ಬೆಂಗಳೂರನ್ನೇ ಬೇರೆಡೆ ಸ್ಥಳಾಂತರ ಮಾಡಬೇಕಾ..?

By Web DeskFirst Published Jan 10, 2019, 10:04 AM IST
Highlights

ರಸ್ತೆ ಗುಂಡಿ, ರಸ್ತೆ ಅಗಲೀಕರಣ, ತ್ಯಾಜ್ಯ ವಿಲೇವಾರಿ ಮತ್ತು ಟ್ರಾಫಿಕ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಹೆಚ್ಚಾಗುತ್ತಿರುವ ಬಗ್ಗೆ ಹೈ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಇದಕ್ಕೆ ಪರಿಹಾರವಾಗಿ ನಗರವನ್ನೇ ಸ್ಥಳಾಂತರ ಮಾಡಬೇಕೋ ಅಥವಾ ಹೊಸ ಬೆಂಗಳೂರು ನಿರ್ಮಾಣ ಮಾಡಬೇಕೋ ಎಂದಿದೆ.
 

ಬೆಂಗಳೂರು :  ದಿನದಿಂದ ದಿನಕ್ಕೆ ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ, ರಸ್ತೆ ಅಗಲೀಕರಣ, ತ್ಯಾಜ್ಯ ವಿಲೇವಾರಿ ಮತ್ತು ಟ್ರಾಫಿಕ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಇದಕ್ಕೆ ಪರಿಹಾರವಾಗಿ ನಗರವನ್ನೇ ಸ್ಥಳಾಂತರ ಮಾಡಬೇಕೋ ಅಥವಾ ಹೊಸ ಬೆಂಗಳೂರು ನಿರ್ಮಾಣ ಮಾಡಬೇಕೋ ಎಂದು ಅಭಿಪ್ರಾಯ ಪಟ್ಟಿದೆ.

ನಗರದಲ್ಲಿ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್ ಹಾವಳಿ ಸಲ್ಲಿಕೆಯಾಗಿದ್ದ ಪ್ರತ್ಯೇಕ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತಾ ಅವರಿದ್ದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ವಿಚಾರಣೆ ನಡೆಸಿದ ನ್ಯಾಯಪೀಠವು ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಸಮಸ್ಯೆಗಳಿಗೆ ಸಮಗ್ರ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.

ಮೇಖ್ರಿ ವೃತ್ತ, ಬಳ್ಳಾರಿ ರಸ್ತೆಯಲ್ಲಿ ವಾಹನ ದಟ್ಟಣೆ ಸಮಸ್ಯೆ ಹೆಚ್ಚಾಗಿರುತ್ತದೆ ಎಂದು ಅನೇಕ ವಕೀಲರು ಪದೇ ಪದೇ ಹೇಳುತ್ತಿರುತ್ತಾರೆ. ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಿ ಎಂದು ಅಡ್ವೋಕೇಟ್ ಜನರಲ್ ಉದಯ ಹೊಳ್ಳಗೆ ಸಲಹೆ ನೀಡಿತು. ಈ ವೇಳೆ ಉತ್ತರಿಸಿದ ಅಡ್ವೋಕೇಟ್ ಜನರಲ್, ಹಿಂದೆ ಉಪನಗರಗಳ ನಿರ್ಮಾ ಣದ ಪ್ರಸ್ತಾವವಿತ್ತು. ಎಲ್ಲದಕ್ಕೂ ಒಂದೊಂದು ಸಮಸ್ಯೆಗಳಿರುತ್ತವೆ. ಯಾವುದೇ ಅಭಿವೃದ್ಧಿ ಯೋಜನೆ ಕೈಗೊಂಡರೂ ಆ ಕುರಿತು ಅರ್ಜಿಗಳ ಮೇಲೆ ಅರ್ಜಿಗಳು ಕೋರ್ಟ್‌ಗೆ ಬರುತ್ತವೆ ಎಂದರು. ಮಾಲಿನ್ಯ ನಿಯಂತ್ರಣ ಮಂಡಳಿ ಪರ ಉತ್ತರಿಸಿದ ವಕೀಲರು, ಹೊಸ ವಾಹನಗಳ ನೋಂದಣಿ ನಿರ್ಬಂಧ, ಸಿಬಿಡಿಯಲ್ಲಿ ಆಟೋ ನಿಷೇಧ ಸೇರಿ ಅನೇಕ ಶಿಫಾರಸುಗಳನ್ನು ಮಾಡಲಾಗಿತ್ತು ಎಂದು ವಿವರಿಸಿದರು. 

ಮುಖ್ಯ ನ್ಯಾಯಮೂರ್ತಿ ಪ್ರತಿಕ್ರಿಯಿಸಿ, ದೆಹಲಿ ಹಾಗೂ ಇತರೆ ನಗರಗಳ ಮಾದರಿಯಂತೆಯೇ 15 ವರ್ಷಗಳಷ್ಟು ಹಳೆಯದಾದ ವಾಹನಗಳ ಸಂಚಾರ ನಿಷೇಧಿಸಬಹುದಷ್ಟೆ. ವಾಹನಗಳ ನೋಂದಣಿ ನಿರ್ಬಂಧಿಸಲು ಕಷ್ಟ ಸಾಧ್ಯ ಎಂದರು. ನ್ಯಾಯಪೀಠ, 10 ದಿನಗಳಲ್ಲಿ ಹೊಸ ನೀತಿ, ಬೈಲಾ ಅನುಮೋದಿಸಿ ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಜ.22ಕ್ಕೆ ಮುಂದೂಡಿತು.

click me!