ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರ ಗೌಡಗೆ ನೈಜೀರಿಯನ್ ಖೈದಿಗಳ ಕಾಟ: ಬ್ಯಾರಕ್ ಬದಲಾವಣೆ ಮಾಡುವಂತೆ ಪಟ್ಟು

Published : Oct 06, 2026, 08:03 PM IST
pavithra gowda

ಸಾರಾಂಶ

ರೇಣುಕಾಸ್ವಾಮಿ ಪ್ರಕರಣದ ಆರೋಪಿ ಪವಿತ್ರ ಗೌಡಗೆ ಜೈಲಿನಲ್ಲಿ ವಿದೇಶಿ ಮಹಿಳಾ ಖೈದಿಗಳಿಂದ ಕಿರುಕುಳ ಎದುರಾಗಿದ್ದು, ಬ್ಯಾರಕ್ ಬದಲಾವಣೆಗೆ ಕೋರ್ಟ್‌ಗೆ ವರದಿ ಸಲ್ಲಿಕೆಯಾಗಿದೆ. ಇನ್ನೊಂದೆಡೆ, ಮಾಫಿ ಸಾಕ್ಷಿ ಹೇಳಿಕೆಗೆ ಸಂಬಂಧಿಸಿದಂತೆ ನಟ ದರ್ಶನ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.

ಬೆಂಗಳೂರು (ಅ.6): ರೇಣುಕಾಸ್ವಾಮಿ ಪ್ರಕರಣದ ಪ್ರಮುಖ ಆರೋಪಿಗಳಾದ ಪವಿತ್ರ ಗೌಡ ಹಾಗೂ ನಟ ದರ್ಶನ್‌ಗೆ ಸಂಬಂಧಿಸಿದಂತೆ ನಗರದ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ (CCH-59) ಪ್ರಮುಖ ಕಾನೂನು ಪ್ರಕ್ರಿಯೆಗಳು ಜರುಗಿವೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಎ-1 ಆರೋಪಿ ಪವಿತ್ರ ಗೌಡಗೆ ವಿದೇಶಿ ಮೂಲದ (ನೈಜೀರಿಯನ್) ಮಹಿಳಾ ಖೈದಿಗಳಿಂದ ತೀವ್ರ ತೊಂದರೆ ಹಾಗೂ ಕಿರುಕುಳ ಎದುರಾಗಿದ್ದು, ಅವರ ಬ್ಯಾರಕ್ ಬದಲಾವಣೆ ಹಾಗೂ ಆರೋಗ್ಯ ವರದಿಯನ್ನು ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇನ್ನೊಂದೆಡೆ, ಮಾಫಿ ಸಾಕ್ಷಿ ಹೇಳಿಕೆಗೆ ಸಂಬಂಧಿಸಿದಂತೆ ಎ-2 ಆರೋಪಿ ನಟ ದರ್ಶನ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದೆ.

ನೈಜೀರಿಯನ್ ಮಹಿಳೆಯರ ಕಾಟ - ಕೋರ್ಟ್‌ಗೆ ಇ-ಮೇಲ್ ಮೂಲಕ ವರದಿ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರ ಗೌಡ ಅವರನ್ನು ಸದ್ಯ ಇರಿಸಲಾಗಿರುವ ಬ್ಯಾರಕ್‌ನಲ್ಲಿ ನೈಜೀರಿಯನ್ ಮೂಲದ ಮಹಿಳಾ ಪ್ರಜೆಗಳು (ಖೈದಿಗಳು) ಇದ್ದು, ಅವರಿಂದ ತಮಗೆ ತೀವ್ರ ಕಾಟ ಹಾಗೂ ಕಿರುಕುಳ ಎದುರಾಗುತ್ತಿದೆ ಎಂದು ಪವಿತ್ರ ಗೌಡ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಅವರ ಬ್ಯಾರಕ್ ಬದಲಾಯಿಸುವಂತೆ ಹಾಗೂ ಆರೋಗ್ಯ ತಪಾಸಣೆ ನಡೆಸುವಂತೆ ಮನವಿ ಮಾಡಲಾಗಿತ್ತು.

ಈ ಮನವಿಯನ್ನು ಪರಿಶೀಲಿಸಿದ್ದ ನ್ಯಾಯಾಲಯ ಜೈಲು ಆಡಳಿತದಿಂದ ವರದಿ ಕೇಳಿತ್ತು. ಅದರಂತೆ, ಜೈಲು ಅಧಿಕಾರಿಗಳು ಪವಿತ್ರ ಗೌಡ ಅವರ ಬ್ಯಾರಕ್ ಬದಲಾವಣೆ ಹಾಗೂ ಅವರ ಸದ್ಯದ ಆರೋಗ್ಯ ಪರಿಸ್ಥಿತಿಗೆ ಸಂಬಂಧಿಸಿದ ಪೂರ್ಣ ವರದಿಯನ್ನು ಇ-ಮೇಲ್ (E-mail) ಮುಖಾಂತರ 59ನೇ ಸಿಸಿಹೆಚ್ ಕೋರ್ಟ್‌ಗೆ ಸಲ್ಲಿಸಿದ್ದಾರೆ.

ಪ್ರದೋಷ್ ಅರ್ಜಿ ಹಾಗೂ ನಾಳೆಯ ತೀರ್ಪು

ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಷ್, ಜೈಲಿನಲ್ಲಿ ತಮ್ಮ ಕುಟುಂಬಸ್ಥರು ಹಾಗೂ ಬಂಧುಗಳ ಭೇಟಿಗೆ ಅವಕಾಶ ನೀಡುತ್ತಿಲ್ಲವೆಂದು ಕೋರ್ಟ್‌ಗೆ ದೂರು ನೀಡಿದ್ದರು. ಈ ಕುರಿತಾಗಿಯೂ ವರದಿ ನೀಡುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿತ್ತು. ಜೈಲಾಧಿಕಾರಿಗಳು ಈ ಸಂಬಂಧವೂ ವಿವರಣೆ ನೀಡಿದ್ದಾರೆ. ಪವಿತ್ರ ಗೌಡ ಅವರ ಬ್ಯಾರಕ್ ಬದಲಾವಣೆ ಹಾಗೂ ಪ್ರದೋಷ್ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಾಧಿಕಾರಿಗಳ ವರದಿಯನ್ನು ಪರಿಶೀಲಿಸಿರುವ ನ್ಯಾಯಾಲಯ, ಈ ಎರಡೂ ವಿಷಯಗಳ ಕುರಿತು ನಾಳೆ (ಅಕ್ಟೋಬರ್ 7) ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.

ನಟ ದರ್ಶನ್ ಸಲ್ಲಿಸಿದ್ದ 2 ಅರ್ಜಿಗಳನ್ನು ವಜಾಗೊಳಿಸಿದ ಕೋರ್ಟ್

ಪ್ರಕರಣದ ಮತ್ತೊಂದೆಡೆ, ನಟ ದರ್ಶನ್ ಸಲ್ಲಿಸಿದ್ದ ಎರಡು ಪ್ರಮುಖ ಅರ್ಜಿಗಳನ್ನು 59ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತ ಎಮ್. ಸಾಂಬ್ರಾಣಿ ಅವರು ವಜಾಗೊಳಿಸಿದ್ದಾರೆ. ಭಾರತೀಯ ಸಾಕ್ಷ್ಯ ಕಾಯ್ದೆ (Indian Evidence Act) ಸೆಕ್ಷನ್ 137 ಮತ್ತು 138 ರ ಅಡಿಯಲ್ಲಿ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

ದರ್ಶನ್ ವಕೀಲರ ವಾದವೇನಿತ್ತು?: ಪ್ರಕರಣದ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ನೀಡಿದ್ದ ಹೇಳಿಕೆ ದಾಖಲಿಸುವ ಪ್ರಕ್ರಿಯೆಯಲ್ಲಿ, "ನಿನ್ನೆ ಹೇಳಲು ಮರೆತಿದ್ದನ್ನು ಇವತ್ತು ಸೇರಿಸುತ್ತಿದ್ದೇನೆ" ಎಂದು ಎರಡನೇ ದಿನ ಹೆಚ್ಚುವರಿ ಹೇಳಿಕೆ ನೀಡಿದ್ದರು. ಮಾಫಿ ಸಾಕ್ಷಿ ದಾಖಲಿಸಿಕೊಳ್ಳುವಾಗ ಈ ರೀತಿ 'ನಿನ್ನೆ ಮರೆತಿದ್ದನ್ನು ಇವತ್ತು ಸೇರಿಸಲು' ಅವಕಾಶ ನೀಡಬಾರದು ಮತ್ತು ಆ ಹೆಚ್ಚುವರಿ ಹೇಳಿಕೆಯನ್ನು ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಡಿಲೀಟ್ (ರದ್ದು) ಮಾಡಬೇಕು ಎಂದು ದರ್ಶನ್ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ಆದರೆ, ಈ ಅರ್ಜಿಗಳ ಕುರಿತು ದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಸುಜಾತ ಎಮ್. ಸಾಂಬ್ರಾಣಿ ಅವರು, ದರ್ಶನ್ ಪರ ವಕೀಲರ ವಾದವನ್ನು ಪುರಸ್ಕರಿಸದೆ, ದರ್ಶನ್ ಸಲ್ಲಿಸಿದ್ದ ಎರಡೂ ಅರ್ಜಿಗಳನ್ನು ಸಂಪೂರ್ಣವಾಗಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದರಿಂದ ದರ್ಶನ್ ಕಾನೂನು ಹೋರಾಟಕ್ಕೆ ಮತ್ತೊಂದು ಹಿನ್ನಡೆಯಾದಂತಾಗಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಪಾಲಿಕೆಗೆ ಒಂದು ಹತ್ತು ಕೆಜಿ ಡಾಂಬಾರು ಹಾಕೋವಷ್ಟು ಗತಿಯಿಲ್ವಾ? ಔಟರ್‌ ರಿಂಗ್‌ ರೋಡ್‌ನ ವೈರಲ್‌ ಗುಂಡಿಗೆ ಮಣ್ಣು ತುಂಬಿದ GBA
KPSC; ಭ್ರಷ್ಟರು ಜೈಲು ಸೇರಿದ್ರು, ಸರಿ...! ವಯಸ್ಸು ಮೀರಿ ಬೀದಿಗೆ ಬಿದ್ದ ಅಭ್ಯರ್ಥಿಗಳ ಭವಿಷ್ಯಕ್ಕೆ ಹೊಣೆಯಾರು?