Bengaluru: ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಸಂಚಲನ, ನಿವೃತ್ತಿಗೆ 6 ತಿಂಗಳು ಇರುವಾಗಲೇ KSRP ADGP ರಾಜೀನಾಮೆ

Published : Oct 14, 2026, 01:15 PM IST
IPS S Ravi

ಸಾರಾಂಶ

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ದಿಢೀರ್ ನಿರ್ಧಾರಗಳು ಭಾರಿ ಸಂಚಲನ ಮೂಡಿಸಿವೆ. ಕೆಎಸ್‌ಆರ್‌ಪಿ ಎಡಿಜಿಪಿ ಎಸ್.ರವಿ ಅವರು ನಿವೃತ್ತಿಗೆ ಆರು ತಿಂಗಳು ಇರುವಾಗಲೇ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಡಿಜಿಪಿ ಉಮೇಶ್‌ ಕುಮಾರ್‌ ಅವರು ಕೇಂದ್ರ ಸೇವೆಗೆ ತೆರಳಲು ತೀರ್ಮಾನಿಸಿದ್ದು, ಇಲಾಖೆಯಲ್ಲಿನ ತಾಳ-ಮೇಳ ತಪ್ಪಿರುವ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು: ರಾಜ್ಯ ಪೊಲೀಸ್‌ ನೇಮಕಾತಿ ವಿಭಾಗದ ಡಿಜಿಪಿ ಅವರು ದಿಢೀರ್‌ ಕೇಂದ್ರ ಸೇವೆಗೆ ತೆರಳಲು ಸಿದ್ಧರಾಗಿದ್ದರೆ, ಇತ್ತ ಕೆಎಸ್‌ಆರ್‌ಪಿ ಎಡಿಜಿಪಿ ಅವರು ಸರ್ಕಾರಿ ಸೇವೆಗೆ ರಾಜೀನಾಮೆ ಸಲ್ಲಿಸಿರುವುದು ಭಾರೀ ಸಂಚಲನ ಮೂಡಿಸಿದೆ.

ವೈಯಕ್ತಿಕ ಕಾರಣಕ್ಕೆ ಪದತ್ಯಾಗ: ಎಸ್.ರವಿ

ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆಯಲು ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ) ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎಸ್.ರವಿ ತೀರ್ಮಾನಿಸಿದ್ದಾರೆ. ನಿವೃತ್ತಿಗೆ ಆರು ತಿಂಗಳು ಬಾಕಿ ಇರುವಾಗಲೇ ಹರಾತ್‌ ಸೇವೆಯಿಂದ ರವಿ ಅವರು ನಿರ್ಗಮಿಸಲು ಮುಂದಾಗಿದ್ದಾರೆ. ಇತ್ತ ಕೇಂದ್ರ ಸರ್ಕಾರಕ್ಕೆ ಎರವಲು ಸೇವೆ ಮೇರೆಗೆ ಡಿಜಿಪಿ ಉಮೇಶ್‌ ಕುಮಾರ್‌ ತೆರಳಲು ತೀರ್ಮಾನಿಸಿದ್ದಾರೆ. ಈ ಬೆಳವಣಿಗೆ ಪೊಲೀಸ್‌ ಇಲಾಖೆಯ ಆಡಳಿತದಲ್ಲಿ ಅಧಿಕಾರಿಗಳ ಮಧ್ಯೆ ತಾಳ-ಮೇಳ ತಪ್ಪಿರುವುದಕ್ಕೆ ನಿದರ್ಶನ ಎಂಬ ಚರ್ಚೆ ನಡೆದಿದೆ.

ಕಳೆದ ಶುಕ್ರವಾರ ಎಡಿಜಿಪಿ ರವಿ ಅವರು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದ್ದರು. ರವಿ ಅವರನ್ನು ಸೋಮವಾರ ಮತ್ತೆ ಕರೆಸಿ ನಿರ್ಧಾರ ಬದಲಿಸುವಂತೆ ಮನವೊಲಿಸಲು ಯತ್ನಿಸಿ ವಿಫಲರಾದ ನಂತರ ಸಲೀಂ ಅವರು ರಾಜೀನಾಮೆ ಪತ್ರವನ್ನು ಸರ್ಕಾರಕ್ಕೆ ವರ್ಗಾಯಿಸಿದ್ದಾರೆ. ಈಗ ಸರ್ಕಾರ ರಾಜೀನಾಮೆ ಅಂಗೀಕರಿಸಲಿದೆಯೇ ಎಂಬ ಚರ್ಚೆ ನಡೆದಿದೆ. ಆದರೆ, ತಮ್ಮ ನಿರ್ಧಾರ ಅಚಲವಾಗಿದೆ ಎಂದು ಎಡಿಜಿಪಿ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ‘ಕನ್ನಡಪ್ರಭ’ ಜೊತೆ ಮಾತನಾಡಿದ ಎಡಿಜಿಪಿ ರವಿ ಅವರು, ‘ವೈಯಕ್ತಿಕ ಕಾರಣಕ್ಕಾಗಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆಯಲು ತೀರ್ಮಾನಿಸಿದೆ. ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಆದರೆ ಈ ಬಗ್ಗೆ ಹೆಚ್ಚೇನು ಮಾತನಾಡುವುದಿಲ್ಲ, ಮುಂದಿನ ಸವಿಸ್ತಾರವಾಗಿ ರಾಜೀನಾಮೆ ಕಾರಣ ಹೇಳುತ್ತೇನೆ’ ಎಂದರು.

ಡಿಜಿಪಿ ಜೊತೆ ಸಿಎಂ ಮಾತುಕತೆ

ಎಡಿಜಿಪಿ ರಾಜೀನಾಮೆ ಪ್ರಹಸನ ಬೆನ್ನಲ್ಲೇ ಕೇಂದ್ರ ಸೇವೆಗೆ ತೆರಳಲು ರಾಜ್ಯ ನೇಮಕಾತಿ ವಿಭಾಗದ ಡಿಜಿಪಿ ಉಮೇಶ್‌ ಕುಮಾರ್‌ ತೀರ್ಮಾನಿಸಿದ್ದಾರೆ. ಈ ನಿರ್ಧಾರದ ಬಗ್ಗೆ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ನೀತಿ, ಯೋಜನೆ ಹಾಗೂ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಅವರು ನೇಮಕವಾಗಿದ್ದು, 2028ರ ಫೆಬ್ರವರಿಯಲ್ಲಿ ಉಮೇಶ್‌ ಕುಮಾರ್‌ ಸೇವೆಯಿಂದ ನಿವೃತ್ತರಾಗಲಿದ್ದಾರೆ. ಹೀಗಾಗಿ 1.5 ವರ್ಷಗಳು ದೆಹಲಿಯಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ. ತಮ್ಮನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಡಿಜಿ-ಐಜಿಪಿ ಅವರಿಗೆ ಉಮೇಶ್‌ ಕುಮಾರ್‌ ಮನವಿ ಮಾಡಿದ್ದಾರೆ. ಈ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಸಲೀಂ ರವಾನಿಸಿದ್ದಾರೆ. ಈ ಕೇಂದ್ರ ಸೇವೆಗೆ ತೆರಳುವ ವಿಚಾರವಾಗಿ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಅವರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಸರ್ಕಾರದ ಅವಧಿಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ನೇಮಕ ಹಗರಣದ ತನಿಖೆಯ ಸಾರಥ್ಯ ವಹಿಸಿದ್ದ ಉಮೇಶ್‌ ಕುಮಾರ್‌ ಅವರು, ಪೊಲೀಸ್‌ ನೇಮಕಾತಿಯಲ್ಲಿ ಅಕ್ರಮಗಳ ತಡೆಗೆ ತಂತ್ರಜ್ಞಾನ ಬಳಸಿ ಹೊಸ ಯೋಜನೆಗಳನ್ನು ಜಾರಿಗೊಳಿಸಿ ಗಮನ ಸೆಳೆದಿದ್ದರು. ನಿವೃತ್ತಿ ಅಂಚಿನಲ್ಲಿದ್ದಾಗ ಕೇಂದ್ರ ಸೇವೆಗೆ ತೆರಳುತ್ತಿರುವುದು ಕುತೂಹಲ ಮೂಡಿಸಿದೆ.

PREV
Read more Articles on
click me!

Recommended Stories

Bengaluru: ಆಸ್ತಿಗಾಗಿ ಅಣ್ಣನ ಮಗನ ಕೊಂದು ಠಾಣೆಗೆ ಹೋಗಿ ಶರಣಾದ ಚಿಕ್ಕಪ್ಪ, ಮತ್ತೋರ್ವ ಯುವಕನ ಜೀವ ಉಳಿಸಿದ 'ಸಿನಿಮಾ'
ಬೆಂಗಳೂರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಆ ದೃಶ್ಯ! ಕುಡುಕನ ಅವಾಂತರಕ್ಕೆ ಜನರು ಕಂಗಾಲು!