ಬೆಂಗಳೂರಿನಲ್ಲಿ ಕಂಬಳ ಕ್ರೀಡೆ ಆಯೋಜಿಸುವ ಕುರಿತು ಕಂಬಳ ಅಕಾಡೆಮಿ ಮತ್ತು ಸಂಘಟಕರು ಗಂಭೀರ ಚಿಂತನೆ ನಡೆಸುತ್ತಿದ್ದು, ಈಗಾಗಲೇ ಅಗತ್ಯ ಖಾಸಗಿ ಭೂಮಿಯನ್ನೂ ಗುರುತಿಸಲಾಗಿದೆ.
ಮಂಗಳೂರು : ಕರಾವಳಿಯ ಕೃಷಿ ಸಂಸ್ಕೃತಿಯೊಂದಿಗೆ ಮಿಳಿತವಾಗಿರುವ ಕಂಬಳ ಕ್ರೀಡೆ ಇದೇ ಮೊದಲ ಬಾರಿಗೆ ಕರಾವಳಿ ಸೀಮೆಯನ್ನು ದಾಟಿ ಬೆಂಗಳೂರಿನಲ್ಲೂ ತನ್ನ ಛಾಪು ಮೂಡಿಸುವ ಎಲ್ಲ ಲಕ್ಷಣ ಗೋಚರಿಸುತ್ತಿದೆ.
ಬೆಂಗಳೂರಿನಲ್ಲಿ ಕಂಬಳ ಕ್ರೀಡೆ ಆಯೋಜಿಸುವ ಕುರಿತು ಕಂಬಳ ಅಕಾಡೆಮಿ ಮತ್ತು ಸಂಘಟಕರು ಗಂಭೀರ ಚಿಂತನೆ ನಡೆಸುತ್ತಿದ್ದು, ಈಗಾಗಲೇ ಅಗತ್ಯ ಖಾಸಗಿ ಭೂಮಿಯನ್ನೂ ಗುರುತಿಸಿದ್ದಾರೆ. ಇವರ ಪ್ರಯತ್ನ ಸಾಕಾರವಾದರೆ ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆ ಕಂಬಳವನ್ನು ಮುಂದಿನ ಋುತುವಿನಲ್ಲಿ ಬೆಂಗಳೂರಿನ ಜನರೂ ಕಣ್ತುಂಬಿಕೊಳ್ಳುವ ಅವಕಾಶ ಪಡೆಯಲಿದ್ದಾರೆ.
ಬೆಂಗಳೂರಿನ ಹೊರವಲಯದ ಪ್ರವಾಸಿ ತಾಣ ದೊಡ್ಡಾಲದ ಮರ ಸಮೀಪದ ಕೇತೋಹಳ್ಳಿಯಲ್ಲಿ ಉಪೇಂದ್ರ ಶೆಟ್ಟಿಅವರಿಗೆ ಸೇರಿದ 10 ಎಕರೆ ವಿಶಾಲ ಜಾಗದಲ್ಲಿ ಕಂಬಳ ನಡೆಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಕಂಬಳದ ಪ್ರಕರಣ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠಕ್ಕೆ ವರ್ಗಾವಣೆಯಾಗಿದ್ದು, ಕಾನೂನು ತೊಡಕುಗಳೆಲ್ಲ ನಿವಾರಣೆಯಾದರೆ ರಾಜಧಾನಿಯ ಕಂಬಳ ಸಾಕಾರರೂಪ ತಾಳಲಿದೆ.
‘ಕರಾವಳಿಯಲ್ಲಿ ನಡೆಸುವಂತೆ ನೂರಾರು ಜೋಡಿ ಕೋಣಗಳನ್ನಿಟ್ಟು ರಾಜಧಾನಿಯಲ್ಲಿ ಕಂಬಳ ನಡೆಸುವುದು ತ್ರಾಸದಾಯಕ, ಖರ್ಚೂ ಜಾಸ್ತಿ. ಆದ್ದರಿಂದ ಕಂಬಳದ ವಿಭಾಗಗಳನ್ನು ಪ್ರದರ್ಶನ ಮಾಡಲು ಅನುಕೂಲವಾಗುವಂತೆ ಆಯೋಜಿಸಲಾಗುವುದು. ಕಂಬಳ ಕೋಣಗಳ ಸಾಗಣೆ ವೆಚ್ಚ ಸೇರಿ ಪ್ರತಿಯೊಂದು ವಿಚಾರಗಳ ಕುರಿತು ಚರ್ಚೆ ನಡೆಸಿದ್ದೇವೆ. ಪ್ರಾಯೋಜಕತ್ವವನ್ನೂ ಪಡೆಯುವ ಕುರಿತು ಯೋಜಿಸಿದ್ದೇವೆ’ ಎಂದು ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ತಿಳಿಸಿದ್ದಾರೆ.
ಕಂಬಳ ಉಳಿಸುವುದಕ್ಕಾಗಿ 2017ರಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭ ರಾಜಧಾನಿ ಕಂಬಳದ ಚಿಂತನೆ ರೂಪುಗೊಂಡಿತ್ತು ಎಂದು ಹೇಳಿದ ಅವರು, ಬೆಂಗಳೂರಿನಲ್ಲಿ ಕಂಬಳ ನಡೆಸುವುದು ಪ್ರವಾಸೋದ್ಯಮಕ್ಕೂ ಪೂರಕವಾಗಲಿದೆ ಎಂದಿದ್ದಾರೆ.