ಹಿಂದಿ ಚಿತ್ರ ನೋಡಿ ಸನ್ಯಾಸತ್ವ ಸ್ವೀಕರಿಸಲು ಹೋದ : ಮುಂದೇನಾಯ್ತು..?

By Web DeskFirst Published Jan 28, 2019, 8:10 AM IST
Highlights

ಹಿಂದಿ ಚಿತ್ರ ನೋಡಿ ಸನ್ಯಾಸತ್ವ ಸ್ವೀಕರಿಸಲು ತೆರಳಿದವನ ಕತೆಯಿದು. ಆಧ್ಯಾತ್ಮಿಕ ಸಿನಿಮಾದಿಂದ ಪ್ರಭಾವಿತನಾಗಿ ಮನೆ ಬಿಟ್ಟು ಸನ್ಯಾಸಿಯಾಗಲು ಹೋಗಿದ್ದ ರಾಜಸ್ಥಾನ ಮೂಲದ ವಿದ್ಯಾರ್ಥಿಯನ್ನು ಪೊಲೀಸರು ವಾಪಸ್ ಕರೆತಂದಿದ್ದಾರೆ. 

ಬೆಂಗಳೂರು :  ಆಧ್ಯಾತ್ಮಿಕ ಸಿನಿಮಾದಿಂದ ಪ್ರಭಾವಿತನಾಗಿ ಮನೆ ಬಿಟ್ಟು ಸನ್ಯಾಸಿಯಾಗಲು ಹೋಗಿದ್ದ ರಾಜಸ್ಥಾನ ಮೂಲದ ಎಂಜಿನಿಯರಿಂಗ್‌ ವಿದ್ಯಾರ್ಥಿಯನ್ನು ಬಂಡೆಪಾಳ್ಯ ಪೊಲೀಸರು ಪತ್ತೆ ಹಚ್ಚಿ ವಾಪಸು ಕರೆದುಕೊಂಡು ಬಂದಿದ್ದಾರೆ.

ಸೋಮಸಂದ್ರಪಾಳ್ಯದ ನಿವಾಸಿ ದೇವಾಂಶ ಮರು (24) ಪತ್ತೆಯಾದ ಯುವಕ. ದೇವಾಂಶ ಮೂಲತಃ ರಾಜಸ್ಥಾನದವಾಗಿದ್ದು, ಎಂಟು ತಿಂಗಳ ಹಿಂದೆ ನಗರಕ್ಕೆ ಬಂದು ಬಂಡೇಪಾಳ್ಯದ ಸಹೋದರಿ ಮನೆಯಲ್ಲಿ ನೆಲೆಸಿದ್ದ. ನಗರದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದ. ಮೊದಲಿನಿಂದಲೂ ಆಧ್ಯಾತ್ಮದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ. ಆಧ್ಯಾತ್ಮಕ್ಕೆ ಸಂಬಂಧಿಸಿದ ಚಿತ್ರಗಳನ್ನೇ ಹೆಚ್ಚಾಗಿ ಈತ ವೀಕ್ಷಿಸುತ್ತಿದ್ದ. ಹಿಂದಿ ಭಾಷೆಯ ‘ಮಸಾಸ್‌’ ಚಿತ್ರದಿಂದ ದೇವಾಂಶ ಹೆಚ್ಚು ಪ್ರಭಾವಕ್ಕೊಳಗಾಗಿದ್ದ. ಸಿನಿಮಾ ನೋಡಿದ ಬಳಿಕ ಸನ್ಯಾಸಿಯಾಗಬೇಕು ಎಂದು ನಿರ್ಧರಿಸಿದ್ದ.

ಜ.18ರಂದು ಬೆಳಗ್ಗೆ 10ಕ್ಕೆ ಎಂದಿನಂತೆ ಕಾಲೇಜಿಗೆ ಹೋದ ದೇವಾಂಶ ರಾತ್ರಿಯಾದರೂ ಮನೆಗೆ ವಾಪಸ್‌ ಆಗಿರಲಿಲ್ಲ. ಅಲ್ಲದೆ, ಮನೆಯಲ್ಲೇ ಮೊಬೈಲ್‌ ಇಟ್ಟು ಹೋಗಿರುವುದು ಕಂಡು ಬಂದಿತ್ತು. ನಂತರ ಆತನ ಕೊಠಡಿ ಪರಿಶೀಲಿಸಿದಾಗ ಪತ್ರವೊಂದು ಪತ್ತೆಯಾಗಿತ್ತು. ಪತ್ರದಲ್ಲಿ ‘ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು. ಮನೆ ಬಿಟ್ಟು ಹೋಗುತ್ತಿದ್ದೇನೆ. ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದು ತಿಳಿದಿಲ್ಲ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ’ ಎಂದು ಬರೆದಿದ್ದ.

ಕುಟುಂಬಸ್ಥರು ಜ.19ರಂದು ಬಂಡೆಪಾಳ್ಯ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಯುವಕ ಉಪಯೋಗಿಸುತ್ತಿದ್ದ ಲ್ಯಾಪ್‌ಟಾಪ್‌ ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಲ್ಯಾಪ್‌ಟಾಪ್‌ನಲ್ಲಿ ದೇವಾಂಶ ಹೆಚ್ಚು ಬಾರಿ ‘ಮಸಾಸ್‌’ ಚಿತ್ರ ವೀಕ್ಷಿಸಿರುವ ವಿಚಾರ ಬೆಳಕಿಗೆ ಬಂದಿತ್ತು. ಅಲ್ಲದೆ, ಹೇಗೆ ಸನ್ಯಾಸತ್ವ ಸ್ವೀಕರಿಸಬೇಕು. ವಾರಣಾಸಿಯಲ್ಲಿ ಯಾವ ರೀತಿ ಸನ್ಯಾಸಿಗಳಿರುತ್ತಾರೆ ಎಂಬಿತ್ಯಾದಿ ಬಗ್ಗೆ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ್ದ.

ಪೊಲೀಸರು ಯುವಕ ನಾಪತ್ತೆಯಾಗಿದ್ದ ದಿನ ಸಿಟಿ ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದರು. ಕ್ಯಾಮೆರಾದಲ್ಲಿ ದೇವಾಂಶ ದೆಹಲಿ ಮಾರ್ಗವಾಗಿ ವಾರಣಾಸಿಗೆ ತೆರಳುವ ರೈಲಿನಲ್ಲಿ ಹತ್ತಿರುವುದು ತಿಳಿದಿತ್ತು. ಕೂಡಲೇ ನಗರ ಪೊಲೀಸರು ಗೋವಾ, ದೆಹಲಿ ಮತ್ತು ವಾರಣಾಸಿ ರೈಲ್ವೆ ಪೊಲೀಸರಿಗೆ ದೇವಾಂಶನ ಬಗ್ಗೆ ಮಾಹಿತಿ ನೀಡಿದ್ದರು. ದೆಹಲಿಯಲ್ಲಿದ್ದ ಆತನ ಸಂಬಂಧಿಕರನ್ನೂ ಸಂಪರ್ಕಿಸಿ ವಿಷಯ ತಿಳಿಸಿದ್ದರು. ಜ.21ರಂದು ಬೆಂಗಳೂರಿನಿಂದ ದೆಹಲಿಗೆ ಬಂದಿದ್ದ ರೈಲಿನಲ್ಲಿ ದೇವಾಂಶ್‌ನನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿ, ನಗರ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ.

ತಾನು ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು ಹೊಂದಿದ್ದೇನೆ. ಹೀಗಾಗಿ ಸನ್ಯಾಸತ್ವ ಸ್ವೀಕರಿಸಲು ವಾರಣಾಸಿಗೆ ಹೊರಟ್ಟಿದ್ದೆ ಎಂದು ಯುವಕ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

click me!