ಮೃತದೇಹದ ಬಟ್ಟೆ ಮೇಲಿದ್ದ ಟ್ಯಾಗ್ ನೀಡಿತು ರೋಚಕ ಸುಳಿವು, ಒಂದೇ ವಾರಕ್ಕೆ ಕೊಲೆಯ ರಹಸ್ಯ ಬೇಧಿಸಿದ ಪೊಲೀಸರು

Published : Sep 25, 2026, 10:43 PM IST
wife murder in bengaluru

ಸಾರಾಂಶ

ಬೆಂಗಳೂರಿನ ಅಗ್ರಹಾರ ಲೇಔಟ್‌ನಲ್ಲಿ ಪತ್ತೆಯಾದ ಮಹಿಳೆಯ ಕೊಳೆತ ಶವದ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಮೃತದೇಹದ ಮೇಲಿದ್ದ ಬಟ್ಟೆಯ ಟ್ಯಾಗ್ ಆಧಾರದ ಮೇಲೆ ತನಿಖೆ ನಡೆಸಿದಾಗ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅಷ್ಟಕ್ಕೂ ಆಗಿದ್ದೇನು? ಸ್ಟೋರಿ ಓದಿ..

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದ ಭೀಕರ ಕೊಲೆಯ ರಹಸ್ಯ ಒಂದನ್ನ ಪೊಲೀಸರು ಬೇಧಿಸಿದ್ದಾರೆ. ಸಾಗರ್ ಚಂದ್ರ ರಾವತ್ ಬಂಧಿತ ಆರೋಪಿ.

ಪ್ರಕರಣದ ಹಿನ್ನೆಲೆ ಏನು?

ಸೆಪ್ಟೆಂಬರ್ 2 ರಂದು ಬೆಂಗಳೂರಿನ ಅಗ್ರಹಾರ ಲೇಔಟ್‌ನ ಪಾಳುಬಿದ್ದ ಸೈಟ್‌ನಲ್ಲಿ ಪೌರ ಕಾರ್ಮಿಕರು ಕ್ಲೀನಿಂಗ್ ಮಾಡ್ತಿದ್ದರು. ಈ ವೇಳೆ ಹಾಸಿಗೆ ಒಂದರಲ್ಲಿ ಏನೋ ಕಟ್ಟಿರುವಂತೆ ಕಂಡುಬಂದಿದೆ. ಹತ್ತಿರ ಹೋಗಿ ನೋಡಿದಾಗ ತೀವ್ರ ಕೆಟ್ಟ ವಾಸನೆ ಬರುತ್ತಿತ್ತು.

ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಪರಿಶೀಲಿಸಿದಾಗ ಮಹಿಳೆಯ ಶವ ಪತ್ತೆ ಆಗಿದೆ. ಆದರೆ ಅದು ಸಂಪೂರ್ಣವಾಗಿ ಕೊಳೆತು ಹೋಗಿತ್ತು. ಗುರುತು ಸಿಕ್ಕಿರಲಿಲ್ಲ. ಪೊಲೀಸರಿಗೆ ಪತ್ತೆ ಹಚ್ಚೋದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಈಗ ಆಕೆಯ ಮೃತದೇಹದ ಮೇಲಿದ್ದ ಬಟ್ಟೆಯ ಟ್ಯಾಗ್ ಮೇಲೆ ಪೊಲೀಸರು ತನಿಖೆ ಆರಂಭಿಸಿ, ಪ್ರಕರಣಕ್ಕೆ ರೋಚಕ ಟ್ವಿಸ್ಟ್ ನೀಡಿದ್ದಾರೆ.

ಬಟ್ಟೆಯ ಟ್ಯಾಗ್ ಹೇಗೆ ಸಹಾಯ ಮಾಡಿತು?

ಪೊಲೀಸರ ವಿಶೇಷ ತನಿಖಾ ತಂಡವು ಆ ಬಟ್ಟೆಯ ಟ್ಯಾಗ್ ಆಧಾರದ ಮೇಲೆ.. ಆ ಬಟ್ಟೆ ಖರೀದಿಸಲಾಗಿದ್ದ ಪ್ರಮುಖ ಮಾಲ್‌ನ ಮಳಿಗೆಯನ್ನು ಸಂಪರ್ಕಿಸಿದರು. ಅಲ್ಲಿನ ಬಿಲ್ಲಿಂಗ್ ವಿವರಗಳನ್ನು ಪರಿಶೀಲಿಸಿದರು. ಬಟ್ಟೆ ಖರೀದಿಸಿದವರ ಸಂಪರ್ಕ ಸಂಖ್ಯೆ ಸಿಕ್ಕಿತು. ಆ ಫೋನ್ ನಂಬರ್ ಬೆನ್ನತ್ತಿದಾಗ ಅದು ಮೃತ ಅನುಸೂಯ ಬೆಹ್ರಾ ಎಂದು ಖಚಿತವಾಯಿತು. ತಕ್ಷಣವೇ ಆಕೆಯ ಪತಿ ಸಾಗರ್ ಚಂದ್ರ ರಾವತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.

ಈ ದಂಪತಿ ಬೆಂಗಳೂರಿನ ಎಂ.ಎಸ್. ನಗರದ ಬಾಡಿಗೆ ಮನೆಯಲ್ಲಿ ವಾಸವಿತ್ತು. ಇಬ್ಬರೂ ಬೇರೆ ಬೇರೆ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಸಾಗರ್ ಕಿಚನ್ ಸೂಪರ್‌ವೈಸರ್ ಆಗಿದ್ದ. ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಆಗಸ್ಟ್ 11 ರಂದು ಪತಿ ಕೆಲಸ ಮಾಡುತ್ತಿದ್ದ ಹೋಟೆಲ್‌ಗೆ ತೆರಳಿದ್ದ ಅನುಸೂಯ ಸಂಬಳದ ಹಣ ನೀಡುವಂತೆ ಜಗಳವಾಡಿದ್ದಳು. ಅಷ್ಟಕ್ಕೆ ನಿಲ್ಲದ ಕಿತ್ತಾಟ ಮನೆಗೆ ಬಂದ ಮೇಲೂ ಮುಂದುವರಿದಿತ್ತು. ಆಕ್ರೋಶಗೊಂಡ ಸಾಗರ್, ಆಕೆಯ ಕತ್ತು ಹಿಸುಕಿ ಮುಗಿಸಿದ್ದ.

ಪತ್ನಿಯ ಜೀವ ತೆಗೆದ ಬಳಿಕ ಸಾಗರ್, ಮೃತದೇಹವನ್ನು ಮೂರು ದಿನಗಳ ಕಾಲ ಮನೆಯಲ್ಲೇ ಇಟ್ಟುಕೊಂಡಿದ್ದ. ನಂತರ ಶವವನ್ನು ಹಾಸಿಗೆಯೊಳಗೆ ಇಟ್ಟು ಹಗ್ಗದಿಂದ ಬಿಗಿಯಾಗಿ ಕಟ್ಟಿದ್ದ. ಮಳೆ ಬರುತ್ತಿದ್ದ ರಾತ್ರಿ ಯಾರಿಗೂ ಅನುಮಾನ ಬಾರದಂತೆ ಮನೆಯಿಂದ 500 ಮೀಟರ್ ದೂರದಲ್ಲಿದ್ದ ಪಾಳುಬಿದ್ದ ಸೈಟ್‌ಗೆ ಎಸೆದು ಬಂದಿದ್ದ. ಅಲ್ಲಿಗೆ ಆತ ಸುಮ್ಮನಿರಲಿಲ್ಲ. ಆ ಶವ ಯಾರಿಗಾದರೂ ಸಿಕ್ಕಿದೆಯೇ ಎಂದು ನಿತ್ಯ ಆ ಜಾಗಕ್ಕೆ ಹೋಗಿ ನಾಲ್ಕೈದು ದಿನಗಳ ಕಾಲ ವಾಚ್ ಮಾಡಿದ್ದಾನೆ. ಯಾರೂ ಪತ್ತೆ ಹಚ್ಚಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ, ಏನೂ ಅರಿಯದವನಂತೆ ಹೋಟೆಲ್ ಕೆಲಸಕ್ಕೆ ಹೋಗುತ್ತಿದ್ದ.

ಇದರ ಮಧ್ಯೆ ಪತ್ನಿಯ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಆಕೆಯ ಕುಟುಂಬದವರಿಗೆ ಫೋನ್ ಮಾಡಿ ನಿಮ್ಮ ಮಗಳು ಯಾರ ಜೊತೆಯೋ ಓಡಿಹೋಗಿದ್ದಾಳೆ, ಎಲ್ಲಿಯೂ ಸಿಗುತ್ತಿಲ್ಲ ಎಂದು ನಾಟಕವಾಡಿದ್ದ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಆರೋಪಿ ಸಾಗರ್ ಚಂದ್ರ ರಾವತ್ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆ ಮೂಲಕ ಬೆಂಗಳೂರಿನ ಪೊಲೀಸರು ಮೃತದೇಹ ಪತ್ತೆಯಾದ ಒಂದೇ ವಾರಕ್ಕೆ ಕೊಲೆಯ ರಹಸ್ಯವನ್ನು ಬೇಧಿಸಿದ್ದಾರೆ.

PREV
Read more Articles on
click me!

Recommended Stories

ಆದಾಯ ತೆರಿಗೆ ಇಲಾಖೆಯಿಂದ ವಿಟಿಯು ಪಡೆದ 700 ಕೋಟಿ ಹಣದ ಮೇಲೆ ಸರ್ಕಾರದ ಕಣ್ಣು, 250 ಕೋಟಿ ಕೊಡುವಂತೆ ಪಟ್ಟು
ಭಾರತದ ನಾವೀನ್ಯತೆಯ ವೇಗವು ವಿಕಸಿತ ಭಾರತದ ದೃಷ್ಟಿಕೋನವನ್ನು ಮುನ್ನಡೆಸಲಿದೆ: ಪ್ರಲ್ಹಾದ್ ಜೋಶಿ