
ಸ್ವಂತದ್ದೊಂದು ಮನೆ ಕಟ್ಟೋದು ಅಂದ್ರೆ ಸುಮ್ನೆ ಒಂದು ಆಸ್ತಿ ಮಾಡಿದ ಹಾಗಲ್ಲ. ಅದೊಂದು ಕುಟುಂಬದ ವರ್ಷಗಳ ಕನಸು, ಕಷ್ಟಪಟ್ಟು ದುಡಿದಿದ್ದರ ಫಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಒಂದು ವಿಡಿಯೋ ಇದೇ ಮಾತಿಗೆ ಸಾಕ್ಷಿಯಾಗಿದೆ. ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಶಿಫ್ಟ್ ಆದಾಗ ಆದ ಖುಷಿ, ಆ ಭಾವನಾತ್ಮಕ ಕ್ಷಣಗಳನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ನೆಟ್ಟಿಗರ ಮನಸ್ಸು ಗೆದ್ದಿದೆ.
ವಿಶಾಲ್ ಶರ್ಮಾ ಅನ್ನೋ ಯುವಕನೇ ಈ ವಿಡಿಯೋ ಹಂಚಿಕೊಂಡಿರೋದು. ಇವರು ತಮ್ಮ 'ಟೆಕ್ಕಿ ಆನ್ ರೀಲ್ಸ್' ಅನ್ನೋ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹೊಸ ಮನೆ ರಿಜಿಸ್ಟ್ರೇಷನ್ ದಿನದ ಎಮೋಷನಲ್ ಕ್ಷಣಗಳನ್ನು ಶೇರ್ ಮಾಡಿದ್ದಾರೆ. ‘ಆ ದಿನ ನನಗೆ ಬಾಡಿಗೆ ಮನೆಯಲ್ಲಿ ಇರೋದಕ್ಕೂ, ಸ್ವಂತ ಮನೆ ಖರೀದಿ ಮಾಡೋದಕ್ಕೂ ಇರೋ ನಿಜವಾದ ವ್ಯತ್ಯಾಸ ಗೊತ್ತಾಯ್ತು. ರಿಜಿಸ್ಟ್ರೇಷನ್ ಪೇಪರ್ ಮೇಲೆ ಇದ್ದಿದ್ದು ನನ್ನ ಸಹಿ ಮಾತ್ರ ಆಗಿರಬಹುದು, ಆದರೆ ಅದರ ಹಿಂದಿದ್ದ ಖುಷಿ ಇಡೀ ನನ್ನ ಕುಟುಂಬದ್ದು’ ಅಂತ ವಿಶಾಲ್ ಶರ್ಮಾ ವಿಡಿಯೋದಲ್ಲಿ ಹೇಳಿದ್ದಾರೆ.
ರಿಜಿಸ್ಟ್ರೇಷನ್ ದಿನ ಬೆಂಗಳೂರಿನಲ್ಲೇ ಇರುವ ಅವರ ಸಹೋದರ, ಸಹೋದರಿ ಸೇರಿದಂತೆ ಇಡೀ ಕುಟುಂಬವೇ ಜೊತೆಗಿತ್ತು ಅಂತ ವಿಶಾಲ್ ನೆನಪಿಸಿಕೊಂಡಿದ್ದಾರೆ. ತಂದೆ-ತಾಯಿಯ ಆಶೀರ್ವಾದ, ಮಕ್ಕಳ ಸಂಭ್ರಮ, ಎಲ್ಲರ ಮುಖದಲ್ಲಿದ್ದ ನಗು ಆ ದಿನವನ್ನು ಇನ್ನಷ್ಟು ಸ್ಪೆಷಲ್ ಮಾಡಿತ್ತು. "ಈ ಮನೆ ನಾನು ಒಬ್ಬನೇ ಖರೀದಿಸಿದ್ದಲ್ಲ, ಈ ದೊಡ್ಡ ಜರ್ನಿಯಲ್ಲಿ ನನ್ನ ಇಡೀ ಕುಟುಂಬ ನನ್ನ ಜೊತೆಗಿತ್ತು" ಅಂತ ಅವರು ಹೇಳಿದ್ದಾರೆ.
‘ಕುಟುಂಬಕ್ಕಾಗಿ ಮನೆ ಕಟ್ಟುವುದು ಅಂದ್ರೆ ಬರೀ ಒಂದು ಸಹಿಗೆ ಸೀಮಿತವಲ್ಲ’ ಅನ್ನೋ ಕ್ಯಾಪ್ಶನ್‌ನೊಂದಿಗೆ ವಿಶಾಲ್ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದು ಸ್ವಂತ ಮನೆ ಇಡೀ ಕುಟುಂಬವನ್ನು ಹೇಗೆ ಒಂದುಗೂಡಿಸುತ್ತೆ, ವರ್ಷಗಟ್ಟಲೆ ಬಾಡಿಗೆ ಮನೆಯಲ್ಲಿದ್ದರೆ ಸಿಗದ ಒಂದು ಸುರಕ್ಷತೆ ಮತ್ತು ಸಂತೋಷವನ್ನು ಸ್ವಂತ ಮನೆ ಕೊಡುತ್ತೆ ಅನ್ನೋದನ್ನು ಈ ವಿಡಿಯೋ ತೋರಿಸುತ್ತದೆ. ಸಾಕಷ್ಟು ಜನ ವಿಶಾಲ್ ಮತ್ತು ಅವರ ಕುಟುಂಬಕ್ಕೆ ಶುಭ ಹಾರೈಸಿದ್ದಾರೆ. ಹಲವರು ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಸ್ವಂತ ಮನೆ ಖರೀದಿಸಿದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಎಷ್ಟೇ ಆರ್ಥಿಕ ಹೊರೆಯಿದ್ದರೂ, ಮಧ್ಯಮ ವರ್ಗದ ಕುಟುಂಬಗಳಿಗೆ ಸ್ವಂತ ಮನೆ ಅನ್ನೋದು ಎಷ್ಟು ಭಾವನಾತ್ಮಕ ವಿಚಾರ ಅನ್ನೋದಕ್ಕೆ ಈ ವಿಡಿಯೋ ಒಂದು ಒಳ್ಳೆ ಉದಾಹರಣೆ.