ಇಳಿದ ಮಳೆ, ಇಳಿಯದ ನೆರೆ : ಮಳೆ ದುರಂತಕ್ಕೆ 4 ಬಲಿ ಮಲೆನಾಡಿನ ಹಲವೆಡೆ ಭೂ, ರಸ್ತೆ ಕುಸಿತ

By Kannadaprabha News  |  First Published Jul 16, 2022, 1:19 AM IST

ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ ತೀವ್ರತೆ ಇಳಿಮುಖವಾಗಿದ್ದರೂ ಮಳೆ ಸಂಬಂಧಿ ಅನಾಹುತಗಳು ಮುಂದುವರಿದಿದ್ದು ಪ್ರತ್ಯೇಕ ಘಟನೆಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ನಾರಾಯಣಪುರ, ತುಂಗಭದ್ರಾ, ಕದ್ರಾ ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ನದಿ ತೀರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.


ಕನ್ನಡಪ್ರಭ ವಾರ್ತೆ ಬೆಂಗಳೂರು

ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ ತೀವ್ರತೆ ಇಳಿಮುಖವಾಗಿದ್ದರೂ ಮಳೆ ಸಂಬಂಧಿ ಅನಾಹುತಗಳು ಮುಂದುವರಿದಿದ್ದು ಪ್ರತ್ಯೇಕ ಘಟನೆಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ನಾರಾಯಣಪುರ, ತುಂಗಭದ್ರಾ, ಕದ್ರಾ ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ನದಿ ತೀರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಮಲೆನಾಡು ಭಾಗದಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿರುವುದರಿಂದ ರಸ್ತೆಕುಸಿತ, ಭೂಕುಸಿತಗಳಾಗುತ್ತಿದ್ದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನ ದೋಣಿಗಲ್‌ನಲ್ಲಿ ಮತ್ತೆ ರಸ್ತೆ ಕುಸಿದಿರುವುದಿರಿಂದ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ತಾಲೂಕುಗಳ ಶಾಲೆ, ಬೆಳಗಾವಿ ಜಿಲ್ಲೆಯ ಬೆಳಗಾವಿ ನಗರ ಮತ್ತು ತಾಲೂಕಿನ ಶಾಲೆಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.

Tap to resize

Latest Videos

ರಾಜ್ಯದ ಬಹುತೇಕ ನದಿಗಳು ಉಕ್ಕಿಹರಿಯುತ್ತಿದ್ದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ದೇವಸ್ಥಾನದ ಅರ್ಚಕರೊಬ್ಬರು ತುಂಗಭದ್ರಾ ನದಿ ಪಾಲಾಗಿದ್ದರೆ, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ತಾಳೇಸರ ಹೊಳೆಯಲ್ಲಿ ರೈತರೊಬ್ಬರು ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಇನ್ನು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಸತತ ಮಳೆಗೆ ದನದ ಕೊಟ್ಟಿಗೆ ಕುಸಿದು ಬಾಲಕನೊಬ್ಬ ಮೃತಪಟ್ಟಿದ್ದರೆ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಗೋಡೆ ಕುಸಿದು ಯುವಕನೊಬ್ಬ ಮೃತಪಟ್ಟಿದ್ದಾರೆ. ಸೊರಬದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಮನೆಯೊಂದರ ಮೇಲೆ ತೆಂಗಿನ ಮರ ಮತ್ತು ಹುಣಸೆ ಮರ ಬಿದ್ದು ತಾಯಿ-ಮಗನಿಗೆ ತೀವ್ರ ಗಾಯಗಳಾಗಿವೆ.

ಗುಡ್ಡ ಕುಸಿದು ಮನೆ ಸೇರಿದ ಭಾರಿ ಪ್ರಮಾಣದ ಮಣ್ಣು: ಮಳೆಗೆ ತತ್ತರಿಸಿದ ಮಲೆನಾಡು

ಅಲ್ಲಲ್ಲಿ ಪ್ರವಾಹ ಪರಿಸ್ಥಿತಿ: ಕೊಪ್ಪಳ ಜಿಲ್ಲೆಯ ತುಂಗಭದ್ರಾ ಜಲಾಶಯದಿಂದ 1.52 ಲಕ್ಷ ಕ್ಯುಸೆಕ್‌ ನೀರು ಹೊರ ಬಿಟ್ಟಿದ್ದರಿಂದ ಹಂಪಿಯ ಕೋದಂಡರಾಮ ದೇಗುಲ, ಚಕ್ರತೀರ್ಥ ಬಳಿಯ ಸ್ಮಾರಕ, ಪುರಂದರ ದಾಸರ ಮಂಟಪ, ಕರ್ಮ ಮಂಟಪಗಳು ಜಲಾವೃತಗೊಂಡಿವೆ.  ಇನ್ನು ಮಹಾರಾಷ್ಟ್ರದ ಪಶ್ಚಿಮಘಟ್ಟಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದ ಮಳೆ, ಶುಕ್ರವಾರ ಸ್ವಲ್ಪ ಮಟ್ಟಿಗೆ ಸಡಿಲವಾಗಿದೆ. ಆದರೂ ಚಿಕ್ಕೋಡಿ ವ್ಯಾಪ್ತಿಯ 9 ಸೇತುವೆಗಳು ಮುಳುಗಡೆ ಸ್ಥಿತಿಯಲ್ಲೇ ಇವೆ. ಕೃಷ್ಣಾನದಿಗೆ 1,19,775 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು ಅಲಮಟ್ಟಿಜಲಾಶಯದಿಂದ 1.25 ಲಕ್ಷ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಆಲಮಟ್ಟಿ, ಬಸವಸಾಗರ ಹಾಗೂ ತುಂಗಭದ್ರಾ ಜಲಾಶಯಗಳಿಂದ ಭಾರೀ ಪ್ರಮಾಣದ ನೀರು ಬರಿಬಿಟ್ಟಿರುವ ಪರಿಣಾಮ ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಯ ನದಿತೀರದ ಗ್ರಾಮಗಳಲ್ಲಿ ಪ್ರವಾಹಾತಂಕ ಸೃಷ್ಟಿಯಾಗಿದೆ. ಲಿಂಗಸುಗೂರು ಹಾಗೂ ದೇವದುರ್ಗ ತಾಲೂಕಿನ ನದಿ ಪಕ್ಕದ ಜಮೀನುಗಳಲ್ಲಿ ರೈತರು ಇಟ್ಟಿದ್ದ ಪಂಪ್‌ಸೆಟ್‌ಗಳು ಮುಳುಗಿವೆ.

ಅನಿರ್ದಿಷ್ಠಾವಧಿವರೆಗೆ ಶಿರಾಡಿ ಘಾಟ್ ರಸ್ತೆ ಬಂದ್ : ಹಾಸನ ಎಸ್ಪಿ ಹರಿರಾಂ ಶಂಕರ್ ಆದೇಶ

ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾ ಜಲಾಶಯದಿಂದ 61 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡುತ್ತಿದ್ದು ಶಿವಮೊಗ್ಗದ ನಗರದ ಕೋರ್ಪಲಯ್ಯನ ಛತ್ರದ ಬಳಿಯ ಮಂಟಪ ಮುಳುಗಿದೆ. ಭದ್ರಾ ಜಲಾಶಯದಿಂದ 33 ಸಾವಿರ ಕ್ಯುಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದರಿಂದ ಭದ್ರಾವತಿಯ ಹೊಸ ಸೇತುವೆ ಮೇಲೆ ನೀರು ಹರಿದಿದ್ದು, ತಗ್ಗು ಪ್ರದೇಶಗಳಿಗ ನೀರು ನುಗ್ಗಿ 32 ಮನೆಗಳು ಜಲಾವೃತವಾಗಿವೆ. ಸೊರಬದಲ್ಲಿ ವರದಾ ನದಿ ತುಂಬಿ ಹರಿಯುತ್ತಿರುವುದರಿಂದ 8 ಗ್ರಾಮಗಳು ಹಾಗೂ ದಂಡಾವತಿ ನದಿ ಪಾತ್ರದ 4 ಗ್ರಾಮಗಳ ಸುಮಾರು 600 ಎಕರೆ ಕೃಷಿ ಭೂಮಿಗಳು ಜಲಾವೃತವಾಗಿವೆ. ಸಾಗರದಲ್ಲಿಯೂ ನೂರಾರು ಎಕರೆ ಭೂಮಿ ಜಲಾವೃತಗೊಂಡಿದೆ. ಉತ್ತರ ಕನ್ನಡದಲ್ಲಿ ಕಾಳಿನದಿಗೆ ಅಡ್ಡಲಾಗಿ ಕಟ್ಟಿರುವ ಕದ್ರಾ ಜಲಾಶಯದಿಂದ 40 ಸಾವಿರ ಕ್ಯುಸೆಕ್‌ ನೀರು ಬಿಟ್ಟಿದ್ದರಿಂದ 7 ಗ್ರಾಮಗಳಲ್ಲಿ ಪ್ರವಾಹ ಆತಂಕ ಉಂಟಾಗಿದೆ.

ರಸ್ತೆ ಕುಸಿತ: ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆ ಇಳಿಕೆಯಾಗಿದ್ದರೂ ಅಲ್ಲಲ್ಲಿ ಭೂಕುಸಿತವಾಗುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಸಂಚಕಾರ ಒದಗಿದೆ. ಭಾರಿ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ -ಆಗುಂಬೆ ರಸ್ತೆಯ ನೇರಳಕುಡಿಗೆ ಬಳಿ ರಸ್ತೆ ಕುಸಿದು ಬೃಹತ್‌ ಕಂದಕವಾಗಿದ್ದು ವಾಹನ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಇನ್ನು ಕೊಡಗಿನ ಬ್ರಹ್ಮಗಿರಿ ತಪ್ಪಲಿನಲ್ಲಿ ಗುರುವಾರ ರಾತ್ರಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಕಾವೇರಿ, ಕನ್ನಿಕೆ, ಸುಜೋತಿ ನದಿಗಳ ನೀರಿನ ಮಟ್ಟಏರಿಕೆಯಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿದೆ. ವಿರಾಜಪೇಟೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅಯ್ಯಪ್ಪ ಬೆಟ್ಟದ ತಪ್ಪಲಿನ 80 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

click me!