
ನವದೆಹಲಿ (ಜೂ.4): ಮಧ್ಯಪ್ರಾಚ್ಯ (Middle East) ರಾಷ್ಟ್ರಗಳಲ್ಲಿ ಯುದ್ಧದ ಕಿಡಿ ಹೊತ್ತಿಕೊಂಡಿರುವುದರಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತಷ್ಟು ಗಗನಕ್ಕೇರಲಿವೆ ಎಂಬ ಭೀತಿ ಸಾರ್ವಜನಿಕರಲ್ಲಿ ಮೂಡಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಇಂಧನ ಅವಲಂಬನೆಯನ್ನು ಬದಲಾಯಿಸಬಲ್ಲ ಮಹತ್ವದ ಪರ್ಯಾಯ ತಂತ್ರಜ್ಞಾನದತ್ತ ವಾಹನ ಸವಾರರು ಮುಖ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ 'ಹೀರೊ ಮೊಟೊಕಾರ್ಪ್' (Hero MotoCorp) ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಇಂಧನ ಕ್ರಾಂತಿಗೆ ಮುನ್ನುಡಿ ಬರೆದಿದೆ.
ಸಾರ್ವಜನಿಕರ ಅತ್ಯಂತ ನೆಚ್ಚಿನ ಬೈಕ್‌ಗಳಾದ 'ಸ್ಪ್ಲೆಂಡರ್ ಪ್ಲಸ್' (Splendor+) ಮತ್ತು 'ಹೆಚ್‌ಎಫ್ ಡೀಲಕ್ಸ್' (HF Deluxe) ಮಾದರಿಗಳನ್ನು ಈಗ 'ಫ್ಲೆಕ್ಸ್ ಫ್ಯುಯೆಲ್' (Flex Fuel - ಎಥೆನಾಲ್ ಮಿಶ್ರಿತ ಇಂಧನ) ತಂತ್ರಜ್ಞಾನದಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪೂರಿ ಜಂಟಿಯಾಗಿ ಈ ನೂತನ ಇಕೋ-ಫ್ರೆಂಡ್ಲಿ ಬೈಕ್‌ಗಳನ್ನು ದೇಶದ ಮಾರುಕಟ್ಟೆಗೆ ಲೋಕಾರ್ಪಣೆಗೊಳಿಸಿದರು.
ಸಾಮಾನ್ಯ ಗ್ರಾಹಕರ ಜೇಬಿಗೆ ಹೊರೆಯಾಗದಂತೆ ಹೀರೊ ಸಂಸ್ಥೆಯು ಅತ್ಯಂತ ಕೈಗೆಟುಕುವ ದರದಲ್ಲಿ ಈ ಬೈಕ್‌ಗಳ ಎಕ್ಸ್-ಶೋರೂಮ್ ಬೆಲೆಯನ್ನು ನಿಗದಿಪಡಿಸಿದೆ. Hero Splendor+ (Flex-Fuel) ದೆಹಲಿಯಲ್ಲಿ ಇದರ ಎಕ್ಸ್-ಶೋರೂಮ್ ಬೆಲೆ ₹82,710 ರೂಪಾಯಿಗಳಾಗಿದೆ. ಇನ್ನು Hero HF Deluxe (Flex-Fuel) ಇದರ ಎಕ್ಸ್-ಶೋರೂಮ್ ಬೆಲೆಯನ್ನು ₹72,792 ರೂಪಾಯಿಗಳಾಗಿ ಇರಿಸಲಾಗಿದೆ.
ತಾಂತ್ರಿಕವಾಗಿ ಈ ಬೈಕ್‌ಗಳನ್ನು ಅತ್ಯಂತ ಅತ್ಯಾಧುನಿಕ ಹಾಗೂ ವಿಶೇಷ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಫ್ಲೆಕ್ಸ್-ಫ್ಯುಯೆಲ್ ಬೈಕ್‌ಗಳು ಕೇವಲ ಸಾಮಾನ್ಯ ಪೆಟ್ರೋಲ್ ಮಾತ್ರವಲ್ಲದೆ, ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಲ್ಲೂ ಯಾವುದೇ ತೊಂದರೆಯಿಲ್ಲದೆ ಅತ್ಯಂತ ಸುಗಮವಾಗಿ ಚಲಿಸಬಲ್ಲವು. ಇವು E20 (ಶೇ. 20 ಎಥೆನಾಲ್) ಇಂಧನದಿಂದ ಹಿಡಿದು E85 (ಶೇ. 85 ರಷ್ಟು ಗರಿಷ್ಠ ಎಥೆನಾಲ್) ಮಿಶ್ರಣದ ಇಂಧನದಲ್ಲೂ ಸುಲಭವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಸದ್ಯಕ್ಕೆ ಭಾರತದಲ್ಲಿ ಶೇ. 20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿತರಿಸಲಾಗುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ದೇಶದಲ್ಲಿ ಎಥೆನಾಲ್ ಪ್ರಮಾಣ ಮತ್ತಷ್ಟು ಹೆಚ್ಚಾದಾಗಲೂ ಈ ಬೈಕ್‌ಗಳು ಯಾವುದೇ ಇಂಜಿನ್ ಸಮಸ್ಯೆ ಇಲ್ಲದೆ ಮೈಲೇಜ್ ನೀಡಲಿವೆ.
ಬೈಕ್ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, "ಭಾರತವು ಈಗ ಅತ್ಯಂತ ವೇಗವಾಗಿ ಸ್ವಚ್ಛ ಮತ್ತು ಪರ್ಯಾಯ ಇಂಧನ ವ್ಯವಸ್ಥೆಯತ್ತ ಹೆಜ್ಜೆ ಇಡುತ್ತಿದೆ. ಸಾಮಾನ್ಯ ನಾಗರಿಕರಿಗಾಗಿ ಫ್ಲೆಕ್ಸ್ ಫ್ಯುಯೆಲ್ ತಂತ್ರಜ್ಞಾನವನ್ನು ತಂದಿರುವುದು ದೇಶದ ಸಾರಿಗೆ ವಲಯದಲ್ಲಿ ಅತ್ಯಂತ ಕ್ರಾಂತಿಕಾರಕ ಬೆಳವಣಿಗೆಯಾಗಿದೆ" ಎಂದು ಶ್ಲಾಘಿಸಿದರು.
ಈ ತಂತ್ರಜ್ಞಾನದ ಬಳಕೆಯಿಂದ ದೇಶಕ್ಕೆ ಪ್ರಮುಖ ಲಾಭ ಕೂಡ ಆಗಲಿದೆ.ಭಾರತವು ವಿದೇಶಗಳಿಂದ ಆಮದು ಮಾಡಿಕೊಳ್ಳುವ ದುಬಾರಿ ಇಂಧನದ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ದೇಶದ ಕೋಟ್ಯಂತರ ರೂಪಾಯಿ ಹಣ ಉಳಿತಾಯವಾಗಲಿದೆ. ಎಥೆನಾಲ್ ಅನ್ನು ಪ್ರಮುಖವಾಗಿ ಕೃಷಿ ಆಧಾರಿತ ಉತ್ಪನ್ನಗಳಿಂದ (ಕಬ್ಬು, ಜೋಳ ಇತ್ಯಾದಿ) ಸಿದ್ಧಪಡಿಸಲಾಗುತ್ತದೆ. ಹೀಗಾಗಿ ಎಥೆನಾಲ್ ಬಳಕೆ ಹೆಚ್ಚಾದಷ್ಟೂ ದೇಶದ ಅನ್ನದಾತರ ಕೈಗೆ ನೇರವಾಗಿ ಹಣ ತಲುಪಲಿದ್ದು, ಗ್ರಾಮೀಣ ಆರ್ಥಿಕತೆ ಬಲಗೊಳ್ಳಲಿದೆ. ಪೆಟ್ರೋಲ್‌ಗೆ ಹೋಲಿಸಿದರೆ ಎಥೆನಾಲ್ ಪರಿಸರಸ್ನೇಹಿಯಾಗಿದ್ದು, ವಾಹನಗಳಿಂದ ಹೊರಸೂಸುವ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲಿದೆ.
ಒಟ್ಟಾರೆಯಾಗಿ, ಹೀರೊ ಸಂಸ್ಥೆಯ ಈ ಹೊಸ ಪ್ರಯೋಗವು ದೇಶದ ಸಾಮಾನ್ಯ ಜನರಿಗೆ ಅಗ್ಗದ ಇಂಧನದ ಆಯ್ಕೆಯನ್ನು ನೀಡುವುದರ ಜೊತೆಗೆ, ಭಾರತ ಸರ್ಕಾರದ 'ಆತ್ಮನಿರ್ಭರ ಭಾರತ' ಮತ್ತು 'ವಿಕಸಿತ ಭಾರತ' ಸಂಕಲ್ಪಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
भारत की बाइक,
भारत का ईंधन!
भारत के ऊर्जा क्षेत्र में हुई एक ऐतिहासिक अध्याय की शुरुआत!
E20 से E85 ईंधन पर चलने वाली बाइक्स का हुआ अनावरण! इस पहल से ना केवल भारत में हरित ऊर्जा के क्षेत्र में क्रांति आएगी बल्कि आत्मनिर्भरता को बल मिलेगा।
Delighted to launch a new chapter in… pic.twitter.com/Ek91wqkM92— Hardeep Singh Puri (@HardeepSPuri) June 3, 2026