ಅಗ್ನಿ ಎದುರಿಸಲು ಸನ್ನದ್ಧವಾಗಿದೆಯಾ ಬೆಂಗಳೂರು ಏರ್ಪೋರ್ಟ್

By Web DeskFirst Published Feb 25, 2019, 7:57 AM IST
Highlights

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಾಹನಗಳ ನಿಲುಗಡೆ ಸ್ಥಳದಲ್ಲಿ ಯಾವುದೇ ಅಗ್ನಿ ಅನಾಹುತ ಸಂಭವಿಸಿದರೆ ತಕ್ಷಣ ಸುರಕ್ಷತಾ ಕ್ರಮ ಕೈಗೊಳ್ಳುವ ಎಲ್ಲ ವ್ಯವಸ್ಥೆ ಮಾಡಲಾಗಿದೆ. 

ಬೆಂಗಳೂರು :  ದಿನಕ್ಕೆ ಸಾವಿರಾರು ವಾಹನಗಳು ಬಂದು ಹೋಗುವ, ಲಕ್ಷಾಂತರ ಜನರು ಪ್ರಯಾಣಿಸುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಾಹನಗಳ ನಿಲುಗಡೆ ಸ್ಥಳದ ಕೆಲವೊಂದು ಕಡೆ ಸಣ್ಣಪುಟ್ಟ ದೋಷಗಳನ್ನು ಹೊರತು ಪಡಿಸಿದರೆ ಯಾವುದೇ ಅಗ್ನಿ ಅನಾಹುತ ಸಂಭವಿಸಿದರೆ ತಕ್ಷಣ ಸುರಕ್ಷತಾ ಕ್ರಮ ಕೈಗೊಳ್ಳುವ ಎಲ್ಲ ವ್ಯವಸ್ಥೆ ಮಾಡಲಾಗಿದೆ. 

ಬೆಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್‌ನ ರಿಯಾಲಿಟಿ ತಿಳಿಯುವುದಕ್ಕಾಗಿ  ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಪಾರ್ಕಿಂಗ್ ಸ್ಥಳಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದು ಕಂಡುಬಂದಿತು. 

ಮೆಗಾ, ಮೆರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ), ವಿಮಾನ ನಿಲ್ದಾಣ ಟ್ಯಾಕ್ಸಿ, ಓಲಾ, ಉಬರ್ ಟ್ಯಾಕ್ಸಿಗಳು ಮಾತ್ರ ವಲ್ಲದೆ, ಪ್ರಯಾಣಿಕರ ಸ್ವಂತ ಕಾರುಗಳು, ವಿಮಾನ ನಿಲ್ದಾಣ ಸಿಬ್ಬಂದಿ ಕಾರುಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ಸಂಚ ರಿಸುವುದರಿಂದ ಇವುಗಳ ನಿರ್ವಹಣೆಗಾಗಿ ಮೇಲ್ವಿಚಾ ರಕರನ್ನು ನಿಯೋಜಿಸಿದೆ. ವ್ಯವಸ್ಥೆಗಳು: ಅಂದಾಜು ನಾಲ್ಕು ಸಾವಿರಕ್ಕಿಂತ ಹೆಚ್ಚಿನ ಕಾರುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. 

ಈ ಪೈಕಿ ಬಹುತೇಕ ಕಾರುಗಳ ನಿಲುಗಡೆ ಸ್ಥಳಗಳಲ್ಲಿ ತುರ್ತು ಸೇವೆಗಳಿಗಾಗಿ ಸಿಬ್ಬಂದಿ ನಿಯೋಜಿಸಿದೆ. ಸಾಕ ಷ್ಟು ಪ್ರಮಾಣದಲ್ಲಿ ಬೆಂಕಿ ನಂದಿಸುವ ಉಪಕರಣ ಅಳ ವಡಿಸಿದೆ. ಬೃಹತ್ ನೀರಿನ ಸಂಗ್ರಹಾಲಯವಿದೆ. ಜೊತೆಗೆ ಪ್ರಾಧಿಕಾರವೇ ಪ್ರತ್ಯೇಕವಾದ ಅಗ್ನಿ ಶಾಮಕ ಪಡೆಯನ್ನು ಹೊಂದಿದೆ. ಕೆಎಸ್‌ಟಿಡಿಸಿ, ಓಲಾ, ಉಬರ್  ಸೇರಿದಂತೆ ಎಲ್ಲ ಬಗೆಯ ವಾಹನಗಳಿಗೆ ಪ್ರತ್ಯೇಕ ವಿಭಾಗಗಳನ್ನು ರಚಿಸಿ ನಿರ್ವಹಣೆಗಾಗಿ ಸಿಬ್ಬಂದಿ ನಿಯೋಜಿಸಲಾಗಿದೆ. 

ಎಲ್ಲ ಕಡೆಯೂ ಕಾಂಕ್ರೀಟ್ ನೆಲ ಇರುವುದರಿಂದ ಒಂದು ಕಾರಿನಿಂದ ಮತ್ತೊಂದು ಕಾರಿಗೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಕಡಿಮೆ. ಈ ಪ್ರದೇಶದಲ್ಲಿ ಹುಲ್ಲಿನಿಂದ ಕೂಡಿದ ಪ್ರದೇಶಗಳಿಲ್ಲ. 

ದುಬಾರಿ ಪಾರ್ಕಿಂಗ್: ದೂರದ ಊರುಗಳಿಗೆ ವಿಮಾನ ಪ್ರಮಾಣ ಮಾಡುವವರು ಪಾರ್ಕಿಂಗ್ ಮಾಡಿದರೆ, ದಿನಕ್ಕೆ 500 ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತದೆ. ಮೊದಲ ದಿನ 500, ನಂತರದ ದಿನಗಳಿಗೆ ದಿನಕ್ಕೆ 300 ಶುಲ್ಕ ವಿಧಿಸಲಾಗುತ್ತದೆ. ಹೀಗಿದ್ದರೂ ಕೆಲವರು ವಾರಗಟ್ಟಲೆ ಕಾರುಗಳನ್ನು ಪಾರ್ಕ್ ಮಾಡುವ ಉದಾಹರಣೆಗಳಿವೆ. ಎಲೆಕ್ಟ್ರಿಕಲ್ ಕಾರುಗಳ ಚಾರ್ಚಿಂಗ್ ವ್ಯವಸ್ಥೆ ಮಾಡಲಾಗಿದೆ. ಕಾರಿನ ಬಗ್ಗೆ ಆತಂಕ ಅಗತ್ಯವಿ ಲ್ಲ ಎಂದು ಪ್ರಯಾಣಿಕ ರಘುನಂದನ್ ತಿಳಿಸಿದರು.

ವರದಿ :  ಎನ್.ಎಲ್.ಶಿವಮಾದು

click me!