ಬೆಂಗಳೂರಲ್ಲಿ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್ ಆಗೋಕೆ ಇಂಥವರೇ ಕಾರಣ! ಬೈಕ್ ಅಡ್ಡಗಟ್ಟಿ ಪುಂಡಾಟ

Published : Sep 15, 2026, 11:39 AM IST
Bengaluru Road Rage Traffic Jam

ಸಾರಾಂಶ

ಬೆಂಗಳೂರಿನಲ್ಲಿ ವಾಹನ ಸವಾರರ ನಡುವಿನ ಕ್ಷುಲ್ಲಕ ಜಗಳಗಳು ಮತ್ತು ಅಹಂಕಾರದಿಂದಾಗಿ ತೀವ್ರ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ರಸ್ತೆ ಮಧ್ಯೆ ಜಗಳವಾಡಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಬೆಂಗಳೂರು ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ರಸ್ತೆಯಲ್ಲಿ ತಾಳ್ಮೆ ಮತ್ತು ಸುರಕ್ಷಿತ ಚಾಲನೆಯೇ ಮುಖ್ಯವೇ ಹೊರತು ಶಕ್ತಿ ಪ್ರದರ್ಶನವಲ್ಲ ಎಂಬುದನ್ನು ಈ ಲೇಖನ ಒತ್ತಿಹೇಳುತ್ತದೆ.

ಬೆಂಗಳೂರು (ಸೆ.15): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ನಿನ್ನಿ ಮೊನ್ನೆಯದಲ್ಲ. ಆದರೆ, ವಾಹನಗಳ ದಟ್ಟಣೆಗಿಂತ ಹೆಚ್ಚಾಗಿ ಕೆಲವರ ಬೇಜವಾಬ್ದಾರಿತನ ಮತ್ತು ರಸ್ತೆಗಳಲ್ಲಿ ನಡೆಯುವ ಸಣ್ಣಪುಟ್ಟ ಜಗಳಗಳೇ (Road Rage) ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್‌ಗೆ ಪ್ರಮುಖ ಕಾರಣವಾಗುತ್ತಿವೆ. ಇಬ್ಬರ ನಡುವಿನ ಕ್ಷುಲ್ಲಕ ಜಗಳ ಮತ್ತು ‘ಇಗೋ’ದಿಂದಾಗಿ ನೂರಾರು ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯುವಂತಾಗುತ್ತಿದ್ದು, ಇಂತಹ ಪ್ರವೃತ್ತಿ ವಿರುದ್ಧ ಜನಸಾಮಾನ್ಯರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇತ್ತೀಚೆಗೆ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಜಗಳವಾಡಿಕೊಂಡು ಇತರ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ (ಹಿಂದಿನ ಟ್ವಿಟರ್) ವೈರಲ್ ಆಗಿದೆ. ಈ ಬಗ್ಗೆ ಸಾರ್ವಜನಿಕರು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದು, ಪೊಲೀಸರು ವಿಡಿಯೋ ಪರಿಶೀಲಿಸಿ ಕಿಡಿಗೇಡಿಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ರಸ್ತೆಯಲ್ಲಿ 'ಇಗೋ' ಜೇಬಿನಲ್ಲಿರಲಿ, ಪ್ರಾಣ ಮುಖ್ಯ!

ಬೆಂಗಳೂರಿನ ರಸ್ತೆಗಳಲ್ಲಿ ದಿನಬೆಳಗಾದರೆ ಸಾಕು ಒಂದಲ್ಲ ಒಂದು ಕಡೆ ಬೈಕ್ ಸವಾರರು, ಕಾರು ಚಾಲಕರು ಅಥವಾ ಪಾದಚಾರಿಗಳ ನಡುವೆ ವಾಗ್ವಾದ ನಡೆಯುವುದು ಸಾಮಾನ್ಯವಾಗಿದೆ. ವಾಹನ ಸ್ವಲ್ಪ ತಾಗಿದರೂ ಸಾಕು, ಇಬ್ಬರೂ ರಸ್ತೆ ಮಧ್ಯದಲ್ಲೇ ವಾಹನ ನಿಲ್ಲಿಸಿ ಜಟಾಪಟಿಗೆ ಇಳಿಯುತ್ತಾರೆ.

ನೆನಪಿಡಿ, ರಸ್ತೆಯಲ್ಲಿ 'ರೋಡ್ ರೇಜ್' ಎಂದಿಗೂ ಪರಿಹಾರವಲ್ಲ:

ಕ್ಷಣಿಕ ಆವೇಶದಲ್ಲಿ ಮಾಡುವ ಜಗಳ ಗಂಭೀರ ಅಪಘಾತಕ್ಕೆ, ಗಾಯಗಳಿಗೆ ಅಥವಾ ಪೊಲೀಸ್-ಕೋರ್ಟ್ ಕೇಸುಗಳಿಗೆ ದಾರಿ ಮಾಡಿಕೊಡಬಹುದು. ಇಬ್ಬರು ರಸ್ತೆಯಲ್ಲಿ ನಿಂತು ಕಿತ್ತಾಡಿದರೆ, ಅವರ ಹಿಂದೆ ಬರುವ ಆಂಬ್ಯುಲೆನ್ಸ್, ಆಫೀಸ್‌ಗೆ ಹೋಗುವವರು, ಶಾಲಾ ವಾಹನಗಳು ಸೇರಿದಂತೆ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ತುರ್ತು ಕೆಲಸಗಳಿರುತ್ತವೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ, ಇನ್ನೊಬ್ಬರ ಅಸಹನೆಗೆ ನಿಮ್ಮ ಮನಃಶಾಂತಿಯನ್ನು ಹಾಳುಮಾಡಿಕೊಳ್ಳಬೇಡಿ. ಸಾಧ್ಯವಾದಷ್ಟು ದಾರಿ ಬಿಟ್ಟು ಮುನ್ನಡೆಯುವುದೇ ಜಾಣತನ.

ಸುರಕ್ಷಿತವಾಗಿ ಮನೆ ತಲುಪುವುದೇ ಅಂತಿಮ ಗೆಲುವು!

ರಸ್ತೆಯಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡುವುದಕ್ಕಿಂತ, ನಿಗದಿತ ಸಮಯಕ್ಕೆ ಸುರಕ್ಷಿತವಾಗಿ ಮನೆಗೆ ತಲುಪುವುದು ಮುಖ್ಯ. ನಿಮ್ಮ ಕೋಪ ಮತ್ತು ಅಹಂ (Ego) ಎರಡನ್ನೂ ಮನೆಯಲ್ಲೇ ಬಿಟ್ಟು ರಸ್ತೆಗಿಳಿಯಿರಿ. ತಾಳ್ಮೆಯಿಂದ ವಾಹನ ಚಲಾಯಿಸುವುದೇ ರಸ್ತೆಯ ಮೇಲಿನ ನಿಜವಾದ ವಿಜಯ.

ಪೊಲೀಸರ ಕಣ್ಣು: ಕಿಡಿಗೇಡಿಗಳಿಗೆ ಎಚ್ಚರಿಕೆ!

ರಸ್ತೆಯಲ್ಲಿ ಗಲಾಟೆ ನಡೆಸಿ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಅಲರ್ಟ್ ಆಗಿರುವ ಬೆಂಗಳೂರು ನಗರ ಪೊಲೀಸರು, ಘಟನೆಯ ಸ್ಥಳ ಹಾಗೂ ವಾಹನಗಳ ನೋಂದಣಿ ಸಂಖ್ಯೆಯನ್ನು ಆಧರಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಶಾಂತಿಭಂಗ ಉಂಟುಮಾಡುವ ಮತ್ತು ಕೃತಕ ಟ್ರಾಫಿಕ್ ಜಾಮ್ ಸೃಷ್ಟಿಸುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

PREV
Read more Articles on
click me!

Recommended Stories

ಐಟಿ ಕಂಪನಿಯಲ್ಲಿ ರಾತ್ರಿಪಾಳಿ ಮಾಡುವ ಮಹಿಳಾ ಟೆಕ್ಕಿಗಳ ಸುರಕ್ಷತಾ ನಿಯಮ ಹಿಂಪಡೆದ ಸರ್ಕಾರ; ನೌಕರರಿಂದ ಆಕ್ರೋಶ
ಬೆಂಗಳೂರಲ್ಲಿ ಗಲ್ಲಿ ಗಲ್ಲಿಗೂ ರೌಡಿಗಳು! ಸಣ್ಣ ಅಂಗಡಿ ಇಟ್ಕೊಂಡು ಜೀವನ ಮಾಡೋಣಂದ್ರೂ ಪುಂಡರ ಕಾಟ!