ಬೆಂಗಳೂರು : ರೈಲಿಗೆ ತಲೆಕೊಟ್ಟು ಟಾಪರ್ ವಿದ್ಯಾರ್ಥಿ ಸಾವು - ಕಾಲೇಜಲ್ಲಿ ರ್‍ಯಾಗಿಂಗ್‌?

By Kannadaprabha NewsFirst Published Oct 24, 2019, 8:26 AM IST
Highlights

ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೆಬ್ಬಾಳ ಸಮೀಪ ನಡೆದಿದೆ. ಇದಕ್ಕೆ ಇಲ್ಲಿನ ಹಿರಿಯ ವಿದ್ಯಾರ್ಥಿಗಳ ಕಿರುಕುಳ ಕಾರಣ ಎನ್ನಲಾಗಿದೆ. 

ಬೆಂಗಳೂರು (ಅ.24) :  ರೈಲಿಗೆ ಸಿಲುಕಿ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೆಬ್ಬಾಳ ಸಮೀಪ ನಡೆದಿದೆ.

ಗೌರಿಬಿದನೂರು ತಾಲೂಕಿನ ಮಲ್ಲಸಂದ್ರ ಗ್ರಾಮದ ಎ.ಗಗನ್‌ (19) ಮೃತ ದುರ್ದೈವಿ. ಮಲ್ಲಸಂದ್ರ ಅಚ್ಚಪ್ಪ ಮತ್ತು ಲಕ್ಷ್ಮಮ್ಮ ದಂಪತಿ ಹಿರಿಯ ಪುತ್ರ ಗಗನ್‌, ಪಿಯುಸಿ ಶೇ.95 ಅಂಕ ಪಡೆದು ತೇರ್ಗಡೆಗೊಂಡಿದ್ದ. ಬಳಿಕ ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಬಿಎಸ್ಸಿಗೆ ದಾಖಲಾದ ಆತ, ವಿವಿಯ ಆವರಣದ ಹಾಸ್ಟೆಲ್‌ನಲ್ಲೇ ನೆಲೆಸಿದ್ದ.

ಬೆಳಗ್ಗೆ ಕೊಠಡಿಯಲ್ಲೇ ಮೊಬೈಲ್‌ ಬಿಟ್ಟು ಗಗನ್‌ ಹೊರ ಹೋಗಿದ್ದ. ತರಗತಿಗೆ ಸಹ ಆತ ಗೈರು ಹಾಜರಾಗಿದ್ದ. ಇದರಿಂದ ಅನುಮಾನಗೊಂಡ ಗಗನ್‌ ಸಹಪಾಠಿಗಳು, ಆತನ ಪೋಷಕರಿಗೆ ಕರೆ ಮಾಡಿ ನಾಪತ್ತೆ ವಿಚಾರ ತಿಳಿಸಿದ್ದರು. ಮರುದಿನ ಬೆಳಗ್ಗೆ ರೈಲ್ವೆ ಹಳಿಗಳ ಪಕ್ಕದ ಮೋರಿಯಲ್ಲಿ ಅಪರಿಚಿತನ ಮೃತದೇಹ ನೋಡಿದ ಸಾರ್ವಜನಿಕರು, ಪೊಲೀಸರಿಗೆ ತಿಳಿಸಿದ್ದಾರೆ.

ವಿವಿಯ ಹಿರಿಯ ವಿದ್ಯಾರ್ಥಿಗಳಿಂದಲೇ ಗಗನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಕುಟುಂಬ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ರಜೆ ದಿನಗಳಲ್ಲಿ ಊರಿಗೆ ಬಂದಾಗ ತನಗೆ ಹಿರಿಯ ವಿದ್ಯಾರ್ಥಿಗಳು ನೀಡುತ್ತಿದ್ದ ತೊಂದರೆಯನ್ನು ಗಗನ್‌ ಹೇಳಿಕೊಳ್ಳುತ್ತಿದ್ದ. ಬೆದರಿಕೆ ಹಾಕಿ ಪ್ರಾಜೆಕ್ಟ್ ಸೇರಿದಂತೆ ಇತರೆ ಕೆಲಸಗಳನ್ನು ಗಗನ್‌ನಿಂದ ಹಿರಿಯ ವಿದ್ಯಾರ್ಥಿಗಳು ಮಾಡಿಸುತ್ತಿದ್ದರಂತೆ. ಈ ಕಿರುಕುಳ ಸಹಿಸಲಾರದೆ ಆತನ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತನ ಚಿಕ್ಕಪ್ಪ ನಾಗರಾಜ್‌ ಆರೋಪಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಸ್‌ಎಸ್‌ಎಲ್‌ಸಿಯಲ್ಲಿ ತಾಲೂಕಿಗೆ ಗಗನ್‌ ಪ್ರಥಮ ಸ್ಥಾನ ಗಳಿಸಿದ್ದ. ಕೃಷಿ ವಿಜ್ಞಾನಿ ಆಗುವ ಕನಸು ಕಂಡಿದ್ದ ಆತ, ಜಿಕೆವಿಕೆಯಲ್ಲಿ ಉಚಿತ ಸೀಟು ಪಡೆದು ಪದವಿಗೆ ದಾಖಲಾಗಿದ್ದ. ಗಗನ್‌ ಸಾವಿಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮೃತನ ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ.

ಇದೇ ಆರೋಪದ ಮೇರೆಗೆ ಯಶವಂತಪುರ ರೈಲ್ವೆ ಠಾಣೆ ಪೊಲೀಸರಿಗೆ ಮೃತನ ಪೋಷಕರು ದೂರು ನೀಡಿದ್ದಾರೆ. ಅದರನ್ವಯ ಐಪಿಸಿ 306ರ (ಆತ್ಮಹತ್ಯೆಗೆ ಪ್ರಚೋದನೆ) ಅಡಿ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು, ಕೆಲ ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

click me!