ದರ್ಶನ್​​ ಅಂಡ್​ ಗ್ಯಾಂಗ್​​ ನಿಂದ ರೇಣುಕಾಸ್ವಾಮಿ ಪ್ರಕರಣ: ಜಗದೀಶ್, ಅನುಕುಮಾರ್, ಪವಿತ್ರಾ ಅರ್ಜಿ ಆದೇಶ ಮುಂದೂಡಿಕೆ

Published : Oct 17, 2026, 01:39 PM IST
Pavithra Gowda

ಸಾರಾಂಶ

ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಾದ ಜಗದೀಶ್, ಅನುಕುಮಾರ್ ಜಾಮೀನು ಅರ್ಜಿ ಹಾಗೂ ಪವಿತ್ರಾ ಗೌಡ ಅವರ ವಿಶೇಷ ಅರ್ಜಿಯ ತೀರ್ಪನ್ನು ನ್ಯಾಯಾಲಯ ಅಕ್ಟೋಬರ್ 23ಕ್ಕೆ ಮುಂದೂಡಿದೆ. ಅಪಹರಣ ಮತ್ತು ಶರಣಾಗತಿಯ ಹಿನ್ನೆಲೆ ಹೊಂದಿರುವ ಈ ಆರೋಪಿಗಳ ಭವಿಷ್ಯ ಅಂದೇ ನಿರ್ಧಾರವಾಗಲಿದೆ.

ಬೆಂಗಳೂರು: ಇಡೀ ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ನಟ ದರ್ಶನ್ ಹಾಗೂ ಡಿ ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಕೊ*&ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯಲ್ಲಿ ಪ್ರಮುಖ ಬೆಳವಣಿಗೆಯಾಗಿದೆ. ಪ್ರಕರಣದ ಆರೋಪಿಗಳಾದ ಜಗದೀಶ್ ಮತ್ತು ಅನುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಗಳ ಮೇಲಿನ ತೀರ್ಪು ಹಾಗೂ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ನಗರದ ನ್ಯಾಯಾಲಯವು ಅಕ್ಟೋಬರ್ 23ಕ್ಕೆ ಮುಂದೂಡಿದೆ.

ಅಕ್ಟೋಬರ್ 23ಕ್ಕೆ ತೀರ್ಪು ಕಾಯ್ದಿರಿಸಿದ ಕೋರ್ಟ್

ಬೆಂಗಳೂರಿನ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಗಳ ವಿಚಾರಣೆ ನಡೆಯಿತು. ಆರೋಪಿಗಳ ಪರ ವಕೀಲರು ಹಾಗೂ ಸರ್ಕಾರಿ ಅಭಿಯೋಜಕರ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಅಂತಿಮ ಆದೇಶವನ್ನು ಅಕ್ಟೋಬರ್ 23ರಂದು ಕಾಯ್ದಿರಿಸಿ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ಇದಕ್ಕೂ ಮುನ್ನ ಅಕ್ಟೋಬರ್ 17ರಂದು ಕಾಯ್ದಿರಿಸಿತ್ತು.

ಇದೇ ವೇಳೆ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪವಿತ್ರಾ ಗೌಡ ಅವರು ನ್ಯಾಯಾಧೀಶರು ಖುದ್ದಾಗಿ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು" ಎಂದು ಕೋರಿ ಸಲ್ಲಿಸಿದ್ದ ವಿಶೇಷ ಅರ್ಜಿಯ ಮೇಲಿನ ಆದೇಶವನ್ನೂ ಸಹ ನ್ಯಾಯಾಲಯವು ಅಕ್ಟೋಬರ್ 23ಕ್ಕೇ ಕಾಯ್ದಿರಿಸಿದೆ.

ಯಾರೀತ ಜಗದೀಶ್ ಮತ್ತು ಅನುಕುಮಾರ್?

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ಈ ಇಬ್ಬರೂ ಆರೋಪಿಗಳ ಪಾತ್ರ ಪ್ರಮುಖವಾಗಿತ್ತು ಎಂದು ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. 7ನೇ ಆರೋಪಿ ಅನುಕುಮಾರ್ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಿಸಿಕೊಂಡು ಬಂದ ತಂಡದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಎಂಬ ಗಂಭೀರ ಆರೋಪವಿದೆ.

ಚಿತ್ರದುರ್ಗದಲ್ಲಿ ಆಟೋ ಚಾಲಕನಾಗಿದ್ದ ಜಗದೀಶ್, ಕೃತ್ಯ ನಡೆದ ನಂತರ ಮತ್ತೊಬ್ಬ ಆರೋಪಿ ಜೊತೆಗೂಡಿ ಚಿತ್ರದುರ್ಗದ ಡಿವೈಎಸ್ಪಿ ಅವರ ಎದುರು ಶರಣಾಗಿದ್ದ. ತದನಂತರ ಬೆಂಗಳೂರು ಪೊಲೀಸರು ಇಬ್ಬರನ್ನೂ ತಮ್ಮ ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಆರೋಪಿಗಳು ಜೈಲಿನಲ್ಲಿ ಕಾಲ ಕಳೆಯುತ್ತಿದ್ದು, ಜಾಮೀನಿಗಾಗಿ ನಿರಂತರ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದೀಗ 59ನೇ ಸಿಟಿ ಸಿವಿಲ್ ಕೋರ್ಟ್ ಅಕ್ಟೋಬರ್ 23ರಂದು ನೀಡಲಿರುವ ಆದೇಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

PREV
Read more Articles on
click me!

Recommended Stories

Bengaluru: ಮನೆಯಿಂದ ಹೊರಬರುವ ಮುನ್ನ ಹುಷಾರ್; ಈ ಮಾರ್ಗದಲ್ಲಿ ಸಂಚಾರ ಬಂದ್, ಪಾರ್ಕಿಂಗ್ ಬ್ಯಾನ್!
ಎಐ ಆಧಾರಿತ ಉದ್ಯೋಗ ಕೌಶಲ್ಯ: ಬೆಂಗಳೂರಿನಲ್ಲಿ 'ಪ್ರಾಜೆಕ್ಟ್ ಹೆಲಿಕ್ಸ್' ಅನಾವರಣಗೊಳಿಸಿದ ಕೋರ್ಸೆರಾ, ಐಐಎಂ-ಬಿ ಜೊತೆ ಒಪ್ಪಂದ