
ಬೆಂಗಳೂರು (ಸೆ.25): ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಾರ್ವಜನಿಕ ಉದ್ಯಾನವನಗಳಿಗೆ (Public Parks) ವಿಧಿಸಲಾಗಿರುವ ಸೀಮಿತ ಪ್ರವೇಶ ಸಮಯವು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ. ಬೆಳಗಿನ ಜಾವ ಮತ್ತು ಸಂಜೆಯ ವೇಳೆ ಅತ್ಯಲ್ಪ ಸಮಯ ಮಾತ್ರ ಪಾರ್ಕ್‌ಗಳನ್ನು ತೆರೆಯಲಾಗುತ್ತಿದ್ದು, ಇದು ನಡಿಗೆದಾರರು (Walkers), ಹಿರಿಯ ನಾಗರಿಕರು ಹಾಗೂ ತಡವಾಗಿ ಮನೆಗೆ ಹಿಂತಿರುಗುವ ಕಾರ್ಪೊರೇಟ್ ಉದ್ಯೋಗಿಗಳಿಗೆ ತೀವ್ರ ಅನಾನುಕೂಲವನ್ನು ಉಂಟುಮಾಡಿದೆ. ನಗರದ Ease of Living Index ಮೇಲೆಯೂ ಇದು ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂಬ ಕೂಗು ಜೋರಾಗಿದೆ.
ಬನಶಂಕರಿ 6ನೇ ಹಂತದ ನಿವಾಸಿಯೊಬ್ಬರು ದಕ್ಷಿಣ ಬೆಂಗಳೂರಿನ ಉದ್ಯಾನವನಗಳನ್ನು ಬೆಳಿಗ್ಗೆ 5 ರಿಂದ ರಾತ್ರಿ 10 ರವರೆಗೆ ತೆರೆದಿಡಬೇಕು ಎಂದು ಆಗ್ರಹಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಮನವಿ ಸಲ್ಲಿಸಿದ್ದರು.
ಸ್ಥಳೀಯ ನಿವಾಸಿ 55 ವರ್ಷದ ಶ್ರೀನಾಥ್ ಬೆಳೊಡು ಎಂಬುವವರು ತಮ್ಮ ಅಳಲನ್ನು ತೋಡಿಕೊಂಡಿದ್ದು, "ನಮ್ಮ ಭಾಗದಲ್ಲಿ ಹಲವು ಉದ್ಯಾನವನಗಳಿವೆ, ಆದರೆ ಒಂದೂ ಕೂಡ ಇಡೀ ದಿನ ಸಾರ್ವಜನಿಕರಿಗೆ ಲಭ್ಯವಿಲ್ಲ. ಬೆಳಿಗ್ಗೆ 6:30 ಕ್ಕೆ ತೆರೆದು 8:30 ಕ್ಕೆ ಬಂದ್ ಮಾಡುತ್ತಾರೆ. ಮತ್ತೆ ಸಂಜೆ 4 ಕ್ಕೆ ತೆರೆದು 8:30 ಕ್ಕೇ ಮುಚ್ಚುತ್ತಾರೆ. ಈ ಸಮಯ ಹಿರಿಯ ನಾಗರಿಕರಿಗಾಗಲಿ ಅಥವಾ ರಾತ್ರಿ 8 ರಿಂದ 9 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬರುವ ಕಾರ್ಪೊರೇಟ್ ಉದ್ಯೋಗಿಗಳಿಗಾಗಲಿ ಸೂಕ್ತವಾಗಿಲ್ಲ. ನಾವೆಲ್ಲರೂ ವ್ಯಾಯಾಮ ಮಾಡುವುದು ಹೇಗೆ?" ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಜಿಬಿಎ ಮುಖ್ಯ ಆಯುಕ್ತರು ದೂರನ್ನು ಸ್ವೀಕರಿಸಿ ಕ್ರಮ ಕೈಗೊಳ್ಳುವಂತೆ ದಕ್ಷಿಣ ಪಾಲಿಕೆಗೆ (South Corporation) ಸೂಚಿಸಿ 20 ದಿನಗಳು ಕಳೆದರೂ ಯಾವುದೇ ಬದಲಾವಣೆಯಾಗಿಲ್ಲ. "ಆಯುಕ್ತರು ಸೂಚನೆ ನೀಡಿ 20 ದಿನ ಕಳೆದರೂ ಕೆಳಹಂತದಲ್ಲಿ ಯಾವುದೇ ಕ್ರಮವಾಗಿಲ್ಲ, ನನ್ನನ್ನು ಯಾರೂ ಸಂಪರ್ಕಿಸಿಲ್ಲ," ಎಂದು ಶ್ರೀನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ದಕ್ಷಿಣ ಬೆಂಗಳೂರಿನ ಸಮಸ್ಯೆಯಾಗಿರದೆ ನಗರದಾದ್ಯಂತ ವ್ಯಾಪಿಸಿದೆ. ಮಲ್ಲೇಶ್ವರಂ ನಿವಾಸಿ ಅರವಿಂದ್ ದ್ವಾರಕಾನಾಥ್ ಮಾತನಾಡಿ, "ನಗರದ ಪ್ರಮುಖ ಹಸಿರು ವಲಯವಾಗಿರುವ 'ಸಾಂಕಿ ಟ್ಯಾಂಕ್' (Sankey Tank) ಕೂಡ ಬೆಳಗ್ಗೆ 10 ರಿಂದ 3:30 ರವರೆಗೆ ಬಂದ್ ಇರುತ್ತದೆ. ಇಡೀ ದಿನ ಪಾರ್ಕ್ ತೆರೆದಿದ್ದರೆ ಜನರು ತಮಗೆ ಅನುಕೂಲಕರ ಸಮಯದಲ್ಲಿ ಬಂದು ವ್ಯಾಯಾಮ ಮಾಡುತ್ತಿದ್ದರು. ಸೀಮಿತ ಸಮಯದ ಕಾರಣದಿಂದ ಈಗಿರುವ ಸಮಯದಲ್ಲಿ ಸಿಕ್ಕಾಪಟ್ಟೆ ಜನದಟ್ಟಣೆ ಉಂಟಾಗುತ್ತಿದೆ. ಜೊತೆಗೆ ಸ್ಥಳೀಯ ಆಟದ ಮೈದಾನಗಳಿಗೂ ಸಾರ್ವಜನಿಕರಿಗೆ ಪ್ರವೇಶ ಸಿಗುತ್ತಿಲ್ಲ," ಎಂದು ದೂರಿದ್ದಾರೆ.
ಮತ್ತೊಂದೆಡೆ, ಭದ್ರತೆ ಮತ್ತು ನಿರ್ವಹಣೆಯನ್ನು ಚುರುಕುಗೊಳಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬಹುದು ಎನ್ನುತ್ತಾರೆ ಸಂಜಯನಗರದ ನಿವಾಸಿ ಪ್ರಿಯಾಂಕಾ ಜೈನ್. "ಯಾವುದಾದರೂ ಸ್ಥಳ ಸುರಕ್ಷಿತವಾಗಿಲ್ಲದಿದ್ದರೆ, ಅಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸುವುದು ಅಧಿಕಾರಿಗಳ ಜವಾಬ್ದಾರಿಯೇ ಹೊರತು, ಜನರನ್ನು ಮನೆಯಲ್ಲೇ ಇರಿ ಎಂದು ಹೇಳುವುದಲ್ಲ. ಪ್ರತಿ ಕೆಲವು ವರ್ಷಗಳಿಗೊಮ್ಮೆ ಹೀಗೆಯೇ ಆಗುತ್ತದೆ. ಕೆಲ ದಿನ ಇಡೀ ದಿನ ಪಾರ್ಕ್ ತೆರೆಯುತ್ತಾರೆ, ಯಾವುದೋ ಅಹಿತಕರ ಘಟನೆ ನಡೆದ ತಕ್ಷಣ ಸಮಯವನ್ನು ಕಡಿತಗೊಳಿಸುತ್ತಾರೆ. ಇದು ಸರಿಯಾದ ಪರಿಹಾರವಲ್ಲ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾಗರಿಕರ ಆಕ್ರೋಶಕ್ಕೆ ಪ್ರತಿಕ್ರಿಯಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಯೊಬ್ಬರು, "ನಮ್ಮ ಪರಿಶೀಲನೆಯ ಪ್ರಕಾರ ರಾತ್ರಿ 8 ಗಂಟೆಯ ನಂತರ ನಿಜವಾದ ನಡಿಗೆದಾರರು ಪಾರ್ಕ್‌ಗೆ ಬರುವುದು ವಿರಳ. ಹೆಚ್ಚಾಗಿ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗುವವರೇ ಇಲ್ಲಿ ಕಾಣಸಿಗುತ್ತಾರೆ. ದಕ್ಷಿಣ ಬೆಂಗಳೂರಿನಲ್ಲಿ ಸರಗಳ್ಳತನ (Chain Snatching) ಸೇರಿದಂತೆ ಹಲವು ಅಪರಾಧ ಘಟನೆಗಳು ನಡೆದಿದ್ದರಿಂದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೇ (RWA) ನಮಗೆ ದೂರು ನೀಡಿದ್ದವು. ಹೀಗಾಗಿ ರಾತ್ರಿ 8 ಗಂಟೆಗೆ ಕಡ್ಡಾಯವಾಗಿ ಪಾರ್ಕ್ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಮಧ್ಯಾಹ್ನದ ವೇಳೆಯಲ್ಲಿ ಗಿಡಗಳ ನಿರ್ವಹಣೆಗಾಗಿ ಪಾರ್ಕ್ ಮುಚ್ಚುವುದು ಅಗತ್ಯ," ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.