ಈ ಸಲ ಏರ್ ಶೋ ದಲ್ಲಿ ಡ್ರೋನ್ ಒಲಂಪಿಕ್ಸ್

By Web DeskFirst Published Feb 16, 2019, 8:50 AM IST
Highlights

ಯಲಹಂಕದಲ್ಲಿ ಫೆ.20ರಿಂದ 24ರವರೆಗೆ ನಡೆಯಲಿರುವ ಏರೋ ಇಂಡಿಯಾ-2019ದಲ್ಲಿ ಈ ಬಾರಿ ಶಕ್ತಿಶಾಲಿ ಲೋಹದ ಹಕ್ಕಿಗಳ ಆರ್ಭಟದ ನಡುವೆಯೇ ಡ್ರೋನ್ ಒಲಿಂಪಿಯಾಡ್ ಕೂಡ ನೋಡುಗರ ಮನ ಗೆಲ್ಲಲಿದೆ.

ಬೆಂಗಳೂರು : ನಗರದ ಯಲಹಂಕದಲ್ಲಿ ಫೆ.20ರಿಂದ 24ರವರೆಗೆ ನಡೆಯಲಿರುವ ಏರೋ ಇಂಡಿಯಾ-2019ದಲ್ಲಿ ಈ ಬಾರಿ ಶಕ್ತಿಶಾಲಿ ಲೋಹದ ಹಕ್ಕಿಗಳ ಆರ್ಭಟದ ನಡುವೆಯೇ ಡ್ರೋನ್ ಒಲಿಂಪಿಯಾಡ್ ಕೂಡ ನೋಡುಗರ ಮನ ಗೆಲ್ಲಲಿದೆ.

ಭಾರಿ ಗಾತ್ರದ ಲೋಹದ ಹಕ್ಕಿಗಳ ಮಿಂಚಿನ ಸಂಚಾರದ ನಡುವೆಯೇ 12 ನೇ ಆವೃತ್ತಿಯ ಏರೋಇಂಡಿಯಾ ಪ್ರದರ್ಶನದಲ್ಲಿ ಈ ಬಾರಿ ಡ್ರೋನ್ ಒಲಿಂಪಿಯಾಡ್ ಆಯೋಜಿಸಲಾಗಿದೆ. ಡ್ರೋನ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗುವವರಿಗೆ ನಗದು ಬಹುಮಾನವನ್ನು ನೀಡಲು ಏರೋ ಇಂಡಿಯಾ ಶೋ ಆಯೋಜಕರು ನಿರ್ಧರಿಸಿದ್ದಾರೆ. ಕ್ಸೆಡ್ ವಿಟಿಒಎಲ್ ಮತ್ತು ಎಲೆಕ್ಟ್ರಿಕ್ ಹೈಬ್ರಿಡ್ ಡಿಸೈನ್ ಡ್ರೋಣ್‌ಗಳ ನಡುವೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ. 

ಎರಡು ವಿಭಾಗದ ಡ್ರೋಣ್‌ಗಳ ನಡುವೆ ಹಾರಾಟದ ಸಮಯ, ಡ್ರೋನ್ ಮೂಲಕ ವಿಡಿಯೋ ಚಿತ್ರೀಕರಣದ ಗುಣಮಟ್ಟ ಹಾಗೂ ಮನುಷ್ಯರನ್ನು ಗುರುತಿಸುವ ವಿಷಯದಲ್ಲಿ ಸ್ಪರ್ಧೆ ನಡೆಯಲಿದೆ. ಅಲ್ಲದೆ, 4 ಕೆ.ಜಿ. ಮತ್ತು 4 ರಿಂದ 7 ಕೆ.ಜಿ. ತೂಕದ ಡ್ರೋನ್‌ಗಳ ನಡುವೆ ಸ್ಪರ್ಧೆ ಆಯೋಜಿಸಲಾಗಿದೆ.

61 ವಿಮಾನಗಳು ಪ್ರದರ್ಶನ: ಈ ವೈಮಾನಿಕ ಪ್ರದರ್ಶನದಲ್ಲಿ ದೇಶ ವಿದೇಶಗಳ ಒಟ್ಟು ೬೧ ಯುದ್ಧ ಹಾಗೂ ನಾಗರಿಕ ಸೇವಾ ವಿಮಾನಗಳು ಭಾಗವಹಿಸಲಿವೆ. ಈ ಪೈಕಿ 40 ಯುದ್ಧ ವಿಮಾನ, ಹೆಲಿಕಾಪ್ಟರ್, ನಾಗರಿಕ ಸೇವಾ ವಿಮಾನಗಳು ಹಾಗೂ ಉಳಿದ ೨೧ ವಿಮಾನ, ಹೆಲಿಕಾಪ್ಟರ್ ಹಾಗೂ ನಾಗರಿಕ ಸೇವಾ ವಿಮಾನಗಳು ಪಾಲ್ಗೊಳ್ಳಲಿವೆ. ಇದರಲ್ಲಿ ಭಾರತೀಯ ಸೇನೆ, ಎಚ್‌ಎಎಲ್ ಸೇರಿದಂತೆ ದೇಶಿಯ ನಿರ್ಮಿತ 45 ವಿಮಾನ, 16 ವಿದೇಶಿ ವಿಮಾನಗಳಿರಲಿವೆ. 370 ದೇಶ-ವಿದೇಶಿ ಸಂಸ್ಥೆಯ ಯುದ್ಧ ಸಾಮಗ್ರಿಗಳು ಪ್ರದರ್ಶನದಲ್ಲಿ ಭಾಗವಹಿಸುತ್ತಿರುವುದು ಈ
ಬಾರಿಯ ವಿಶೇಷವಾಗಿದೆ.

ಎಚ್‌ಎಎಲ್ ನಿರ್ಮಿಸಿದ ಯುದ್ಧ ವಿಮಾನಗಳಾದ ಎಲ್‌ಸಿಎ ತೇಜಸ್, ಸುಖೋಯ್, ಎಚ್‌ಟಿಟಿ ೪೦, ಮೊದಲ ದೇಶಿ ನಿರ್ಮಿತ ಹಾಕ್ ಎಂಕೆ ೧೩೨, ಎಎಲ್ ಹೆಲಿಕಾಪ್ಟರ್ ರುದ್ರಾ, ನಾಗರಿಕ ವಿಮಾನ ಸರಣಿಯ ಡಾರ್ನಿಯರ್ 228, ಸುಧಾರಿತ ಲಘು ಹೆಲಿಕಾಪ್ಟರ್ ರುದ್ರ, ಲಘು ಬಳಕೆ ಹೆಲಿಕಾಪ್ಟರ್ (ಎಲ್‌ಯುಎಚ್), ಲಘು ಯುದ್ಧ ಹೆಲಿಕಾಪ್ಟರ್ (ಎಲ್‌ಸಿಎಚ್) ಸ್ವದೇಶಿ ವಿಮಾನಗಳಾದರೆ, ರಫೇಲ್, ಎಫ್‌ಎ ೧೮, ಏರ್‌ಬಸ್, ಬೋಯಿಂಗ್ ವಿದೇಶಿ ಯುದ್ಧ ವಿಮಾನ ಮತ್ತು ನಾಗರಿಕ ಯುದ್ಧ ವಿಮಾನಗಳು ಭಾಗವಹಿಸಲಿವೆ.

ಕ್ರೀಡಾ ವಿಮಾನಗಳ ಮೆರಗು: ವೈಮಾನಿಕ ಪ್ರದರ್ಶನದ ಜತೆಗೆ ಏರೋ ಶೋನಲ್ಲಿ ಹೊಸ ತಂತ್ರಜ್ಞಾನದ ವಿಮಾನ, ಹೆಲಿಕಾಪ್ಟರ್‌ಗಳನ್ನು ಪ್ರದರ್ಶಿಸಲಾಗುತ್ತಿದೆ. ಪ್ರಮುಖವಾಗಿ ನಾವಲ್ ಯುಟಿಲಿಟಿ ಹೆಲಿಕಾಪ್ಟರ್‌ನ ತಂತ್ರಜ್ಞಾನ, ಎಎಲ್‌ಎಚ್ ಧೃವ ಮಾದರಿ ಪಾಲ್ಗೊಳ್ಳಲಿವೆ. ಜತೆಗೆ ಎಚ್‌ಎಎಲ್‌ನ ಹೊಸ ಸೂಪರ್‌ಸಾನಿಕ್ಓಮ್ನಿ ರೋಲ್ ಟ್ರೈನರ್ (ಸ್ಪೋರ್ಟ್) ವಿಮಾನ ಪ್ರದರ್ಶನಕ್ಕಿಡಲಾಗುತ್ತಿದ್ದು, ಈ ವಿಮಾನ ಮುಂದಿನ ಪೀಳಿಗೆಯ ಯುದ್ಧ ವಿಮಾನ ಪೈಲಟ್ ತರಬೇತಿ ವಿಮಾನವಾಗಿದೆ.

click me!