ಬೆಂಗಳೂರಿನ ಮಾರುತಿ ಮಂದಿರ ಬಿಎಂಟಿಸಿ ಬಸ್ ನಿಲ್ದಾಣವೀಗ ಫುಡ್‌ಸ್ಟ್ರೀಟ್!

Sathish Kumar KH   | Kannada Prabha
Published : Sep 28, 2026, 07:24 AM IST
Bengaluru Vijayanagar Food Street

ಸಾರಾಂಶ

ಬೆಂಗಳೂರಿನ ವಿಜಯನಗರದ ಮಾರುತಿ ಮಂದಿರದ ಬಸ್ ನಿಲ್ದಾಣಗಳು ಸಂಜೆಯಾಗುತ್ತಿದ್ದಂತೆ ಫುಡ್‌ಸ್ಟ್ರೀಟ್‌ ಆಗಿ ಮಾರ್ಪಡುತ್ತಿದ್ದು, ಪ್ರಯಾಣಿಕರಿಗೆ ತೀವ್ರ ಕಿರಿಕಿರಿಯಾಗುತ್ತಿದೆ. ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿ ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ, ಸಾರ್ವಜನಿಕರು ಪರದಾಡುವಂತಾಗಿದೆ.

ವರದಿ- ಮಂಜುನಾಥ ಕೆ

ಬೆಂಗಳೂರು (ಸೆ.28): ಸಂಜೆಯಾಗುತ್ತಿದ್ದಂತೆಯೇ ವಿಜಯನಗರ ಸಮೀಪವಿರುವ ಮಾರುತಿ ಮಂದಿರದ ಬಸ್‌ ನಿಲ್ದಾಣಗಳು ಫುಡ್‌ಸ್ಟ್ರೀಟ್‌ ಆಗಿ ಮಾರ್ಪಟಿದ್ದು, ಸಾರ್ವಜನಿಕರು ನಿಲ್ದಾಣದಲ್ಲಿ ನಿಂತುಕೊಳ್ಳಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯ ರಸ್ತೆಯಲ್ಲಿ ವಾಹನ ನಿಲ್ಲಿಸಿ ಊಟ-ತಿಂಡಿ ತಿನ್ನುವದರಿಂದ ಬೇರೆ ವಾಹನಗಳ ಸಂಚಾರಕ್ಕೂ ವ್ಯತ್ಯಯವಾಗುತ್ತಿದೆ. ಬಸ್‌ ನಿಲ್ದಾಣಗಳ ಜಾಗವನ್ನು ಆಕ್ರಮಿಸಿಕೊಂಡಿರುವ ವ್ಯಾಪಾರಿಗಳು ಎಗ್ಗಿಲ್ಲದೇ ವ್ಯಾಪಾರ ಮಾಡುತ್ತಿದ್ದಾರೆ.

ವಿಜಯನಗರದ ವಾಟರ್‌ ಟ್ಯಾಂಕ್‌ ಸಮೀಪವಿರುವ ಫುಡ್‌ಸ್ಟ್ರೀಟ್‌ ಕಾಮಗಾರಿ ಹಿನ್ನೆಲೆಯಲ್ಲಿ ಕೆಲ ವ್ಯಾಪಾರಿಗಳು ಸಿಕ್ಕ ಸಿಕ್ಕಲ್ಲೆಲ್ಲಾ ವ್ಯಾಪಾರ ಶುರು ಮಾಡಿಕೊಂಡಿದ್ದಾರೆ. ಕೆಲವರು ವಿಜಯನಗರ ಬಸ್‌ ನಿಲ್ದಾಣದ ಸುತ್ತ ವ್ಯಾಪಾರ ಮಾಡುತ್ತಿದ್ದಾರೆ. ಮತ್ತೆ ಕೆಲವರು ಬಸ್‌ ನಿಲ್ದಾಣವನ್ನೇ ತಮ್ಮ ವ್ಯಾಪಾರ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ.

ಪ್ರಯಾಣಿಕರಿಗೆ ಕಿರಿಕಿರಿ:

ಮಾರುತಿ ಮಂದಿರದ ಎರಡು ಬದಿಯ ನಿಲ್ದಾಣಗಳಲ್ಲಿ ಈ ಹಿಂದೆ ಒಬ್ಬರು ಅಥವಾ ಇಬ್ಬರು ಮಾತ್ರ ಮೊಬೈಲ್‌ ಕ್ಯಾಂಟಿನ್‌ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಸಂಖ್ಯೆ ಹೆಚ್ಚಾಗಿದ್ದು, ಬಸ್‌ ನಿಲ್ದಾಣವನ್ನೇ ಫುಡ್‌ಸ್ಟ್ರೀಟ್‌ ಮಾಡಿಕೊಂಡಿದ್ದಾರೆ. ಇದರಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ. ಪ್ರಯಾಣಿಕರು ಬಸ್‌ ನಿಲ್ದಾಣದಲ್ಲಿ ನಿಂತುಕೊಳ್ಳಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಒಂದೊಮ್ಮೆ ಬಸ್‌ಗಾಗಿ ನಿಂತುಕೊಳ್ಳುವವರಿಗೆ ಮೂಗಿಗೆ ಅಡುಗೆಯ ಘಾಟು ಬಡಿಯುತ್ತಿದೆ.

ಹೆಚ್ಚಿನ ಸಂಚಾರ ದಟ್ಟಣೆ:

ಎರಡು ಬದಿಯಲ್ಲಿರುವ ಬಸ್‌ನಿಲ್ದಾಣಗಳು, ಟಿಟಿಎಂಸಿ ಬಸ್‌ ನಿಲ್ದಾಣ ಸುತ್ತಮುತ್ತ ಹಾಗೂ ಗ್ಯಾರೇಜ್‌ ಬಸ್‌ ನಿಲ್ದಾಣಗಳಲ್ಲಿ ತಳ್ಳುವ ಗಾಡಿ ಇಟ್ಟುಕೊಂಡು ಭರ್ಜರಿ ವ್ಯಾಪಾರ ಮಾಡುತ್ತಿರುವುದರಿಂದ ಜನರು ಕಿಕ್ಕಿರಿದು ತುಂಬಿರುತ್ತಾರೆ. ಮುಖ್ಯರಸ್ತೆಯಲ್ಲಿಯೇ ಗ್ರಾಹಕರು ತಮ್ಮ ಕಾರು, ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಊಟ ಮಾಡಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಅಧಿಕ ಸಂಚಾರ ಉಂಟಾಗುತ್ತಿದೆ. ಇದು ವಾಹನ ಸವಾರರಿಗೆ ಹೆಚ್ಚಿನ ಕಿರಿ ಕಿರಿ ಉಂಟು ಮಾಡುತ್ತಿದೆ. ಬಸ್‌ ಚಾಲಕರಿಗೂ ಕೂಡ ಬಸ್‌ ನಿಲ್ದಾಣದಲ್ಲಿ ಬಸ್‌ ನಿಲ್ಲಿಸಲು ಸಮಸ್ಯೆಯಾಗುತ್ತಿದೆ.

ಫುಟ್‌ಪಾತ್‌ ಮೇಲೆಯೇ ವ್ಯಾಪಾರ:

ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸಲಿ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಲಕ್ಷಾಂತರ ರುಪಾಯಿ ಖರ್ಚು ಮಾಡಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿದೆ. ಆದರೆ ಇಲ್ಲಿನ ವ್ಯಾಪಾರಿಗಳು ಆ ಪಾದಚಾರಿ ಮಾರ್ಗಗಳನ್ನೇ ಅತಿಕ್ರಮಿಸಿಕೊಂಡು ಭರ್ಜರಿ ವ್ಯಾಪಾರ ಮಾಡುತ್ತಿದ್ದಾರೆ. ಹೀಗಾಗಿ ಪಾದಚಾರಿಗಳು ಜೀವಭಯದಲ್ಲೇ ರಸ್ತೆಯಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಈ ಭಾಗದ ರಸ್ತೆಗಳಲ್ಲಿ ಅಪಘಾತಗಳಾಗುವ ಸಾಧ್ಯತೆ ಹೆಚ್ಚಿದೆ.

ಕೂಗಳತೆಯಲ್ಲೇ ಶಾಸಕರ ಮನೆ:

ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ಕೃಷ್ಣಪ್ಪ ಅವರ ಮನೆಯ ಕೂಗಳತೆಯಲ್ಲಿಯೇ ಈ ಮಾರುತಿ ಮಂದಿರ ಬಸ್‌ ನಿಲ್ದಾಣಗಳಿದ್ದು, ಇಲ್ಲಿ ಗಾಡಿಗಳನ್ನು ರಾಜಾರೋಷವಾಗಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇಲ್ಲಿನ ಶಾಸಕರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಈ ಭಾಗದಲ್ಲಿ ಸಾರ್ವಜನಿಕರು ಓಡಾಡುವುದು ಕಷ್ಟವಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಇತ್ತ ಗಮನಹರಿಸಬೇಕು. ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ ವ್ಯಾಪಾರಿಗಳನ್ನು ತೆರವುಗೊಳಿಸಿ ಜನರಿಗೆ ಓಡಾಡಲು ದಾಚಾರಿ ಮಾರ್ಗಗಳನ್ನು ಮುಕ್ತಗೊಳಿಸಬೇಕು ಎಂದು ವಾಹನ ಸವಾರರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಮಾರುತಿ ಮಂದಿರ ಹಾಗೂ ಸುತ್ತ ಮುತ್ತಲಿನ ಬಸ್‌ ನಿಲ್ದಾಣಗಳಲ್ಲಿ ಪ್ರತಿ ದಿನ ಸಂಜೆ ಮೊಬೈಲ್‌ ಕ್ಯಾಂಟಿನ್‌ ವಾಹನಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡಲಾಗುತ್ತಿದೆ. ಇದರಿಂದ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸರಿಯಾಗಿ ನಿಲ್ಲಲು ಸರಿಯಾದ ಸ್ಥಳವೇ ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕು.

-ಕಾರ್ತಿಕ್‌, ಸ್ಥಳೀಯ ನಿವಾಸಿ

ಬಸ್‌ ನಿಲ್ದಾಣಗಳ ಸಮೀಪವೇ ತಳ್ಳುವ ಗಾಡಿಗಳಲ್ಲಿ ಆಹಾರ ಪದಾರ್ಥಗಳನ್ನಿಟ್ಟುಕೊಂಡು ವ್ಯಾಪಾರ ಮಾಡಲಾಗುತ್ತಿದೆ. ಇದರಿಂದಾಗಿ ಇಲ್ಲಿಗೆ ಬರುವ ಗ್ರಾಹಕರು ಮುಖ್ಯರಸ್ತೆಗಳಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಬಸ್‌ ನಿಲ್ದಾಣಗಳ ಸುತ್ತ ಮುತ್ತ ಅಧಿಕ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಬಸ್‌ ನಿಲುಗಡೆಗೂ ಸಮಸ್ಯೆಯಾಗುತ್ತಿದೆ.

ಅಭಿಷೇಕ್‌, ವಾಹನ ಸವಾರ

PREV
Read more Articles on
click me!

Recommended Stories

ಲಾಲ್‌ಬಾಗ್ ವಿನಾಶಕ್ಕೆ ಸುರಂಗದ ಬಳಿಕ ಮತ್ತೊಂದು ಅಸ್ತ್ರ; 1960ರ ಇತಿಹಾಸ ಹೇಳಿ ಟೆನ್ನಿಸ್ ಕೋರ್ಟ್ ನಿರ್ಮಾಣ!
ಬೆಂಗಳೂರು-ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ; ಮೆಮು ರೈಲುಗಳ ತಾತ್ಕಾಲಿಕ ನಿಲ್ದಾಣ ಬದಲಾವಣೆ ಅವಧಿ ವಿಸ್ತರಣೆ