುಕಟ್ಟೆ ಪ್ರವೇಶಿಸಲು ಕಂಪನಿ ಯೋಜನೆ ರೂಪಿಸಿದೆ.

ಐತಿಹಾಸಿಕ ಬ್ರ್ಯಾಂಡ್‌ಗಳಿಗೆ ಮರುಜೀವ

ಭಾರತದ ರಸ್ತೆಗಳಲ್ಲಿ ಒಂದು ಕಾಲದಲ್ಲಿ ಅಧಿಪತ್ಯ ಸಾಧಿಸಿದ್ದ ಐತಿಹಾಸಿಕ ‘ಜಾವಾ’, ‘ಯೆಜ್ಡಿ’ ಮತ್ತು ‘ಬಿಎಸ್‌ಎ’ ಮೋಟಾರ್‌ಸೈಕಲ್ ಬ್ರ್ಯಾಂಡ್‌ಗಳಿಗೆ ಮರುಜೀವ ನೀಡುವ ಉದ್ದೇಶದಿಂದ ಕ್ಲಾಸಿಕ್‌ ಲೆಜೆಂಡ್ಸ್‌ ಸ್ಥಾಪನೆ ಮಾಡಲಾಗಿತ್ತು. ಇದರ ಸಹ-ಸಂಸ್ಥಾಪಕರಾದ ಅನುಪಮ್ ಥರೇಜಾ ಮತ್ತು ಬೊಮನ್ ಇರಾನಿ ನೇತೃತ್ವದ ಕಂಪನಿ 2018ರ ನವೆಂಬರ್ 15ರಂದು ಜೆಕ್ ರಿಪಬ್ಲಿಕ್‌ ಮೂಲದ ‘ಜಾವಾ’ ಬೈಕ್‌ಗಳನ್ನು ಭಾರತಕ್ಕೆ ಮರಳಿ ತರುವ ಮೂಲಕ ತನ್ನ ಪಯಣ ಆರಂಭಿಸಿತ್ತು.

ಈ ವೇಳೆ ಜಾವಾ 350, ಜಾವಾ 42 ಹಾಗೂ ಫ್ಯಾಕ್ಟರಿ-ಕಸ್ಟಮ್ ಬಾಬ್ಬರ್‌ ಮಾದರಿಯ ‘ಪೆರಾಕ್’ ಬೈಕ್‌ಗಳಿಗೆ ಒಂದೇ ದಿನದಲ್ಲಿ 1 ಲಕ್ಷಕ್ಕೂ ಹೆಚ್ಚು ಬುಕಿಂಗ್ ಲಭಿಸಿ ವೆಬ್‌ಸೈಟ್ ಸ್ಥಗಿತಗೊಳ್ಳುವಷ್ಟರ ಮಟ್ಟಿಗೆ ಬೇಡಿಕೆ ಸೃಷ್ಟಿಯಾಗಿತ್ತು. ಈ ಬೇಡಿಕೆಗೆ ಸ್ಪಂದಿಸಿದ ಕಂಪನಿ ಕೇವಲ 100 ದಿನಗಳಲ್ಲಿ 100 ಡೀಲರ್‌ಶಿಪ್‌ಗಳನ್ನು ತೆರೆದಿತ್ತು. 2020–21ರ ಕೋವಿಡ್ ಸಾಂಕ್ರಾಮಿಕದ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ ಸಂಸ್ಥೆ, ಎಂಜಿನಿಯರಿಂಗ್ ಮತ್ತು ವಿತರಣಾ ಜಾಲವನ್ನು ಮತ್ತಷ್ಟು ಬಲಪಡಿಸಿತ್ತು.

ನಂತರ 2022ರಲ್ಲಿ ಬೊಮನ್‌ ಮತ್ತು ಫರೋಖ್ ಇರಾನಿ ಅವರು 1971ರಲ್ಲಿ ‘ಐಡಿಯಲ್ ಜಾವಾ’ ಮೂಲಕ ರೂಪಿಸಿದ್ದ ದೇಸಿ ಬ್ರ್ಯಾಂಡ್ ‘ಯೆಜ್ಡಿ’ಯನ್ನು ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಮಾದರಿಗಳೊಂದಿಗೆ ಯುವ ಸವಾರರಿಗೆ ಮರುಪರಿಚಯಿಸಲಾಯಿತು.

2023ರ ವೇಳೆಗೆ ಇದು ಬೃಹತ್ ರೈಡರ್ ಆಂದೋಲನವಾಗಿ ಬೆಳೆದು, 21ನೇ ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನಾಚರಣೆಯಲ್ಲಿ 10,000ಕ್ಕೂ ಹೆಚ್ಚು ಸವಾರರು ಪಾಲ್ಗೊಂಡಿದ್ದರು. ‘ನೋಮ್ಯಾಡ್ಸ್ ಕಮ್ಯುನಿಟಿ’ ಮೂಲಕ ಹಳೆಯ ಮತ್ತು ಹೊಸ ತಲೆಮಾರಿನ ಬೈಕ್ ಪ್ರಿಯರನ್ನು ಇದರ ಮೂಲಕ ಒಂದುಗೂಡಿಸಲಾಗಿತ್ತು.

2024ರಲ್ಲಿ ಬ್ರಿಟನ್‌ನ 1861ರ ಐತಿಹಾಸಿಕ ‘ಬಿಎಸ್‌ಎ’ ಬ್ರ್ಯಾಂಡ್‌ನ ‘ಗೋಲ್ಡ್ ಸ್ಟಾರ್ 650’ ಬೈಕ್ ಬಿಡುಗಡೆಯೊಂದಿಗೆ ಸಂಸ್ಥೆಯ ಮೂರು ಬ್ರ್ಯಾಂಡ್‌ಗಳ ಶ್ರೇಣಿ ಪೂರ್ಣಗೊಂಡಿತು. 1903ರಲ್ಲಿ ಮೋಟಾರ್‌ಸೈಕಲ್ ವಿಭಾಗ ಆರಂಭಿಸಿ 1950ರ ದಶಕದಲ್ಲಿ ಜಗತ್ತಿನ ಅತಿದೊಡ್ಡ ಬೈಕ್ ತಯಾರಕ ಎನಿಸಿದ್ದ ಈ ಬ್ರ್ಯಾಂಡ್ ಅನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಭಾರತೀಯ ಸವಾರರಿಗೆ ನೀಡಲಾಗಿದೆ.

ಪ್ರಸ್ತುತ ಕ್ಲಾಸಿಕ್, ರೋಡ್‌ಸ್ಟರ್, ಬಾಬ್ಬರ್‌, ಸ್ಕ್ರ್ಯಾಂಬ್ಲರ್ ಹಾಗೂ ಅಡ್ವೆಂಚರ್ ವಿಭಾಗಗಳಲ್ಲಿ ಅಸಲಿ ಬಿಡಿಭಾಗಗಳ ಲಭ್ಯತೆ ಮತ್ತು ಉತ್ತಮ ಸೇವೆಯೊಂದಿಗೆ ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುತ್ತಿದೆ ಎಂದು ಕ್ಲಾಸಿಕ್‌ ಲೆಜೆಂಡ್ಸ್‌ ಸಂಸ್ಥೆ ತಿಳಿಸಿದೆ.

PREV
Read more Articles on
click me!

Recommended Stories

ಹೆಲ್ಮೆಟ್‌ಗೂ ಇದೆ ಎಕ್ಸ್‌ಪೈರಿ ಡೇಟ್, ನೀವು ಒಂದನ್ನು ಎಷ್ಟು ವರ್ಷ ಬಳಸಬಹುದು?
ಓಲಾಗೆ ₹362 ಕೋಟಿ ನಷ್ಟ, ಕಂಪನಿ ಉಳಿಸಲು ಮಾಸ್ಟರ್ ಪ್ಲಾನ್ ಮುಂದಿಟ್ಟ ಬಾಸ್!